ಶಿರಸಿ: ರೈತರ ಕಂದಾಯ ಇಲಾಖೆಗೆ ಸಂಬಂಧಿಸಿದ ಸಮಸ್ಯೆಗಳಿಗೆ ಸ್ಪಂದಿಸಲು ವರ್ಷಕ್ಕೆ ಎರಡರಂತೆ ಗ್ರಾಮ ಪಂಚಾಯತ ಮಟ್ಟದಲ್ಲಿ ಕಂದಾಯ ಅದಾಲತ್‍ನ್ನು ಜರುಗಿಸುವಂತೆ ಹಾಗೂ ದಾಖಲೆಯಲ್ಲಿ ರೈತರ ಬೆಳೆ ಮತ್ತು ಉಪಬೆಳೆ ವರ್ಷಂಪ್ರತಿ ದಾಖಲಿಸುವ ಪ್ರಕ್ರಿಯೆ ನಿರಂತರವಾಗಿ ಜರುಗಿಸುವಲ್ಲಿ ಸೂಕ್ತ ಕ್ರಮ ಜರುಗಿಸುವ ಅವಶ್ಯಕತೆ ಮತ್ತು ಇನ್ನಿತರ ಸಮಸ್ಯೆಗಳ ಕಂದಾಯ ಇಲಾಖೆಗೆ ರೈತರಿಂದ ಅಗ್ರಹಿಸುವ ಮಾತುಗಳು ಕೇಳಿ ಬಂದವು.
ತಾಲೂಕಿನ ಬಂಡಲ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪಾನ್‍ಇಂಡಿಯಾ ಅವೇರನೇಸ್ ಹಾಗೂ ಔಟ ರೀಚ್ ಕಾರ್ಯಕ್ರಮ ಅಂಗವಾಗಿ ಕಾನೂನು ಸೇವಾ ಸಮಿತಿ ಮತ್ತು ಸರಕಾರದ ಇತರ ಇಲಾಖೆ ಸಹಯೋಗದೊಂದಿಗೆ ಏರ್ಪಡಿಸಿದ `ಕಂದಾಯ ಇಲಾಖೆ ಮತ್ತು ಕಾನೂನು’ ಎಂಬ ವಿಷಯದ ಗೋಷ್ಟಿಯಲ್ಲಿ ಮೇಲಿನಂತೆ ರೈತರಿಂದ ಆಗ್ರಹಗಳು ಕೇಳಿ ಬಂದವು.
ಎಪಿಎಲ್ ಮತ್ತು ಬಿಪಿಎಲ್ ಮಾನದಂಡ, ಸರಕಾರದಿಂದ ಸಿಗುವ ವಿವಿಧ ಯೋಜನೆ, ಭೂಮಿಯ ಹಕ್ಕಿನ ವರ್ಗಾವಣೆಗೆ ಸಂಬಂಧಿಸಿದ ವಾರಸಾ ಮತ್ತು ಹಿಸ್ಸಾ ಪ್ರಕರಣ, ಪಹಣ ಪತ್ರಿಕೆಯಲ್ಲಿ ಬೆಳೆ ಮತ್ತು ಉಪಬೆಳೆ ದಾಖಲಾಗದೇ ಇರುವ ಶೇ 65 ರಷ್ಟು ರೈತರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಉಂಟಾಗುತ್ತಿರುವ ತಾಂತ್ರಿಕ ದೋಷ, ವರ್ಷಗಟ್ಟಲೆಯಾದರೂ ರೇಷನ್ ಕಾರ್ಡ ವಿತರಣೆ ಆಗದೇ ಇರುವದು, ವಸತಿ ಯೋಜನೆಯಲ್ಲಿ ಇರುವ ಸಮಸ್ಯೆಗಳ ಕುರಿತು ಕಂದಾಯ ಇಲಾಖೆಯಿಂದ ಉಂಟಾಗುತ್ತಿರುವ ಸಮಸ್ಯೆಗಳು ಗೋಷ್ಟಿಯಲ್ಲಿ ಪ್ರಸ್ತಾಪವಾದವು.
ಗೋಷ್ಟಿಯಲ್ಲಿ ಕಂದಾಯ ಅಧಿಕಾರಿ ಅಣ್ಣಪ್ಪ ಮಡಿವಾಳ, ಸಂತೋಷ ಶೇಟ್ ಉಪಸ್ಥಿತರಿದ್ದು ಇಲಾಖೆ ಪರವಾಗಿ ಉತ್ತರಿಸಿದರು. ಹಿರಿಯ ವಕೀಲ ರವೀಂದ್ರ ನಾಯ್ಕ ಕಂದಾಯ ಕಾನೂನು ಕುರಿತು ವಿಶ್ಲೇಷಿಸಿದರು. ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಗ್ರಾಮ ಪಂಚಾಯತ ಅಧ್ಯಕ್ಷ ಸುಮಂಗಲಾ ನಾಯ್ಕ ಕಂದಾಯ ಇಲಾಖೆಯ ಯೋಜನೆಗಳನ್ನು ಅನುಷ್ಟಾನಗೊಳಿಸುವ ದಿಶೆಯಲ್ಲಿ ಗ್ರಾಮ ಪಂಚಾಯತ ಸಹಕಾರ ನೀಡುವುದೆಂದು ಹೇಳಿದರು. ಕಾರ್ಯಕ್ರಮದಲ್ಲಿ ಪಿಡಿಒ ಪವಿತ್ರ ಅವರು ಸ್ವಾಗತ ಮತ್ತು ವಂದನಾರ್ಪಣೆ, ಪ್ರಾಸ್ತವಿಕ ಭಾಷಣ ಹಿಂದಿನ ಗ್ರಾಮ ಪಂಚಾಯತ ಅಧ್ಯಕ್ಷ ದೇವರಾಜ ಮರಾಠಿ ಮಾಡಿದರು.
ಗೋಷ್ಟಿಯಲ್ಲಿ ಶಿವಾಜಿ ಗೌಡ, ನಾಗು ಮರಾಠಿ, ಗಜಾನನ ಹೆಗಡೆ, ಮರಿಗೌಡ, ಮಂಜುನಾಥ ನಾಯ್ಕ, ಚಕ್ರಾ ಗೌಡ ಮುಂತಾದವರು ಸಮಸ್ಯೆಗಳನ್ನು ಮಂಡನೆ ಮಾಡಿದರು. ವೇದಿಕೆ ಮೇಲೆ ಉಪಾಧ್ಯಕ್ಷರಾದ ತಿಮ್ಮ ಮರಾಠಿ, ಸದಸ್ಯರಾದ ಸುಮನಾ ಚೆನ್ನಯ್ಯ, ಗೌರಮ್ಮ ಕುಮಟೂರ, ಮಂಜು ಗೌಡ ಉಪಸ್ಥಿತರಿದ್ದರು.