ಶಿರಸಿ: ಮಕ್ಕಳಿಗೆ ಅತ್ಯುತ್ತಮ ಡಿಜಿಟಲ್ ಶಿಕ್ಷಣ ಸಿಗಲಿ ಎನ್ನುವ ಉದ್ದೇಶದಿಂದ ಶಿರಸಿ ಹೆರಿಟೇಜ್ ಇನ್ನರ್ ವೀಲ್ ಕ್ಲಬ್ ವತಿಯಿಂದ ಇಲ್ಲಿನ ಚಂದನ ಸ್ಕೂಲ್‍ನಲ್ಲಿ ನಿರ್ಮಿಸಲಾದ ಡಿಜಿಟಲ್ ಕ್ಲಾಸ್ ರೂಮ್‍ಗಳ ಉದ್ಘಾಟನೆ ನ. 11 ರಂದು ನಡೆಯಲಿದೆ ಎಂದು ಇನ್ನರ್ ವೀಲ್ ಕ್ಲಬ್ ಅಧ್ಯಕ್ಷೆ ಶ್ವೇತಾ ಪ್ರಭು ತಿಳಿಸಿದರು.
ನಗರದ ರೋಟರಿ ಕೇಂದ್ರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಗ್ರಾಮೀಣ ಮಕ್ಕಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಡಿಜಿಟಲ್ ಕ್ಲಾಸ್ ರೂಮ್ ಯೋಜನೆ ಹಮ್ಮಿಕೊಂಡಿದ್ದು, ಇಲ್ಲಿನ ನರೇಬೈಲ್‍ನಲ್ಲಿರುವ ಚಂದನ ಸ್ಕೂಲಿನ ಒಟ್ಟೂ 18 ಕ್ಲಾಸ್ ರೂಮ್ ಗಳನ್ನು ಡಿಜಿಟಲ್ ಕ್ಲಾಸ್ ರೂಮ್‍ಗಳನ್ನಾಗಿ ಪರಿವರ್ತನೆ ಮಾಡಲಾಗಿದೆ. ಇದಕ್ಕೆ ಒಟ್ಟೂ 7 ಲಕ್ಷರೂ ಖರ್ಚಾಗಿದ್ದು, ಕ್ಲಬ್ ವತಿಯಿಂದ 5 ಲಕ್ಷರೂ ವ್ಯಯಿಸಿದ್ದು, ಚಂದನ ಸ್ಕೂಲ್ 2 ಲಕ್ಷರೂ ನೀಡಿದೆ. ಇದರಿಂದ ಸುಮಾರು 600 ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದ ಅವರು, ಈ ಡಿಜಿಟಲ್ ಕ್ಲಾಸ್ ರೂಮುಗಳ ಉದ್ಘಾಟನೆ ನ.11 ರ 12 ಗಂಟೆಗೆ ನಡೆಯಲಿದ್ದು, ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ರತ್ನಾ ಬೆಹೆರೆ ಉದ್ಘಾಟಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಚಂದನ ಶಾಲೆಯ ಆಡಳಿತ ವಿಭಾಗದ ಪ್ರಿಯಾ ನಾಯ್ಕ ಮಾತನಾಡಿ, ಚಂದನ ಶಾಲೆಗೆ ಶೇ. 90 ರಷ್ಟು ಗ್ರಾಮೀಣ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಒಟ್ಟೂ 600 ಕ್ಕೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಡಿಜಿಟಲ್ ಕ್ಲಾಸ್ ರೂಮ್ ವ್ಯವಸ್ಥೆ ಸರಿಯಾದ ರೀತಿಯಲ್ಲಿ ಇರಲಿಲ್ಲ. ಡಿಜಿಟಲ್ ಕ್ಲಾಸ್ ರೂಮ್ ಮಾಡುವ ಕುರಿತು ಶಾಲೆಯ ಆಡಳಿ ಮಂಡಳಿ ಚಿಂತನೆ ನಡೆಸಿತ್ತು. ಅದೇ ವೇಳೆಗೆ ಇನ್ನರ್ ವೀಲ್ ಕ್ಲಬ್ ಸಹಕಾರದೊಂದಿಗೆ 18 ಕ್ಲಾಸ್ ರೂಮ್ ಗಳು ಹೈಟೆಕ್ ಮಾದರಿಯ ಡಿಜಿಟಲ್ ಕ್ಲಾಸ್‍ಗಳಾಗಿ ಪರಿವರ್ತನೆ ಗೊಂಡಿದೆ ಎಂದರು.ಕ್ಲಬ್‍ನ ವಿದ್ಯಾ ನಾಯ್ಕ, ರೇಖಾ ಆನಂದ್, ಮಮತಾ ಹೆಗಡೆ, ಮಾಧುರಿ ಶಿವರಾಮ್ ಮತ್ತಿತರರು ಇದ್ದರು.