ಸಿದ್ದಾಪುರ: ತಾಲೂಕು ಬಿಜೆಪಿ ಮಂಡಲದ ಹಿಂದುಳಿದ ವರ್ಗಗಳ ಮೋರ್ಚಾ ಸಮಾವೇಶ ನ.9 ರಂದು ಬೆಳಗ್ಗೆ 10ಕ್ಕೆ ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ನಡೆಯಲಿದೆ ಎಂದು ರಾಜ್ಯ ಬಿಜೆಪಿ ಕಾರ್ಯಕಾರಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್ ಹೇಳಿದರು.
ಪಟ್ಟಣದ ಬಿಜೆಪಿ ಕಾರ್ಯಾಲಯದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಮಾವೇಶವನ್ನು ಬಿಜೆಪಿ ಹಿಂದುಳಿದ ವರ್ಗಗಳ ಸಂಘಟನೆ ಬಲಪಡಿಸಲು ನಡೆಸಲಾಗುತ್ತಿದೆ. ಸಮಾವೇಶವನ್ನು ದಿ.ಬಿಕ್ಕಳಸೆ ಮಹಾಬಲ ನಾಯ್ಕ ವೇದಿಕೆಯಲ್ಲಿ ನಡೆಸಲಾಗುತ್ತಿದೆ. ಬೂತ್ ಮಟ್ಟದಿಂದ ಹಿಡಿದು ರಾಜ್ಯಮಟ್ಟದವರೆಗೂ ಬಿಜೆಪಿ ಎಲ್ಲ ಹಂತದಲ್ಲಿಯೂ ಪ್ರಬಲವಾಗಿಯೇ ಇದೆ. ಪಕ್ಷದ ಸಂಘಟನೆಗಾಗಿ ತಾಲೂಕಿನ ಅನೇಕ ಹಿಂದುಳಿದ ವರ್ಗಗಳ ಕಾರ್ಯಕರ್ತರು, ಪ್ರಮುಖರು ಶ್ರಮವಹಿಸಿದ್ದಾರೆ. ಪಕ್ಷದ ಸಂಘಟನೆಗಾಗಿ ಹಲವರು ಶ್ರಮವಹಿಸಿದ್ದರೂ ಅದರಲ್ಲಿ 15ರಿಂದ 20ಜನ ಬಿಜೆಪಿಯ ಹಿಂದುಳಿದ ವರ್ಗಗಳ ಹಿರಿಯರನ್ನು ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು ಕಾರ್ಯಕರ್ತರನ್ನು ಸನ್ಮಾನಿಸಲಾಗುತ್ತದೆ.
ತಾಲೂಕಿನಲ್ಲಿ 83379 ಮತದಾರರಿದ್ದು ಅದರಲ್ಲಿ 57043 ಹಿಂದುಳಿದ ವರ್ಗಗಳ (ಶೇ.68.4)ಮತದಾರರಿದ್ದಾರೆ. ಸರ್ಕಾರದಿಂದ ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ ವಿವಿಧ ಯೋಜನೆಗಳಿದ್ದು ಅವುಗಳನ್ನು ಸಮಾವೇಶದಲ್ಲಿ ಪ್ರಮುಖರು ತಿಳಿಸಲಿದ್ದಾರೆ. ಇದರ ಪ್ರಯೋಜನವನ್ನು ಹಿಂದುಳಿದ ವರ್ಗಗಳ ಜನತೆ ಪಡೆದುಕೊಳ್ಳಬೇಕು.
ಪಕ್ಷಕ್ಕೆ ಸೇರ್ಪಡೆ: ವಿವಿಧ ಪಕ್ಷದಲ್ಲಿರುವ ಅನೇಕ ಹಿಂದುಳಿದ ವರ್ಗಗಳ ಪ್ರಮುಖರು, ಮುಖಂಡರು ಹಾಗೂ ಕಾರ್ಯಕರ್ತರು ಬಿಜೆಪಿ ಪಕ್ಷ ಸೇರ್ಪಡೆಗೊಳ್ಳುತ್ತಿದ್ದಾರೆ ಎಂದು ಕೆ.ಜಿ.ನಾಯ್ಕ ಹಣಜೀಬೈಲ್ ಹೇಳಿದರು.
ಉದ್ಘಾಟನೆ: ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸಮಾವೇಶ ಉದ್ಘಾಟಿಸುವರು. ತಾಲೂಕು ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಬಲರಾಮ ನಾರಾಯಣ ನಾಮಧಾರಿ ಅಧ್ಯಕ್ಷತೆ ವಹಿಸುವರು. ಸಚಿವರಾದ ಶಿವರಾಮ ಹೆಬ್ಬಾರ, ಅರಗ ಜ್ಞಾನೇಂದ್ರ, ವಿ.ಸುನೀಲಕುಮಾರ್, ಸಂಸದ ಅನಂತಕುಮಾರ ಹೆಗಡೆ, ಶಾಸಕ ಹರತಾಳು ಹಾಲಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್.ಪಾಟೀಲ್, ಶಾಸಕ ದಿನಕರ ಶೆಟ್ಟಿ, ಸುನೀಲ್ ನಾಯ್ಕ, ರೂಪಾಲಿ ನಾಯ್ಕ, ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಕೆ.ಜಿ.ನಾಯ್ಕ ಹಣಜೀಬೈಲ್, ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ರವಿ ನಾಯ್ಕ ಜಾಲಿ, ರಾಜೇಂದ್ರ ನಾಯ್ಕ ಅಂಕೋಲಾ, ಈಶ್ವರ ನಾಯ್ಕ ಮುರ್ಡೆಶ್ವರ, ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ ಉಪಸ್ಥಿತರಿರಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ತಾಲೂಕು ಬಿಜೆಪಿ ಅಧ್ಯಕ್ಷ ನಾಗರಾಜ ನಾಯ್ಕ ಬೇಡ್ಕಣಿ, ಪಪಂ ಅಧ್ಯಕ್ಷೆ ಚಂದ್ರಕಲಾ ಸುರೇಶ ನಾಯ್ಕ, ವಿನಯ ಹೊನ್ನೆಗುಂಡಿ, ಲೋಕೇಶ ನಾಯ್ಕ ನರಮುಂಡಿಗೆ, ತೋಟಪ್ಪ ನಾಯ್ಕ, ಶಿವಕುಮಾರ ಇತರರಿದ್ದರು.