ಶಿರಸಿ: ಬಹುಭಾಷಾ ವಿದ್ವಾಂಸ, ಯಕ್ಷಗಾನದ ಶ್ರೇಷ್ಠ ಕಲಾವಿದ ಪ್ರೋ.ಎಂ.ಎ.ಹೆಗಡೆ ಜೀವನ ಗಾಥೆ ಕುರಿತ ಸಾಕ್ಷ್ಯಚಿತ್ರ ನಿರ್ಮಾಣ ಮಾಡುವ ಮೂಲಕ ಮುಂದಿನ ತಲೆಮಾರಿಗೂ ಅವರ ಜೀವನ ಸಾಧನೆ ದಾಟಿಸಬೇಕು ಎಂದು ಸಂಯುಕ್ತ ಕರ್ನಾಟಕದ ಕಾರ್ಯನಿರ್ವಾಹಕ ಸಂಪಾದಕ, ಲೋಕ ಶಿಕ್ಷಣ ಟ್ರಸ್ಟ ಸಿಇಓ ಮೋಹನ್ ಹೆಗಡೆ ಹೇಳಿದರು.
ಅವರು ಶುಕ್ರವಾರ ಸ್ವರ್ಣವಲ್ಲಿ ಸುಧರ್ಮಾ ಸಭಾಂಗಣದಲ್ಲಿ ದಿ.ಎಂ.ಎ.ಹೆಗಡೆ ಅವರ ಸಂಸ್ಮರಣ ನಿಮಿತ್ತ ಯಕ್ಷ ಶಾಲ್ಮಲಾ ಹಾಗೂ ದಿ.ಎಂ.ಎ.ಹೆಗಡೆ ಸಂಸ್ಮರಣ ಸಮಿತಿ ಜಂಟಿಯಾಗಿ ಹಮ್ಮಿಕೊಂಡ ಸರಣಿ ಕಾರ್ಯಕ್ರಮಗಳ ಪ್ರಾರಂಭೋತ್ಸವದಲ್ಲಿ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು. ಈ ಸಾಕ್ಷ್ಯ ಚಿತ್ರವು ಉಭಯ ಭಾಷಾ ಪ್ರೇಮಿಗಳಿಗೆ, ಯಕ್ಷಗಾನ ಆಸಕ್ತರಿಗೆ, ಅಧ್ಯಯನಕಾರರಿಗೆ ಅನುಕೂಲ ಆಗಬೇಕು. ಇದರ ಜೊತೆಗೆ ಎಂ.ಎ.ಹೆಗಡೆ ಅವರ ಹೆಸರಿನಲ್ಲಿ ವಿಶ್ವ ವಿದ್ಯಾಲಯಗಳಲ್ಲಿ ಅಧ್ಯಯನ ಪೀಠ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.
ನಾಡಿನ ಶ್ರೇಷ್ಠ ಕಲಾವಿದ, ಹೆಮ್ಮೆಯ ಪ್ರಾಧ್ಯಾಪಕ ಎಂ.ಎ.ಹೆಗಡೆ ಅವರಾಗಿದ್ದರು. ಅವರು ಯಕ್ಷಗಾನ ಕ್ಷೇತ್ರ, ಕನ್ನಡ, ಸಂಸ್ಕೃತ ಕ್ಷೇತ್ರಕ್ಕೆ ಅನೇಕ ಅಚ್ಚಳಿಯದ ಕೊಡುಗೆ ನೀಡಿದ್ದಾರೆ. ಪತ್ರಿಕಾ ಕ್ಷೇತ್ರವೂ ಭಾಷೆ ಬಳಕೆಯ ಕುರಿತು ಅವರ ಸಲಹೆ ಪಡೆದಿದ್ದೇವೆ ಎಂದರು. ಜಿ.ವೆಂಕಟಸುಬ್ಬಯ್ಯ ಅವರಂಥವರೂ ಎಂ.ಎ.ಅವರ ಕನ್ನಡ ಪಾಂಡಿತ್ಯ ಅಚ್ಚಳಿಯದೇ ಇರುವಂಥದ್ದು ಎಂದು ಶ್ಲಾಘಿಸಿದ್ದಾರೆ. ಹೆಗಡೆ ಅವರ ವಾಕ್ ಚಾತುರ್ಯ, ಅವರು ಗಮನ ಸೆಳೆಯುವ ರೀತಿ ಮೆಚ್ಚುಗೆ ಆಗುತ್ತಿದ್ದವು. ಅಕಾಡೆಮಿಗೆ ಆರ್ಥಿಕ ಬಿಕ್ಕಟ್ಟು, ಅಧಿಕಾರ ಶಾಹಿಯಿಂದ ಕೆಲಸ ಮಾಡಲು ಹೆಗಡೆ ಅವರ ವೇಗಕ್ಕೆ ಕೂಡಿರಲಿಲ್ಲ. ಕೊರೋನಾ ಕಾಲದಲ್ಲೂ ಎಂ.ಎ.ಹೆಗಡೆ ಅವರು ಸಕ್ರೀಯವಾಗಿ ಕೆಲಸ ಮಾಡಿ ಕಲಾವಿದರಿಗೆ ಧೈರ್ಯ ತುಂಬಿದ್ದಾರೆ ಎಂದರು.
ಸಾನ್ನಿಧ್ಯ ನೀಡಿದ್ದ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ಆಶೀರ್ವಚನ ನುಡಿದು, ಎಂ.ಎ.ಹೆಗಡೆ ಅವರು ಸಂಸ್ಕೃತ, ಕನ್ನಡ ಸಾಹಿತ್ಯಕ್ಕೂ ಯಕ್ಷಗಾನಕ್ಕೂ ಅನುಪಮ ಕೊಡುಗೆ ನೀಡಿದ್ದಾರೆ. ಯಕ್ಷಗಾನಕ್ಕೆ ಅನೇಕ ಉತ್ತಮ ಭವಿಷ್ಯ ನೀಡಲು ಕೆಲಸ ಮಾಡಿದವರು. ಯಕ್ಷಶಾಲ್ಮಲಾ ಎರಡು ದಶಕಗಳ ಕಾಲ ಉತ್ತಮ ಮೌಲ್ಯಯುತ ಕೆಲಸ ಮಾಡಲು ಎಂ.ಎ.ಹೆಗಡೆ ಅವರೂ ಕಾರಣ. ಯಕ್ಷ ಶಾಲ್ಮಲಾಕ್ಕೆ ಮುಂದೆ ಏನು ಎಂಬುದು ಕಷ್ಟವಾಗಿದೆ. ಇಂದು ಎಂ.ಎ.ಹೆಗಡೆ ಅವರ ಪುಟ ಮುಚ್ಚಿದೆ. ಆದರೆ ಅದನ್ನು ದಾಖಲಿಸುವ ಕಾರ್ಯ ಆಗಬೇಕು. ಸರಣಿ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಹಕಾರ ಬೇಕಿದೆ ಎಂದರು.
ಯಕ್ಷಗಾನದ ಮೂಲಕ ಸಾಂಸ್ಕ್ರತಿಕ, ಸಾತ್ವಿಕ ಪ್ರೇಕ್ಷಕರ ವೃಂದ ಸಾಧ್ಯವಾಗುತ್ತದೆ. ಯಕ್ಷಗಾನದಲ್ಲಿ ಹಾಗಿರದಿದ್ದರೆ ಪ್ರೇಕ್ಷಕರ ಮನಸ್ಸೂ ರಾಜಸ್ವ ಆಗುತ್ತದೆ. ಪುರಾಣದಿಂದ ಹೊರಗೆ ಬಂದು ಯಕ್ಷಗಾನ ಮಾಡುವದಕ್ಕಿಂತ ಪೌರಾಣಿಕವಾಗಿ ಇಟ್ಟು ಕೊಳ್ಳಬೇಕು ಎಂಬುದು ಪ್ರೇಕ್ಷಕರದ್ದು. ಈ ಜವಬ್ದಾರಿ ಯಕ್ಷಗಾನ ರಂಗದ್ದು ಎಂದೂ ಹೇಳಿದರು.
ಸ್ವರ್ಣವಲ್ಲೀ ಯಕ್ಷಶಾಲ್ಮಲಾದ ಅಧ್ಯಕ್ಷ ಆರ್.ಎಸ್.ಹೆಗಡೆ ಭೈರುಂಬೆ ಸ್ವಾಗತಿಸಿದರು. ಪದ್ಮನಾಭ ಅರೆಕಟ್ಟ, ಕಾರ್ಯದರ್ಶಿ ನಾಗರಾಜ್ ಜೋಶಿ ಸೋಂದಾ ಪ್ರಾಸ್ತಾವಿಕ ಮಾತನಾಡಿದರು.ಜಿ.ಜಿ.ಹೆಗಡೆ ಕನೇನಳ್ಳಿ ವಂದಿಸಿದರು.
ಎಂ.ಎ.ಹೆಗಡೆ ಅವರ ನೆನಪಿನಲ್ಲಿ ನಾಡಿನ ಹಲವಡೆ ಸರಣಿ ಕಾರ್ಯಕ್ರಮ ಸಂಸ್ಮರಣ ಸಮಿತಿ ಮೂಲಕ ಆಯೋಜಿಸುತ್ತಿದ್ದೇವೆ. – ನಾಗರಾಜ್ ಜೋಶಿ, ಯಕ್ಷ ಶಾಲ್ಮಲಾ
ಯಕ್ಷಗಾನದ ಶಿಸ್ತು ದಾಟುವ ಕಲಾವಿದರನ್ನು ಎಂ.ಎ.ಹೆಗಡೆ ಅವರು ಒಪ್ಪುತ್ತಿರಲಿಲ್ಲ. ಅಂಥ ಶಿಸ್ತು ಎಲ್ಲರೂ ಬೆಳಸಿಕೊಳ್ಳವೇಕು. – ಸ್ವರ್ಣವಲ್ಲೀ ಶ್ರೀ