ಶಿರಸಿ: ಇಂದಿನ ದಿನದಲ್ಲಿ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಪ್ರತಿ ಶಾಲೆಯಲ್ಲಿಯೂ ದೂರು ಪೆಟ್ಟಿಗೆ ಅವಶ್ಯವಾಗಿದೆ. ಅಥವಾ ಮಹಿಳಾ ಶಿಕ್ಷಕರನ್ನು ನೇಮಕ ಮಾಡಬೇಕು ಎಂದು ಎಸ್ ಪಿ ಡಾ. ಸುಮನ್ ಪೆನ್ನೇಕರ್ ಹೇಳಿದರು.
ನಗರದ ಲಯನ್ಸ್ ಶಾಲೆಯಲ್ಲಿ ಆಯೋಜಿಸಲಾಗಿದ್ದ ಮಕ್ಕಳ ಸುರಕ್ಷಾ ಕ್ರಮದ ಕುರಿತಂತೆ ಅವರು ಮಾತನಾಡಿದರು. ಉತ್ತಮ ಶಿಕ್ಷಣಕ್ಕಾಗಿ ದೂರ ದೂರಿಂದ ಬರುವ ಹೆಚ್ಚಾಗಿ ವಿದ್ಯಾರ್ಥಿನಿಯರ ಬಗ್ಗೆ ಮುತುವರ್ಜಿ ಅವಶ್ಯ. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಪಾಲಕರು ಪೋಷಕರ ಹೊರತಾಗಿ ಶಿಕ್ಷಕರು ಹೆಚ್ಚಿನ ಗಮನಕೊಡಬೇಕು. ಯಾವುದೇ ವಿದ್ಯಾರ್ಥಿಗೂ ತೊಂದರೆಯಾಗದ ರೀತಿಯಲ್ಲಿ ಜವಾಬ್ದಾರಿಗಳನ್ನು ನಿಭಾಯಿಸಬೇಕು.
ಅದರಲ್ಲೂ ಹೆಚ್ಚಾಗಿ ವಿದ್ಯಾರ್ಥಿನಿಯರ ಬಗ್ಗೆ ಹೆಚ್ಚಿನ ಗಮನ ಅಗತ್ಯ ಒಂದೇ ಒಂದು ವಿದ್ಯಾರ್ಥಿಗಳಿಗೂ ಸಮಸ್ಯೆಯಾಗಬಾರದು ಎನ್ನುವುದು ನಮ್ಮ ಉದ್ದೇಶ ಎಂದರು. ಸಿಪಿಐ ರಾಮಚಂದ್ರ ನಾಯಕ್ ಮಾತನಾಡಿ, ಮಕ್ಕಳು ಸರಿಯಾದ ಸಮಯಕ್ಕೆ ಮನೆ ತಲುಪುವರೋ ಇಲ್ಲವೊ ಎನ್ನುವ ಬಗ್ಗೆ ಗಮನವಿರಲಿ. ಏನಾದರೂ ಸಂದೇಹ ಇದ್ದೆ ನಮ್ಮ 112 ಗೆ ಕರೆ ಮಾಡಿ, ಮಕ್ಕಳೊಂದಿಗೆ ಯಾರಾದರೂ ಅಸಭ್ಯವಾಗಿ ನಡೆದುಕೊಂಡರೆ ತಕ್ಷಣ ನಮಗೆ ತಿಳಿಸಿ ಎಂದರು.
ಎಡಿಷನಲ್ ಎಸ್ಪಿ ಬದ್ರಿನಾಥ, ಡಿವೈಎಸ್ ಪಿ ರವಿ ನಾಯ್ಕ , ಯಲ್ಲಾಪುರ, ಮುಂಡಗೋಡ, ಸಿದ್ದಾಪುರ ಸಿಪಿಐಗಳು ಉಪಸ್ಥಿತರಿದ್ದರು.