ಶಿರಸಿ: ತಾಲೂಕಿನ ಚಿಪಗಿ ಗ್ರಾಮದ ಹುಬ್ಬಳ್ಳಿ ರಸ್ತೆಯ ಹಳೇ ಲೋಕಧ್ವನಿ ಸರ್ಕಲ್‍ನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸದೇ ಇರುವುದರಿಂದ ಸಾಕಷ್ಟು ಅಪಫಾತಗಳು ಸಂಭವಿಸಿ ಸಾವು ನೋವು ಆಗುತ್ತಿದ್ದು, ಇದನ್ನು ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ನ.30 ರಂದು ರಸ್ತೆ ತಡೆ ನಡೆಸಲು ನಿರ್ಧರಿಸಲಾಗಿದೆ ಎಂದು ಚೌಡೇಶ್ವರಿ ಯುವಕ ಸಂಘದ ಮಾಜಿ ಅಧ್ಯಕ್ಷ ವಿಶ್ವನಾಥ ಗೌಡ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಶಿರಸಿ ತಾಲೂಕಿನ ಚಿಪಗಿ ಗ್ರಾಮದ ಇಸಳೂರು ಪಂಚಾಯತ ವ್ಯಾಪ್ತಿಯ ಹುಬ್ಬಳ್ಳಿ ರಸ್ತೆಯ ಹಳೇ ಲೋಕಧ್ವನಿ ಸರ್ಕಲ್‍ನ್ನು ವೈಜ್ಞಾನಿಕವಾಗಿ ಅಭಿವೃದ್ಧಿಪಡಿಸದೇ ಅಪೂರ್ಣವಾಗಿ ಅಭಿವೃದ್ಧಿ ಪಡಿಸಲಾಗಿದೆ. ಇದರಿಂದ ಸಾಕಷ್ಟು ಅಪಫಾತಗಳು ಸಂಭವಿಸಿ ಸಾವು ನೋವು ಆಗುತ್ತಿದ್ದು, ಇದನ್ನು ಅಭಿವೃದ್ಧಿಪಡಿಸಲು ಒತ್ತಡ ಹೇರುವ ಸಲುವಾಗಿ ಸಾರ್ವಜನಿಕರೆಲ್ಲ ಸೇರಿ ಪಕ್ಷಾತೀತವಾಗಿ ರಸ್ತೆ ತಡೆ ಕಾರ್ಯಕ್ರಮ ಹಮ್ಮಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ. ಈ ಸರ್ಕಲ್‍ನ ಅಭಿವೃದ್ಧಿ ಕುರಿತು ಸಾಕಷ್ಟು ಬಾರಿ ಹೋರಾಟ ಮಾಡಿದರೂ ಯಾವುದೇ ವೈಜ್ಞಾನಿಕ ಅಭಿವೃದ್ಧಿ ಆಗಿಲ್ಲ. ರಾತ್ರಿ ಸಮಯದಲ್ಲಿ ಬರುವ ವಾಹನಗಳಿಗೆ ಗ್ಲೋ ಸೈನ್ ಬೋರ್ಡಗಳು ಇಲ್ಲದೇ ತುಂಬಾ ತೊಂದರೆಯಾಗುತ್ತಿದೆ.
ಈ ಸರ್ಕಲ್‍ನ ಬಳಿ ವಿದ್ಯುತ್ ದೀಪ ಸಹ ಇಲ್ಲ. ಈ ಸರ್ಕಲ್ ಬಳಿ ಸರಿಯಾಗಿ ವೈಜ್ಞಾನಿಕವಾಗಿ ಯಾವುದೇ ಬೋರ್ಡ ಸಹ ಅಳವಡಿಸಿಲ್ಲ. ಈ ಸರ್ಕಲ್ ಬಳಿ ನಾಲ್ಕು ರಸ್ತೆಗಳು ಕೂಡುತ್ತಿದ್ದು, ಯಲ್ಲಾಪುರ ರಸ್ತೆಯಿಂದ ಹುಬ್ಬಳ್ಳಿಗೆ ಹೋಗುವ ವಾಹನಗಳು ಮತ್ತು ಶಿರಸಿಯಿಂದ ಹುಬ್ಬಳಿಗೆ ಹೋಗುವ ಬರುವ ವಾಹನಗಳು ಮತ್ತು ಚಿಪಗಿ ಊರಿನಿಂದ ಬರುವ ವಾಹನಗಳು ಸಹ ಈ ಸರ್ಕಲ್‍ನ ಮೂಲಕವೇ ಹಾದು ಹೋಗಬೇಕಿದೆ. ಹೀಗಾಗಿ ಇಲ್ಲಿ ವಾಹನಗಳ ಓಡಾಟದ ಒತ್ತಡ ಬಹಳ ಇರುತ್ತದೆ. ಈ ಭಾಗದಲ್ಲಿ ಶಾಲಾಕಾಲೇಜು ಇರುವುದರಿಂದ ವಿದ್ಯಾರ್ಥಿಗಳು ತುಂಬಾ ಓಡಾಡುತ್ತಿರುವ ಕಾರಣ ಈ ಸರ್ಕಲ್ ಯಾವಾಗಲೂ ಜನನಿಬಿಡವಾಗಿರುತ್ತದೆ. ಈಗಾಗಲೇ ಬಹಳಷ್ಟು ಜನರು ಸಾವಿಗೀಡಾಗಿದ್ದಾರೆ ಅಲ್ಲದೇ ಸಣ್ಣಪುಟ್ಟ ಅಪಘಾತಗಳು ದಿನವೂ ಸಂಭವಿಸುತ್ತಲೇ ಇರುತ್ತದೆ. ಹೀಗಾಗಿ ಸರ್ಕಲ್ ತೀರಾ ಅವಶ್ಯಕ ಎಂದು ತಿಳಿಸಿದ್ದಾರೆ