ಶಿರಸಿ: ಅನೇಕ ಸಂಪ್ರದಾಯ ಜನಪದ ಸಂಸ್ಕೃತಿಯನ್ನು ಒಡಲಲ್ಲಿ ತುಂಬಿಕೊಂಡಿರುವ ದೀಪಾವಳಿ ಹಬ್ಬ ಸಂಪನ್ನಗೊಂಡಿದೆ.
ಮಲೆನಾಡು ಭಾಗದ ದೀಪಾವಳಿ ಹಬ್ಬ ವಿಶೇಷ ಆಚರಣೆಗಳಿಂದ ಕೂಡಿದ್ದು, ಬೂರೆ ಹಬ್ಬ, ಬಲಿವೇಂದ್ರನ ಪೂಜೆ, ಹುಲಿಯಪ್ಪ, ಬೀರಪ್ಪನ ಪೂಜೆ, ತುಳಸಿ ಪೂಜೆ, ಗೋ ಪೂಜೆ ಹೀಗೆ ಅನೇಕ ಸಂಗತಿಗಳು ಈ ದೊಡ್ಡ ಹಬ್ಬದಲ್ಲಿ ಅಡಕವಾಗಿದೆ. ಅದರಲ್ಲೂ ಎಣ್ಣೆ ಸ್ನಾನ, ಕೋಲಾಟ, ದನಬೈಲು, ಗುರಿಕಾಯಿ ಬೀಂಗೆ, ಇವೆಲ್ಲ ಹಬ್ಬದ ಬಲು ಸಂಭ್ರಮದ ಆಚರಣೆಗಳು. ದೀಪಾವಳಿಯ ಕೊನೇದಿನ ಗೋ ಪೂಜೆ ಹಾಗು ದನಬೈಲು ಕಟ್ಟೆ ಹೆಚ್ಚು ಆಕರ್ಷಣೀಯ ಕಾರ್ಯಕ್ರಮಗಳು.
ಗೋವಿಗೆ ಸ್ನಾನ ಮಾಡಿಸಿ, ಮೇಲೆ ಶೇಡಿ, ಕೆಮ್ಮಣ್ಣಿನ ಹಚ್ಚು ಹಾಕಲಾಗುತ್ತದೆ. ಗೋಟಡಿಕೆ ಹಾರ, ಹೂವಿನ ಹಾರಹಾಕಿ ಪೂಜಿಸಲಾಗುತ್ತದೆ. ನಂತರ ಊರ ಹೊರಗಿನ ಬೈಲಿಗೆ ಎಲ್ಲ ಗೋವುಗಳನ್ನು ಕರೆದೊಯ್ಯಲಾಗುತ್ತದೆ. ಅಲ್ಲಿ ಬಾಸಿಂಗ ಕಟ್ಟಿದ ಹೋರಿಗಳನ್ನು ಓಡಿಸಲಾಗುತ್ತದೆ. ಅವುಗಳ ಹಿಂದೆ ಓಡುವ ಯುವಕರ ಸಂಭ್ರಮ ಮುಗಿಲು ಮುಟ್ಟುತ್ತದೆ. ನಂತರ ರಾತ್ರಿಯಿಡೀ ಮನೆ ಮನೆಗೆ ಬೀಗಿ ಊದುತ್ತ ಸಂಚರಿಸುವ ಯುವಕರ ಹಿಂಡು ತಾಳ, ಕೋಲುಗಳನ್ನು ಹಿಡಿದು ಜಾನಪದ ಹಾಡಿಗೆ ಹೆಜ್ಜೆ ಹಾಕುತ್ತಾರೆ.
ಬೀಗಿ ದೀಪಾವಳಿಯ ಕೊನೇಯ ಮನರಂಜನಾ ಕಾರ್ಯಕ್ರಮ ಅಂದರೆ ತಪ್ಪಾಗಲಾರದು. ಹಬ್ಬದ ಕೊನೆಯ ದಿನದ ಆಚರಣೆ ಮುಗಿನ ಬಳಿಕ ಊರ ದೇವರ ಮುಂದೆ ಸಾಸ್ಟಾಂಗ ನಮಸ್ಕಾರ ಮಾಡಿ ಪ್ರಾರ್ಥಿಸಿದ ಬಂತರ ಎಣ್ಣೆ ದೀಪ ಹಿಡಿದು ಹೊರಡುತ್ತಾರೆ. ಪ್ರತಿ ಮನೆಯಲ್ಲೂ ಎಣ್ಣೆ, ಕಾಯಿ, ಹಣ ಪಡೆದು ಅದನ್ನು ದೇವರಿಗೆ ಅರ್ಪಿಸಲಾಗುತ್ತದೆ.
ಹೀಗೆ ವಿವಿಧ ಹಂತಗಳಲ್ಲಿ ನಡೆಯುವ ದೀಪಾವಳಿ ಹಬ್ಬ ಈವರ್ಷವೂ ಜಿಲ್ಲೆಯಲ್ಲಿ ಸಂಪನ್ನಗೊಂಡಿದ್ದೆ.