ಜೊಯಿಡಾ: ಸಮಸ್ಯೆ ಅರಿಯದೆ ಕರೆಂಟ್ ಬಿಲ್ ಕಟ್ಟದ ಮೀಟರ್ ಸಂಪರ್ಕ ಕಡಿತ ಮಾಡುತ್ತಿರುವ ಹೆಸ್ಕಾಂ ಇಲಾಖೆಯ ಕ್ರಮದಿಂದ ಗ್ರಾಮೀಣ ಜನತೆ ಸಂಕಷ್ಟ ಎದುರಿಸುವಂತಾಗಿದೆ.
ಜೊಯಿಡಾ ಹೆಸ್ಕಾಂ ವಿಭಾಗಕ್ಕೆ ಬರುವ ಗುಂದ, ಉಳವಿ, ಕುಂಬಾರವಾಡ ಸೇರಿದಂತೆ ಹಲವು ಹಳ್ಳಿಗಳಲ್ಲಿ ತಿಂಗಳ ವಿದ್ಯುತ್ ಪಾವತಿಸದ ಮನೆಗಳ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗುತ್ತಿದೆ. ಯಾವುದೇ ಮಾಹಿತಿ ನೀಡದೆ ಬರುವ ಹೆಸ್ಕಾಂ ಇಲಾಖೆ ಅಧಿಕಾರಿಗಳು ನಿಯಮದ ಸಬೂಬು ಹೇಳಿ ಸಂಪರ್ಕ ಕಡಿತ ಮಾಡುತ್ತಿದ್ದಾರೆ. ಇದರಿಂದ ಜನ ಸಂಕಷ್ಟ ಎದುರಿಸುವಂತಾಗಿದೆ.
ಜೊಯಿಡಾ ಭಾಗದ ಹಳ್ಳಿಗಳು ಕುಗ್ರಾಮವಾಗಿದ್ದು, ಅಲ್ಲಿ ಸರಿಯಾದ ರಸ್ತೆ ಸಂಪರ್ಕ ಇಲ್ಲ. ಮಳೆಗಾಲದಲ್ಲಿ ನಗರಕ್ಕೆ ಬರಲು ಅಸಾಧ್ಯ ಎನ್ನುವ ಸ್ಥಿತಿ ಇದೆ. ರೈತಾಬಿ ಕೆಲಸವನ್ನೇ ನಂಬಿದ ಕುಟುಂಬಗಳು ಇಲ್ಲಿದ್ದು, ರೈತರು ಅಪರೂಪಕ್ಕೆ ನಗರಕ್ಕೆ ಬರುವುದು ರೂಢಿ. ಹೀಗಾಗಿ ಒಂದೆರಡು ತಿಂಗಳು ವಿದ್ಯುತ್ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ.
ಇದಲ್ಲದೇ ಹೆಚ್ಚಿನ ಕುಟುಂಬಗಳು ಮಳೆಗಾಲದಲ್ಲಿ ಇತರ ಊರಿಗೆ ಕೆಲಸಕ್ಕೆ ತೆರಳುವುದುಂಟು. ಅಂತಹ ಕುಟುಂಬಕ್ಕೆ ನಿಗಧಿತ ಅವಧಿಯಲ್ಲಿ ಬಿಲ್ ಪಾವತಿಸಲು ಸಾಧ್ಯವಾಗುತ್ತಿಲ್ಲ. ಇನ್ನು ಕೂಲಿ ಕಾರ್ಮಿಕರು ಕೆಲಸ ಇಲ್ಲದೇ ಹಣದ ಅಭಾವ ಎದುರಿಸಿದ್ದೂ ಇದೆ. ಇದಲ್ಲದೇ ಈಭಾಗದಲ್ಲಿ ಇಂಟರ್ ನೆಟ್ ಸಂಪರ್ಕ ತೀರಾ ಕಡಿಮೆ. ಹೀಗಾಗಿ ಆನ್ ಲೈನ್ ಪೇಮೆಂಟ್ ಸಹಾ ಕಷ್ಟಸಾಧ್ಯವಾಗಿದೆ. ಕೇವಲ 300 ರೂ. ಬಿಲ್ ಪಾವತಿಗೆ 500 ಖರ್ಚುಮಾಡಿ ದಾಂಡೇಲಿಗೆ ತೆರಳಿ ಬಿಲ್ ಪಾವತಿಸುವ ಅನಿವಾರ್ಯತೆ ಸ್ಥಳೀಯರದ್ದಾಗಿದೆ.
ಆದರೆ ಈ ಸಮಸ್ಯೆಗಳನ್ನು ಅರಿತೂ ಹೆಸ್ಕಾಂ ಅಧಿಕಾರಿಗಳು ಕೇವಲ ಕಾನೂನು ಪಾಲನೆ ನೆಪ ಹೇಳಿ ಜನಸಾಮಾನ್ಯರಿಗೆ ಕಿರಿಕಿರಿ ನೀಡುತ್ತಿದ್ದಾರೆ. ಅಧಿಕಾರಿಗಳು ಸಂಪರ್ಕ ಕಡಿತ ಮಾಡುವ ಮೊದಲು ಬಿಲ್ ಪಾವತಿಸುವಂತೆ ತಿಳಿಸಲಿ. ಸ್ಥಳದಲ್ಲೇ ಬಿಲ್ ಪಾವತಿಸಲು ಅವಕಾಶ ನೀಡಲಿ. ಆಗಲೂ ಹಣ ನೀಡದಿದ್ದಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಕಡಿತಗೊಳಿಸಲಿ ಎಂದು ಸ್ಥಳಿಯರು ಅಭಿಪ್ರಾಯಿಸಿದ್ದಾರೆ.