ಶಿರಸಿ: ಶ್ರೀ ಸ್ವರ್ಣವಲ್ಲೀ ಕೃಷಿ ಪ್ರತಿಷ್ಠಾನದ ಆಶ್ರಯದಲ್ಲಿ ಲಕ್ಷ್ಮೀ ನೃಸಿಂಹ ದೇವರ ರಥೋತ್ಸವದ ಸಂದರ್ಭದಲ್ಲಿ ಕಳೆದ ಮೇ 24ರಂದು ಅಂತರ್ಜಾಲದ ಮೂಲಕ ನಡೆದಿದ್ದ ರಾಜ್ಯಮಟ್ಟದ ‘ಕೃಷಿ ರಸಪ್ರಶ್ನೆ ಸ್ಪರ್ಧೆಯ ‘ ವಿಜೇತರಿಗೆ ಪ್ರಶಸ್ತಿ ವಿತರಣಾ ಸಮಾರಂಭವು ಸ್ವರ್ಣವಲ್ಲಿ ಮಹಾಸಂಸ್ಥಾನದಲ್ಲಿ ಜರುಗಿತು.
ಕೃಷಿ ರಸಪ್ರಶ್ನೆ ಸ್ಪರ್ಧೆ ಯನ್ನು 2012ರಿಂದ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಪೂರ್ಣ ಸಹಕಾರದಲ್ಲಿ ಪ್ರತಿ ವರ್ಷ ನಡೆಸಿಕೊಂಡು ಬರುತ್ತಿದ್ದು, ಈ ವರ್ಷ ಕೋವಿಡ್ ರಾಷ್ಟ್ರೀಯ ವಿಪ್ಲವ ಇರುವುದರಿಂದ ಸ್ವರ್ಣವಲ್ಲೀ ಶ್ರೀಗಳ ಅಪೇಕ್ಷೆಯಂತೆ, ಸರಕಾರದ ಕೋವಿಡ್ ಮಾರ್ಗ ಸೂಚಿಯನ್ನು ಅನುಸರಿಸಿ, ಮಕ್ಕಳಲ್ಲಿ ಕೃಷಿ ಪದ್ಧತಿ ಮತ್ತು ತಂತ್ರಜ್ಞಾನದ ಬಗ್ಗೆ ಮಾಹಿತಿ ಹಾಗೂ ಜಾಗೃತಿ ಮೂಡಿಸಲು ಕೃಷಿ-ತೋಟಗಾರಿಕೆ-ಪರಿಸರ-ತಂತ್ರಜ್ಞಾನಕ್ಕೆ ಸಂಬಂಧಿಸಿದಂತೆ ಕೃಷಿ ರಸಪ್ರಶ್ನೆ ಕಾರ್ಯಕ್ರಮ ಆನ್ಲೈನ್ ನಲ್ಲಿ ಯಶಸ್ವಿಯಾಗಿ ನಡೆದಿತ್ತು. ಪ್ರೌಢಶಾಲಾ ಮಕ್ಕಳಿಗಾಗಿ ಹಮ್ಮಿಕೊಂಡ ಈ ಕಾರ್ಯಕ್ರಮಕ್ಕೆ ರಾಜ್ಯದ 30 ಜಿಲ್ಲೆಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದ್ದು ಒಟ್ಟೂ 1920 ಮಕ್ಕಳು ಭಾಗವಹಿಸಿದ್ದರು.
ದೇವನಳ್ಳಿ ಪ್ರೌಢಶಾಲೆಯ 9 ನೇ ತರಗತಿ ವಿದ್ಯಾರ್ಥಿ ರೋಹನ್ ಉಮೇಶ್ ನಾಯಕ ಪ್ರಥಮ ಸ್ಥಾನದೊಂದಿಗೆ, ನಗದು 3000 ರೂ, . ಯಲ್ಲಾಪುರದ ಮದರ್ ತೆರೇಸಾ ಪ್ರೌಢಶಾಲೆಯ 10 ನೇ ತರಗತಿ ವಿದ್ಯಾರ್ಥಿ ರಾಮಕೃಷ್ಣ ವಿ ಭಟ್ ಕವ್ವಾಳೆ ದ್ವಿತೀಯ ಸ್ಥಾನದೊಂದಿಗೆ 2000 ನಗದು, ಮತ್ತು ಮುಂಡಗೋಡದ ಲೊಯೋಲಾ ಪ್ರೌಢಶಾಲೆಯ ಸೌಜನ್ಯಾ ರಾಯ್ಕರ್ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಮಾಧಾನಕರ ಬಹುಮಾನವನ್ನು ಚಂದನ ಪ್ರೌಢಶಾಲೆಯ ಸುಮುಖ ಹೆಗಡೆ, ಎಸ್.ಎಸ್.ಎಚ್.ಎಸ್ ಕವಲಕ್ಕಿ ಹೊನ್ನಾವರದ ರಕ್ಷಿತಾ ಶಾಂತಾರಾಮ್ ಹೆಗಡೆ, ಯಲ್ಲಾಪುರದ ವಿಶ್ವ ದರ್ಶನ ಪ್ರೌಢಶಾಲೆಯ ಸಿಂಚನಾ ಉ ಭಟ್ ಹಾಗೂ ಸುಮನ್ ಗಣೇಶ ಹೆಗಡೆ ಹರ್ತೆಬೈಲ್ ಶ್ರೀ ಜಗದಂಬಾ ಪ್ರೌಢಶಾಲೆ ಸರಕುಳಿ ಪಡೆದುಕೊಂಡಿದ್ದಾರೆ.
ಸ್ವರ್ಣವಲ್ಲಿ ಕೃಷಿ ಪ್ರತಿಷ್ಠಾನದ ಗೌರವಾಧ್ಯಕ್ಷರೂ ಆದ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು ಪ್ರಶಸ್ತಿ ಫಲಕಗಳನ್ನಿತ್ತು ಮಂತ್ರಾಕ್ಷತೆ ನೀಡಿ ಆಶೀರ್ವದಿಸಿದರು. ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆರ್ ಎನ್ ಹೆಗಡೆ ಉಳ್ಳಿಕೊಪ್ಪ ಕಾರ್ಯದರ್ಶಿ ಸುರೇಶ್ ಹೆಗಡೆ ಹಕ್ಕೀಮನೆ ಉಪಸ್ಥಿತರಿದ್ದರು. ಸ್ಪರ್ಧಾ ವಿಭಾಗದ ಸಂಚಾಲಕ ರತ್ನಾಕರ ಹೆಗಡೆ ಬಾಡ್ಲಕೊಪ್ಪ ನಿರ್ವಹಿಸಿದರು. ಸದಸ್ಯ ಶ್ರೀಧರ ಹೆಗಡೆ ಖಾಸಾಪಾಲ್ ಸಹಕರಿಸಿದರು. ಅಂತರ್ಜಾಲ ಸ್ಪರ್ಧೆಗೆ ಸ್ವರ್ಣವಲ್ಲಿ ಯುವ ಪರಿಷತ್, ಸ್ವರ್ಣವಲ್ಲೀ ಭಕ್ತವೃಂದ, ಹಾಗೂ ಸೇವಾನಂದ ಬಳಗ ಸಹಕಾರ ನೀಡಿತ್ತು.