ಕಾರವಾರ:ಸಿವಿಲ್ ಗುತ್ತಿಗೆದಾರರ ಸಂಘದ ಕಾರವಾರ ತಾಲ್ಲೂಕು ಘಟಕದವರು ಕಾಮಗಾರಿ ಮಾಹಿತಿಯ ಅಣಕು ಫಲಕ ಪ್ರದರ್ಶಿಸಿದರು
ಕಾರವಾರ: ಕರಾವಳಿ ಭಾಗದಲ್ಲಿ ಅತಿವೃಷ್ಟಿಗೆ ಬಾಧಿತವಾದ ಪ್ರದೇಶಗಳ ಅಭಿವೃದ್ಧಿ ಕಾಮಗಾರಿಯನ್ನು ತಂತ್ರಜ್ಞರು, ಸಿಬ್ಬಂದಿ, ಸೌಲಭ್ಯ ಇಲ್ಲದ ಕೆ.ಆರ್.ಐ.ಡಿ.ಎಲ್. ಸಂಸ್ಥೆಗೆ ಗುತ್ತಿಗೆ ನೀಡಲಾಗಿದೆ ಎಂದು ಸಿವಿಲ್ ಗುತ್ತಿಗೆದಾರರ ಸಂಘದ ಕಾರವಾರ ತಾಲ್ಲೂಕು ಘಟಕದ ಅಧ್ಯಕ್ಷ ಮಾಧವ ನಾಯಕ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮುಖ್ಯಮಂತ್ರಿ ವಿಶೇಷ ನಿಧಿ ಅಡಿಯಲ್ಲಿ ಜಿಲ್ಲೆಗೆ ಮಂಜೂರಾದ ₹70 ಕೋಟಿ ಅನುದಾನದ ಪೈಕಿ ಕರಾವಳಿ ಭಾಗಕ್ಕೆ ಮೀಸಲಿಟ್ಟ ₹55 ಕೋಟಿ ಮೊತ್ತದ ಕಾಮಗಾರಿಯನ್ನು ಈ ಭಾಗದ ಜನಪ್ರತಿನಿಧಿಗಳು ಕೆ.ಆರ್.ಐ.ಡಿ.ಎಲ್.ಗೆ ಕೊಡಿಸಿ ಗುತ್ತಿಗೆದಾರರಿಗೆ ಅನ್ಯಾಯ ಮಾಡಿದ್ದಾರೆ’ ಎಂದು ಆರೋಪಿಸಿದರು.
‘ಹಿಂದೆ ಜಿಲ್ಲಾ ಪಂಚಾಯ್ತಿ ಸಾಮಾನ್ಯ ಸಭೆಯಲ್ಲಿ ಭೂ ಸೇನಾ ನಿಗಮಕ್ಕೆ ಯಾವುದೇ ಕೆಲಸ ಕೊಡಬಾರದು ಎಂದು ಠರಾವು ಮಾಡಲಾಗಿತ್ತು. ಈಗ ಹೆಸರು ಬದಲಾಯಿಸಿ ಕೆ.ಆರ್.ಐ.ಡಿ.ಎಲ್. ಎಂದು ನಾಮಕಾರಣ ಮಾಡಲಾಗಿದ್ದು ಅಧಿಕಾರಿಗಳು ನಿಯಮ ಉಲ್ಲಂಘಿಸಿ ಕಾಮಗಾರಿ ಗುತ್ತಿಗೆ ನೀಡುತ್ತಿದ್ದಾರೆ’ ಎಂದರು.