ಯಲ್ಲಾಪುರ: ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಪ.ಪಂ.ಅಧ್ಯಕ್ಷೆ ಸುನಂದಾ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. ಯಾವುದೇ ಗಂಭೀರ ಚರ್ಚೆ ಇಲ್ಲದೇ ವಿವಿಧ ವಿಷಯಗಳ ಕುರಿತು ಅನುಮೋದನೆ ನೀಡಲಾಯಿತು.
ವಾರದ ಸಂತೆ ಹಾಗೂ ಪ್ರತಿದಿನದ ಮಾರುಕಟ್ಟೆಯ ಫೀ ವಸೂಲಿ ಕಾರ್ಯಕ್ಕೆ ಮರು ಹರಾಜು ಕರೆಯುವ ಕುರಿತು ನಿರ್ಣಯಿಸಲಾಯಿತು. ಆಯುಷ್ಮಾನ್ ಭಾರತ್ ಯೋಜನೆಯಡಿ ಆರೋಗ್ಯ ಕ್ಷೇಮ ಕೇಂದ್ರ ಆರಂಭಿಸಲು ಜಡ್ಡಿ ಸಮುದಾಯ ಭವನ ನೀಡುವಂತೆ ಲಿಂಗನಗೌಡ ಪಾಟೀಲ್ ಅವರ ಮನವಿಗೆ, ಕಟ್ಟಡ ಬಾಡಿಗೆ ನೀಡದೇ ಇರಲು ಸಭೆ ನಿರ್ಣಯಿಸಿತು.
ಪಟ್ಟಣದ ಇಂದಿರಾ ಕ್ಯಾಂಟೀನ್ ಸಿಬ್ಬಂದಿಗೆ ಕಳೆದ ಮೂರು ತಿಂಗಳಿನಿಂದ ವೇತನ ಪಾವತಿಯಾಗಿಲ್ಲ ಎಂಬ ಮನವಿಗೆ, ಟೆಂಡರ್ ದಾರರನ್ನು ಕರೆಸಿ ವೇತನ ಪಾವತಿಗೆ ಕ್ರಮ ಕೈಗೊಳ್ಳುವ ಬಗೆಗೆ ತಿಳಿಸಲಾಯಿತು. ಪಟ್ಟಣದ ಬಸ್ ನಿಲ್ದಾಣದಿಂದ ಬಸವೇಶ್ವರ ಸರ್ಕಲ್ ವರೆಗೆ ಫುಟ್ ಪಾತ್ ವ್ಯಾಪಾರ ಮಾಡುತ್ತಿದ್ದು,ಇದನ್ನು ತೆರವು ಗೊಳಿಸಿ, ಮಾರುಕಟ್ಟೆಯಲ್ಲಿಯೇ ವ್ಯಾಪಾರ ಮಾಡುವಂತೆ ಕ್ರಮ ಕೈಗೊಳ್ಳುವ ಕುರಿತು ಸಭೆ ನಿರ್ಧರಿಸಿತು.
ಉಪಾಧ್ಯಕ್ಷೆ ಶ್ಯಾಮಿಲಿ ಪಾಟಣಕರ್, ಸ್ಥಾಯಿ ಸಮಿತಿ ಅಧ್ಯಕ್ಷ ಅಮಿತ್ ಅಂಗಡಿ, ಪ.ಪಂ ಅಧಿಕಾರಿ ಹೇಮಾವತಿ ಭಟ್ ಹಾಗೂ ಸದಸ್ಯರು ಭಾಗವಹಿಸಿದ್ದರು.