ಶಿರಸಿ: ಗೀತೆ ಭಗವಂತನ ಮುಖಾರವಿಂದದಿಂದ ಬಂದಿದೆ. ಹೀಗಾಗಿ ಎಲ್ಲಾ ಶಾಸ್ತ್ರಗಳಿಗಿಂತ ಶ್ರೇಷ್ಠವಾದದ್ದು, ಇದನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು ಎಂದು ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿ ನುಡಿದರು.
ಅವರು ಶ್ರೀಮಠದ ಅಂಗಸಂಸ್ಥೆ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಆಶ್ರಯದಲ್ಲಿ ನಡೆಯುತ್ತಿರುವ ಭಗವದ್ಗೀತಾ ಅಭಿಯಾನದ ಘಟ್ಟದ ಮೇಲಿನ ತಾಲೂಕಗಳ ಕಾರ್ಯಕರ್ತರ ಮಹತ್ವದ ಸಭೆಯ ಸಾನ್ನಿಧ್ಯ ನೀಡಿ ಆಶೀರ್ವಚನ ನುಡಿದರು. ಭಗವದ್ಗೀತೆಯ ಈ ವರ್ಷದ ಅಭಿಯಾನಕ್ಕೆ ಸಂಬಂಧಿಸಿ ಈಗಾಗಲೇ ಚಟುವಟಿಕೆ ಪ್ರಾರಂಭವಾಗಿದೆ. ಈ ಜಿಲ್ಲೆಯಲ್ಲಿ ಘಟ್ಟದ ಕೆಳಗಿನ ತಾಲೂಕುಗಳಲ್ಲಿ ಈ ಅಭಿಯಾನ ಈಗಾಗಲೇ ಪ್ರಾರಂಭವಾಗಿದೆ. ಈ ಘಟ್ಟದ ಮೇಲಿನ ತಾಲೂಕಿನ ಚಟುವಟಿಕೆ ತೀವ್ರಗೊಳಿಸಬೇಕಾಗಿದೆ ಎಂದರು.
ನವಂಬರ್ 6ರಿಂದ ನಾಲ್ಕು ಚಕ್ರಗಳಲ್ಲಿ ಗೀತಾಪಠಣ ಪ್ರಾರಂಭವಾಗಿದೆ. ಈ ಪಠಣ ಶಾಲೆಗಳಲ್ಲಿ, ದೇವಸ್ಥಾನಗಳಲ್ಲಿ, ಸಮುದಾಯ ಭವನದಲ್ಲಿ ನಡೆಸಬೇಕು. ಕಳೆದ ವರ್ಷ ಶಾಲೆಗಳಲ್ಲಿ ಪಠಣ ನಡೆಯಲೇ ಇಲ್ಲ. ಆ ಕಾರಣ ಈ ಬಾರಿ ಶಾಲೆಗಳಲ್ಲಿ 3ನೇ ಅಧ್ಯಾಯದ ಪಠಣ ನಡೆಯುವಂತೆ ನೋಡಿಕೊಳ್ಳಬೇಕು. ಅದರಂತೆ ವಿದ್ಯಾರ್ಥಿಗಳಿಗಾಗಿ ಶ್ಲೋಕ ಪಠಣ ಹಾಗೂ ಭಾಷಣ ಸ್ಪರ್ಧೆಯನ್ನು ನಡೆಸಬೇಕು. ಈಗಾಗಲೇ ತಾಲೂಕುಮಟ್ಟದ ಹಾಗೂ ಜಿಲ್ಲಾಮಟ್ಟದ ಸ್ಪರ್ಧೆಯನ್ನು ನಿರ್ದಿಷ್ಟಪಡಿಸಿದ ದಿನಾಂಕಗಳಲ್ಲಿಯೇ ನಡೆಸಿದರೆ ಉತ್ತಮ. ಡಿಸೆಂಬರ್ 8 ಉತ್ತರ ಕನ್ನಡ ಜಿಲ್ಲಾಮಟ್ಟದ ಸ್ಪರ್ಧೆ ನಡೆಯಲಿದೆ ಎಂದರು.
ಸಭೆಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಮುರುಳಿಧರ ಪ್ರಭು ಕುಮಟಾ, ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನದ ಉಪಾಧ್ಯಕ್ಷ ನಾರಾಯಣ ಭಟ್ ಬಳ್ಳಿ, ಆರ್.ಎನ್.ಭಟ್ಟ, ವೆಂಕಟರಮಣ ಹೆಗಡೆ, ಕೆ.ವಿ. ಭಟ್ಟ ಇತರರು ಇದ್ದರು.