ಮುಂಡಗೋಡ: ಕಳೆದ ಮೂರು ತಿಂಗಳ ಹಿಂದೆ ವೈನ್ ಶಾಪ್ ಕಳ್ಳತನ ಮಾಡಿ ಪರಾರಿಯಾದ ಅಂತರರಾಜ್ಯ ಕಳ್ಳನನ್ನು ಬಂಧಿಸುವಲ್ಲಿ ಮುಂಡಗೋಡ ಪೊಲೀಸರು ಗುರುವಾರ ಯಶಸ್ವಿಯಾಗಿದ್ದಾರೆ.
ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ನಾಸೀರ್ ಮದ್ನಳ್ಳಿ(33) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ 37 ಸಾವಿರದ 500 ರೂಪಾಯಿ ವಶಪಡಿಸಿಕೊಂಡಿದ್ದಾರೆ. ಆ.19ರ ನಸುಕಿನ ವೇಳೆ ಪಟ್ಟಣದ ತೃಪ್ತಿ ವೈನ್‌ಶಾಪ್‌ನ ಮೇಲಿನ ಶೀಟ್ ತೆಗೆದು ಕೆಳಗೆ ಇದ್ದ ಹಾಸುಗಲ್ಲು ಒಡೆದು ಒಳಗೆ ನುಗ್ಗಿ ಪ್ಲಾಸ್ಟಿಕ್ ಡಬ್ಬದಲ್ಲಿ ವ್ಯಾಪಾರ ಮಾಡಿ ಇಟ್ಟಿದ್ದ 1,93,500ರೂ. ಹಣವನ್ನು ಕಳ್ಳತನ ಮಾಡಿಕೊಂಡು ಹೋದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಮೇಲಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಎಸ್.ಎಸ್.ಸಿಮಾನಿ ನೇತೃತ್ವದಲ್ಲಿ ವಿಶೇ? ತಂಡ ರಚಿಸಿ ಖಚಿತ ಮಾಹಿತಿ ಮೇರೆಗೆ ಆರೋಪಿ ಪತ್ತೆ ಹಚ್ಚಿ ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ವೈನ್‌ಶಾಪ್ ಕಳ್ಳತನ ಮಾಡಿದ ಬಗ್ಗೆ ಒಪ್ಪಿಕೊಂಡಿದ್ದಾನೆ. ಇದನ್ನು ಹೊರತುಪಡಿಸಿ ಬ್ಯಾಡಗಿ, ಗದಗ, ಕೊಪ್ಪಳ, ಅಣ್ಣಿಗೇರಿ, ಕೊಣ್ಣೂರು, ಕೆರೂರು, ಲೋಕಾಪುರ, ಜಮಖಂಡಿ, ಅಂಕಲಿ, ಯರಗಟ್ಟಿ, ಘಟಪ್ರಭಾ, ಹುಬ್ಬಳ್ಳಿ, ಸವದತ್ತಿ, ಹರಪನಹಳ್ಳಿ, ಹಿರೇಕೇರೂರ, ಸಾಗರ, ಯಾದಗಿರಿ ಕಡೆಗಳಲ್ಲಿ ಈತನು ಬಾರ್‌ಗಳ ಕಳ್ಳತನ ಮಾಡಿದ ಬಗ್ಗೆ ಪೊಲೀಸ್ ತನಿಖೆಯಿಂದ ತಿಳಿದು ಬಂದಿದೆ. ಆರೋಪಿಯಿಂದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಟ್ಟು 37,500ರೂ. ಹಣ ಜಪ್ತಿ ಮಾಡಲಾಗಿದೆ ಎಂದು ಸಿಪಿಐ ಸಿದ್ದಪ್ಪ ಸಿಮಾನಿ ತಿಳಿಸಿದ್ದಾರೆ.
ಕಾರ್ಯಚರಣೆಯಲ್ಲಿದ್ದ ಸಿಪಿಐ ಸಿದ್ದಪ್ಪ ಸಿಮಾನಿ, ಪಿಎಸ್‌ಐ ಬಸವರಾಜ ಮಬನೂರ, ನಿಂಗಪ್ಪ ಜಕ್ಕಣ್ಣವರ, ಸಿಬ್ಬಂದಿ ಗಣಪತಿ ಹುನ್ನಳ್ಳಿ, ಅನ್ವರ್‌ಖಾನ್, ವಿನೋದಕುಮಾರ, ಅರುಣಕುಮಾರ ಬಾಗೇವಾಡಿ, ಶರತ ದೇವಳ, ತಿರುಪತಿ ಚೌಡಣ್ಣನವರ, ಮಹೇಶ ಹತ್ತಳ್ಳಿ ಹಾಗೂ ಯಲ್ಲಾಪುರ ಪೊಲೀಸ್ ಠಾಣೆಯ ಮಹಮ್ಮದ್ ಶಫಿ ಇವರಿಗೆ ಪೊಲೀಸ್ ಅಧೀಕ್ಷಕರು ಅಭಿನಂದಿಸಿ ಬಹುಮಾನ ಘೋಷಿಸಿದ್ದಾರೆ.