ಶಿರಸಿ: ವ್ಯಕ್ತಿಗೆ ಆಹಾರ, ನೀರು, ಗಾಳಿಯಷ್ಟೇ ಕಾನೂನಿನ ಅರಿವು ಕೂಡ ಅಷ್ಟೇ ಮುಖ್ಯ ಎಂದು ಎಂದು 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿ.ಜಗದೀಶ ಹೇಳಿದರು.
ಭಾರತ ಸ್ವಾತಂತ್ರ್ಯೋತ್ಸವ ಅಮೃತ ಮಹೋತ್ಸವದ ಅಂಗವಾಗಿ ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಮಹಿಳೆಯರಿಗಾಗಿ ಆಯೋಜಿಸಿದ್ದ ಕಾನೂನು ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಸಮಾಜ ಭದ್ರವಾಗಿರಲು ಹಾಗೂ ಅಭಿವೃದ್ಧಿ ಕಾಣಲು ಪ್ರತಿಯೊಬ್ಬರಿಗೂ ಸರ್ಕಾರದ ಸೌಲಭ್ಯ ತಲುಪುವಲ್ಲಿ ಕಾನೂನು ಜ್ಞಾನ ಹೊಂದಿರುವುದು ಅಗತ್ಯ ಪ್ರಸ್ತುತ ಕಾಲಘಟ್ಟದಲ್ಲಿ ದಾಖಲಾಗುತ್ತಿರುವ ಅಪರಾಧ ಪ್ರಕರಣಗಳಲ್ಲಿ ಶೇ.50ಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಮಹಿಳೆಯರು, ಮಕ್ಕಳು ಸಂತ್ರಸ್ತರಾಗಿರುತ್ತಾರೆ. ಹೀಗಾಗಿ ಕಾನೂನು ಅರಿವು ಪಡೆದರೆ ಇಂಥ ದೌರ್ಜನ್ಯವನ್ನು ಎದುರಿಸಬಹುದಾಗಿದೆ ಎಂದರು.
ಜೀವನ ಸುಖವಾಗಿರಲು ಕಾನೂನು ಅರಿವು ಮುಖ್ಯ. ವ್ಯಕ್ತಿಯು ತನ್ನ ಹಕ್ಕು ಪಡೆದಷ್ಟೇ ಮುಖ್ಯ ಇತರರ ಹಕ್ಕಿಗೆ ಧಕ್ಕೆ ಬಾರದಂತೆ ನಡೆಯುವುದಾಗಿದೆ. ಇಂಥ ನಿತ್ಯ ಜೀವನಕ್ಕೆ ಅತ್ಯಗತ್ಯದ ಕಾನೂನು ಅರಿವನ್ನು ಸಮಾಜಕ್ಕೆ ಬೇಕಾದ ವಿವಿಧ ಕಾರ್ಯಕ್ರಮಗಳ ಮೂಲಕ ನೀಡಲಾಗುತ್ತಿದೆ ಎಂದರು.
ಹಿರಿಯ ಸಿವಿಲ್ ನ್ಯಾಯಾಧೀಶ ಕಮಲಾಕ್ಷ ಡಿ., ಮಹಿಳೆಯರು ಕಾನೂನು ಅರಿವು ಪಡೆದು ದೌರ್ಜನ್ಯ, ಅಭದ್ರತೆಯಿಂದ ದೂರವಿರಬೇಕು. ಕಾನೂನು ಜ್ಣಾನ ಪಡೆಯುವುದರ ಜತೆ ಇತರರಿಗೂ ತಿಳಿಸುವ ಕಾರ್ಯ ಆಗಬೇಕು ಎಂದರು. ನಿತ್ಯ ಜೀವನಕ್ಕೆ ಬೇಕಾದ ಕಾನೂನು ಜ್ಞಾನವನ್ನು ಪ್ರತಿಯೊಬ್ಬರೂ ಪಡೆಯಬೇಕು ಎಂದರು.
ಪ್ರಧಾನ 1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ರಾಜು ಶೇಡಬಾಳ್ಕರ, ಸಿಡಿಪಿಒ ದತ್ತಾತ್ರೇಯ ಭಟ್ಟ, ಅಬಕಾರಿ ನಿರೀಕ್ಷಕಿ ಜ್ಯೋತಿಶ್ರೀ ನಾಯ್ಕ, ಪೌರಾಯುಕ್ತ ಕೇಶವ ಚೌಗಲೆ, ತಹಸೀಲ್ದಾರ ಎಂ.ಆರ್.ಕುಲಕರ್ಣಿ, ಸರ್ಕಾರಿ ಅಭಿಯೋಜಕಿ ಸೋಫಿಯಾ ಇನಾಮದಾರ, ವಕೀಲ ಸಂಘದ ಅಧ್ಯಕ್ಷ ಸಿ.ಎಫ್.ಈರೇಶ ಇದ್ದರು. ವಕೀಲರ ಸಂಘದ ಉಪಾಧ್ಯಕ್ಷೆ ಪ್ಲೇವಿಯಾ ಡಿಸೋಜಾ ಸ್ವಾಗತಿಸಿದರು. ನಗರಸಭೆ ವ್ಯವಸ್ಥಾಪಕ ಎನ್.ಎಂ.ಮೇಸ್ತ ನಿರೂಪಿಸಿದರು.