ಯಲ್ಲಾಪುರ: ಕಾವ್ಯದಿಂದ ಮನಸ್ಸು ಮನಸುಗಳನ್ನು ಬೆಸೆಯುವ- ಅರಳಿಸುವ ಕೆಲಸ ವಾಗಬೇಕೆಂದು ಸಾಹಿತಿ ಭಾಗೀರಥೀ ಹೆಗಡೆ ಹೇಳಿದರು.
ಅವರು ಶನಿವಾರ ಸಂಜೆ ಪಟ್ಟಣದ ಗಾಂಧಿ ಕುಟೀರದಲ್ಲಿ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕ ಇವರ ಆಶ್ರಯದಲ್ಲಿ ಹಮ್ಮಿಕೊಂಡ ಸಂಕಲ್ಪ ಉತ್ಸವದಲ್ಲಿ ನಡೆದ ಬಾರಿಸು ಕನ್ನಡ ಡಿಂಡಿಮ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡುತ್ತಿದ್ದರು. ಮನುಷ್ಯ ಮನುಷ್ಯನಾಗಿ ಬದುಕಲು ಕಲೆ, ಸಾಹಿತ್ಯಗಳು ಪೂರಕವಾಗಿವೆ ಎಂದ ಅವರು, ಕನ್ನಡ ಕೇವಲ ಭಾಷೆಯಲ್ಲ. ಅದು ನಮ್ಮ ಸಂಸ್ಕೃತಿ. ಕನ್ನಡತನವನ್ನು ಉಳಿಸುವ ಕೆಲಸ ಎಲ್ಲ ಕನ್ನಡಿಗರಿಂದ ಆಗಬೇಕು ಎಂದರು.
ಧಾರವಾಡ ಆಕಾಶವಾಣಿ ಕಾರ್ಯಕ್ರಮ ನಿರ್ದೇಶಕ ಬಸು ಬೇವಿನ ಗಿಡದ ಮಾತನಾಡಿ, ಕನ್ನಡದ ಪ್ರೀತಿ ನವಂಬರಿಗಷ್ಟೇ ಸೀಮಿತ ವಾಗಬಾರದು. ಒಣ ಮಾತು ಆಡಿದರೆ ಸಾಲದು. ಕನ್ನಡದ ಮರ ಅಮರವಾಗಿಸುವ ಕೆಲಸವಾಗಬೇಕೆಂದರು.
ಸಾಹಿತಿ ಪ್ರಕಾಶ ಶೆಟ್ಟಿ ಕಡಿಮೆ ಮಾತನಾಡಿ, ಕನ್ನಡ ಪ್ರತಿಭೆಗಳಿಗೆ ನೀರೆರೆಯುವ, ಕನ್ನಡ ಕಟ್ಟುವ ಕೆಲಸ ದೃಢವಾಗಿ ಆಗಬೇಕೆಂದರು.
ಸಾಹಿತಿಗಳಾದ ರೇಣುಕಾ ರಮಾನಂದ, ಜ್ಯೋತಿ ಆಚಾರಿ, ವನರಾಗ ಶರ್ಮಾ, ಬಿ.ಆರ್ ಸಿ ಸಂಯೋಜನಾಧಿಕಾರಿ ಶ್ರೀರಾಮ ಹೆಗಡೆ, ಸಂಕಲ್ಪ ಅಧ್ಯಕ್ಷ ಪ್ರಮೋದ ಹೆಗಡೆ ಭಾಗವಹಿಸಿದ್ದರು.
ಜಿಲ್ಲಾಕೇಂದ್ರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶಿವಲೀಲಾ ಹುಣಸಗಿ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕಿ ಭಾರತೀ ನಲವಡೆ ಸ್ವಾಗತಿಸಿದರು. ಸುಧಾಕರ ಜಿ.ನಾಯಕ, ಆಶಾ ಶೇಟ್, ದತ್ತಾತ್ರಯ ಭಟ್ ಕಣ್ಣಿಪಾಲ್, ರೇಖಾ ಭಟ್ಟ, ನವೀನ ಕುಮಾರ ನಿರೂಪಿಸಿದರು. ಜಿಲ್ಲೆಯ ವಿವಿಧ ಭಾಗಗಳಿಂದ ಸುಮಾರು ಐವತ್ತರಷ್ಟು ಕವಿಗಳು ಭಾಗವಹಿಸಿದ್ದರು.