ಶಿರಸಿ: ಫೂಗಿ ಫಲ ಎಂದು ಕರೆಯಲ್ಪಡುವ ಅಡಿಕೆ ಎಲ್ಲಾ ಧಾರ್ಮಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳಲ್ಲಿ ಬಹಳ ಮಹತ್ವದ ಸ್ಥಾನ ಪಡೆದುಕೊಂಡಿದೆ.
ಚರಕ ಸಂಹಿತೆಯಲ್ಲಿ ಅಡಿಕೆಯನ್ನು ಆಯುರ್ವೇದ ಔಷಧವಾಗಿ ಬಳಕೆ ಮಾಡಿರುವ ಬಗ್ಗೆ ಇತಿಹಾಸವಿದೆ. ಬಹಳಷ್ಟು ಔಷಧೀಯ ಗುಣಗಳನ್ನು ಹೊಂದಿರುವ ಅಡಿಕೆಯು ಮಾನವನ ಮತ್ತು ಜಾನುವಾರುಗಳ ಅನೇಕ ರೋಗಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿದೆ. ಅಡಿಕೆಯು ಮಧುಮೇಹ, ಕೊಬ್ಬು ನಿಯಂತ್ರಕವಾಗಿ ಹಾಗೂ ಹಲವಾರು ರೋಗಕಾರಕ ಬ್ಯಾಕ್ಟೀರಿಯಾ, ಶಿಲೀಂದ್ರ, ಪ್ರೊಟೋಜೋವಾ ಪರಾವಲಂಬಿಗಳನ್ನು ನಾಶಪಡಿಸುವ ಗುಣವನ್ನು ಹೊಂದಿದೆ. ಅಡಿಕೆಯು ಹೆಚ್.ಐ.ವಿ.&ಎಡ್ಸ್, ಮಲೇರಿಯಾ ರೋಗದ ವಿರುದ್ಧ ಪ್ರತಿಬಂಧಕಕಾರಿ ಗುಣವನ್ನು ಹೊಂದಿದೆ. ಅಡಿಕೆಯು ಮಾನವನ ದೇಹದ ನೋವು ಕಡಿಮೆ ಮಾಡಲು ಮತ್ತು ಗಾಯವನ್ನು ಗುಣಪಡಿಸಲು ಸಹ ಸಹಾಯ ಮಾಡುತ್ತದೆ.
ಇಷ್ಟೆಲ್ಲಾ ಔಷಧೀಯ ಗುಣಗಳನ್ನು ಹೊಂದಿರುವ ಅಡಿಕೆಯ ಕುರಿತು ಜಾರ್ಖಂಡ್‌ನ ಸಂಸದ ನಿಶಿಕಾಂತ್ ದುಬೆಯವರು ಯಾವುದೇ ಸಾಬೀತಾದ ವೈಜ್ಞಾನಿಕ ಪುರಾವೆ ಇಲ್ಲದೆ ಅಡಿಕೆ ಮಾನವನ ಆರೋಗ್ಯಕ್ಕೆ ಹಾನಿಕಾರಕವೆಂದು ಹೇಳಿರುವುದು ಹಾಗೂ ಅಡಿಕೆ ಬಳಕೆಯನ್ನು ನಿಷೇಧಿಸುವಂತೆ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿರುವುದು ಜನರನ್ನು ಕೇವಲ ತಪ್ಪು ದಾರಿಗೆಳೆಯುವುದು ಮಾತ್ರವಲ್ಲದೆ ಅಡಕೆ ಬೆಳೆಗಾರರ ಭಾವನೆಗಳಿಗೆ ನೋವನ್ನುಂಟು ಮಾಡಿದೆ. ಈ ರೀತಿ ಯಾವುದೇ ಪುರಾವೆಗಳಿಲ್ಲದೆ ಅಡಿಕೆ ಬಗ್ಗೆ ಜನ ಸಾಮಾನ್ಯರಲ್ಲಿ ಆತಂಕವನ್ನು ಉಂಟು ಮಾಡುವ ಹೇಳಿಕೆ ನೀಡುವ ಬದಲು ಸರ್ಕಾರದ ವತಿಯಿಂದಲೇ ಅಡಿಕೆ ಬಗ್ಗೆ ಸಂಶೋಧನೆ ನಡೆಸಿ ನಿರ್ಧಾರಕ್ಕೆ ಬರುವುದು ಉತ್ತಮ.
ಕೇವಲ ಅಡಿಕೆ ಒಂದೇ ಬಳಕೆ ಮಾಡುವುದು ಕ್ಯಾನ್ಸರ್‌ಕಾರಕವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ. ದೇಶೀಯ &ಅಂತರಾಷ್ಟ್ರೀಯ ಸಕ್ಷಮ ಸಂಶೋಧನಾ ಸಂಸ್ಥೆಗಳು ನಡೆಸಿದ ಇತ್ತೀಚಿನ ಸಂಶೋಧನೆಗಳು ಸಕಾರಾತ್ಮಕ ಫಲಿತಾಂಶಗಳು ಸಾಬೀತು ಪಡಿಸಿವೆ. ಈ ಹಿಂದೆ 1974ರಲ್ಲಿ ಬೆಂಗಳೂರಿನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ ವಿಜ್ಞಾನಿಗಳು ಅಡಿಕೆಗೆ ಕ್ಯಾನ್ಸರ್ ರೋಗವನ್ನು ಗುಣಪಡಿಸುತ್ತದೆ ಎಂದು ವರದಿ ಮಾಡಿದ್ದಾರೆ. ಇದನ್ನು ಯು.ಎಸ್.ಎ. ಅಟ್ಲಾಂಟಾದ ಎಮೋರಿ ವಿಶ್ವವಿದ್ಯಾಲಯದ ವಿನ್‌ಶಿಪ್ ಕ್ಯಾನ್ಸರ್ ಇನ್‌ಸ್ಟಿಟ್ಯೂಟ್‌ನ ಪ್ರಖ್ಯಾತ ವಿಜ್ಞಾನಿಗಳ ಸಮೂಹದಿಂದ ಸಹ ದೃಢೀಕರಿಸಲಾಗಿದೆ. ಚೀನಾದಲ್ಲಿ ಈಗಾಗಲೇ 30ಕ್ಕೂ ಹೆಚ್ಚು ಔಷಧಗಳನ್ನು ಅಡಿಕೆ ಬಳಕೆ ಮಾಡಿ ತಯಾರಿಸಲಾಗುತ್ತದೆ. ಇದು ಈಗಲೂ ಸಹ ನಡೆಯುತ್ತಿದೆ ಎಂದು ಮೆಟೀರಿಯಾ ಮೆಡಿಕಾ ನಲ್ಲಿ ವರದಿಯಾಗಿರುತ್ತದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ವೆಂಬ ಬಗ್ಗೆ ಸಂಶೋಧನೆ ನಡೆಸಿ ಸರ್ವೋಚ್ಚ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ರಾಜ್ಯ ಸರ್ಕಾರದ ಮೂಲಕ ರಚನೆಯಾಗಿರುವ ’ಅಡಿಕೆ ಬೆಳೆಯ ಕಾರ್ಯಪಡೆ’ಯ(ಅರೆಕಾಟಾಸ್ಕ್ ಫೋರ್ಸ್) ವತಿಯಿಂದ ಪ್ರತಿಷ್ಠಿತ ಸಂಶೋಧನಾ ಸಂಸ್ಥೆಯಾದ ಎಮ್.ಎಸ್. ರಾಮಯ್ಯ ಯುನಿವರ್ಸಿಟಿ ಬೆಂಗಳೂರು ಇವರಿಂದ ಮಾಡಿಸಲಾಗುತ್ತಿದೆ.
ಆಹಾರ ಕಲಬೆರಕೆತಡೆಕಾಯ್ದೆಯ ಸೆಕ್ಷನ್ 2(v)ರಲ್ಲಿ ಅಡಿಕೆ ಎಂಬುದು ’ಆಹಾರ’ ಎಂದು ಸರ್ವೋಚ್ಛ ನ್ಯಾಯಾಲಯ ಕೂಡ ತೀರ್ಪು ನೀಡಿದೆ.
ಅಡಿಕೆ ಬೆಳೆಗಾರರ ಸಂಕಷ್ಟಗಳಿಗೆ ಸದಾ ಸ್ಪಂದಿಸುವ ಟಿ.ಎಸ್.ಎಸ್.ಲಿ., ಶಿರಸಿ ಸಂಸ್ಥೆ ಹಾಗೂ ಅಡಿಕೆ ಬೆಳೆಗೆ ಸಂಬಂಧಿಸಿದ ಎಲ್ಲಾ ಸಂಘ ಸಂಸ್ಥೆಗಳು ಝಾರ್ಖಂಡ್ ಸಂಸದ ನಿಶಿಕಾಂತ್ ದುಬೆ ಹೇಳಿಕೆಯನ್ನು ಖಂಡಿಸುತ್ತದೆ. ಇದಲ್ಲದೆ ಅಡಿಕೆಯ ಆರೋಗ್ಯಕರ ಪ್ರಯೋಜನಗಳ ಕುರಿತು ಸಂಪೂರ್ಣ ವೈಜ್ಞಾನಿಕ ಸಂಶೋಧನೆಯನ್ನು ನಡೆಸಲು ಮತ್ತುರೈತರ ನೈತಿಕ ಸ್ಥೈರ್ಯವನ್ನು ಕಾಪಾಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳವಂತೆ ಕೇಂದ್ರ ಸರ್ಕಾರಕ್ಕೆ ಒತ್ತಾಯಿಸುವುದಾಗಿ ಟಿ.ಎಸ್.ಎಸ್.ಲಿ., ಶಿರಸಿ ಸಂಸ್ಥೆಯು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.