ಸಿದ್ದಾಪುರ: ಗೋವು ನಮ್ಮ ಸಂಸ್ಕೃತಿ ಭಾಗವಾಗಿದ್ದು, ಆದಿಕಾಲದಿಂದಲೂ ಗೋವನ್ನು ರಕ್ಷಿಸಿ, ಪೂಜೆ ಮಾಡುತ್ತಲೇ ಬಂದಿದ್ದಾರೆ. ಆದರೆ ಇಂದಿನ ಆಧುನಿಕತೆಯ ಭರಾಟೆಯಲ್ಲಿ ಗೋ ಸಂಪತ್ತು ಕ್ಷೀಣವಾಗುತ್ತಿರುವುದಿಂದ ಕೃಷಿ ಕಡಿಮೆಯಾಗುತ್ತಿದೆ ಎಂದು ತಾಲೂಕು ಪಂಚಾಯಿತಿ ಇಒ ಪ್ರಶಾಂತರಾವ್ ಹೇಳಿದರು.
ತಾಲೂಕಿನ ಮುಠ್ಠಳ್ಳಿ-ಊರತೋಟದಲ್ಲಿ ಜಿಪಂ, ತಾಪಂ, ಪಶು ಸಂಗೋಪನಾ ಇಲಾಖೆ ಸಿದ್ದಾಪುರ, ಹಾಲು ಉತ್ಪಾದಕರ ಸಹಕಾರಿ ಸಂಘ ಹಾರ್ಸಿಕಟ್ಟಾ ಹಾಗೂ ಗ್ರಾಪಂ ಹಾರ್ಸಿಕಟ್ಟಾ ಇವುಗಳ ಸಹಕಾರದಲ್ಲಿ ಆಯೋಜಿಸಿದ್ದ ಬರಡು ಜಾನುವಾರುಗಳ ಚಿಕಿತ್ಸಾ ಶಿಬಿರ ಹಾಗೂ ಜಾನುವಾರುಗಳ ಪ್ರದರ್ಶನವನ್ನು ಗೋಪೂಜೆ ಮಾಡುವ ಮೂಲಕ ಉದ್ಘಾಟಿಸಿ ಅವರು ಬುಧವಾರ ಮಾತನಾಡಿದರು.
ಲಾಕ್ಡೌನ್ ನಿಂದಾಗಿ ಹೈನುಗಾರಿಕೆಯಲ್ಲಿ ಯುವ ಜನತೆ ತೊಡಗಿಕೊಂಡಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಎನ್‍ಆರ್‍ಇಜಿಯಲ್ಲಿ ಕೃಷಿಕರು ಎರೆಹುಳು ತೊಟ್ಟಿ ಸೇರಿದಂತೆ ವಿವಿಧ ಉದ್ಯೋಗ ಮಾಡುವುದಕ್ಕೆ ಅವಕಾಶ ಇದ್ದು ಇದರ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.ತಾಲೂಕು ಪಶುಸಂಗೋಪನಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ವಿವೇಕಾನಂದ ಹೆಗಡೆ ಅಧ್ಯಕ್ಷತೆ ವಹಿಸಿದ್ದರು.
ಹಾರ್ಸಿಕಟ್ಟಾ ವ್ಯವಸಾಯ ಸೇವಾ ಸಹಕಾರಿ ಸಂಘದ ಮುಖ್ಯಕಾರ್ಯನಿರ್ವಾಹಕ ದಿನೇಶ ಹೆಗಡೆ, ಗ್ರಾಪಂ ಪಿಡಿಒ ರಾಜೇಶ ನಾಯ್ಕ, ಹಾರ್ಸಿಕಟ್ಟಾ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಶ್ರೀಧರ ಭಟ್ಟ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಪಶುಸಂಗೋಪನಾ ಇಲಾಖೆಯ ಜಿಲ್ಲಾ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ ಡಾ.ನಂದಕುಮಾರ ಪೈ ಅವರನ್ನು ಸನ್ಮಾನಿಸಲಾಯಿತು.ಗೋಪಾಲಕೃಷ್ಣ ದೇವರು ಹೆಗಡೆ ಊರತೋಟ ಅಭಿನಂದನಾ ಮಾತನಾಡಿದರು.
ಜಾನುವಾರು ಪ್ರದರ್ಶನದಲ್ಲಿ ದೇಶಿ ತಳಿ, ಮಿಶ್ರ ತಳಿ, ಕರುಗಳು ಹಾಗೂ ಎಮ್ಮೆ ನಾಲ್ಕು ವಿಭಾಗ ಮಾಡಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ನೀಡಲಾಯಿತು.ಮುವತ್ತೈದಕ್ಕೂ ಹೆಚ್ಚು ಜಾನುವಾರುಗಳು ಪ್ರದರ್ಶನದಲ್ಲಿದ್ದವು ಈ ಎಲ್ಲ ಜಾನುವಾರುಗಳ ಮಾಲೀಕರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು. ಡಾ.ರವೀಂದ್ರ ಹೆಗಡೆ ಹೊಂಡಗಾಸಿಗೆ ಹಾಗೂ ಡಾ.ರಮೇಶ ಬಾಬು ಜಾನುವಾರು ಪ್ರದರ್ಶನದ ನಿರ್ಣಾಯಕರಾಗಿ ಪಾಲ್ಗೊಂಡಿದ್ದರು.
ವಿನುತಾ ಅನಂತ ಹೆಗಡೆ ಊರತೋಟ ಗೋವಿನ ಹಾಡನ್ನು ಹಾಡಿದರು. ಡಾ.ಶ್ರೇಯಸ್ ಬಿ.ರಾಜ್ ಸ್ವಾಗತಿಸಿದರು. ರಮೇಶ ಹೆಗಡೆ ಹಾರ್ಸಿಮನೆ ಕಾರ್ಯಕ್ರಮ ನಿರ್ವಹಿಸಿದರು, ಲೋಕೇಶ ಹೆಗಡೆ ಒಡಗೇರೆ ವಂದಿಸಿದರು.