ಶಿರಸಿ: ಹಬ್ಬದ ಸಡಗರವನ್ನು ಹೆಚ್ಚಿಸುವಲ್ಲಿ ಅಗತ್ಯ ಸಾಮಗ್ರಿಗಳಾದ ಹೂವು-ಹಣ್ಣುಗಳು ಬಹುತೇಕ ಪ್ರಮುಖ ಪಾತ್ರವನ್ನು ವಹಿಸುತ್ತದೆ. ದೀಪಾವಳಿ ಗೋಪೂಜೆಯ ಮುನ್ನಾದಿನವಾದ ಗುರುವಾರದಂದು ಶಿರಸಿ ಮಾರುಕಟ್ಟೆಯಲ್ಲಿ ಜನರು ಹೂವಿನ ಗುಚ್ಚಗಳಿಗೆ ಮುಗಿಬಿದ್ದಿದ್ದರು.
ಗೊಂಡೆ, ಸೇವಂತಿಕೆ, ಕಮಲ, ಕನಕಾಂಬರ ಸೇರಿದಂತೆ ವಿವಿಧ ಹೂವಿನ ರಾಶಿಗೆ ಲಗ್ಗೆಯಿಟ್ಟ ಜನತೆ, ಅಂಗಡಿಕಾರರಿಂದ ಚೌಕಾಸಿ ಮಾಡಿ ಹೂವುಗಳನ್ನು ಒಯ್ಯುವ ದೃಶ್ಯ ಸರ್ವೇ ಸಾಮಾನ್ಯವಾಗಿದೆ. ಒಂದು ಮಾರು ಹೂವಿಗೆ 60 ರಿಂದ 80 ರೂಪಾಯಿ ವೆರೆಗಿದೆ.
ಲಕ್ಷ್ಮೀಪೂಜೆ ಹಾಗು ದೇವರ ನೈವೇದ್ಯಕ್ಕೆ ಹಣ್ಣುಗಳ ಖರೀದಿಯೂ ಜೋರಾಗಿ ನಡೆದಿದ್ದು, ಶಿರಸಿಯಲ್ಲಿ ಇದೇ ಮೊದಲ ಬಾರಿಗೆ ಹಣ್ಣಿನ ಮಾರುಕಟ್ಟೆಗೆ ಲಗ್ಗೆ ಇಟ್ಟಿರುವ ನಮ್ಮ ಅಂಗಡಿ ಎನ್ನುವ ಹಣ್ಣಿನಂಗಡಿ ಜನತೆಯ ವಿಶೇಷ ಆಕರ್ಷಣೆಯಾಗಿದೆ.
ಕಳೆದ ಎರಡು ದಿನಗಳಿಂದ ಮಾರುಕಟ್ಟೆಯಲ್ಲಿ ಜನರ ಅಬ್ಬರ ಕಡಿಮೆ ಇದ್ದು, ಹಬ್ಬದ ಮುನ್ನಾದಿನವಾದ ಗುರುವಾರ ಸ್ವಲ್ಪ ಹೆಚ್ಚಿದ್ದು, ಜಿಲ್ಲೆಯಲ್ಲಿ ನಿನ್ನೆಯಿಂದ ಮಳೆ ಸುರಿಯುತ್ತಿರುವ ಕಾರಣಕ್ಕೆ ಹಬ್ಬದ ಖರೀದಿ ಸ್ವಲ್ಪ ಮಂಕಾದಂತೆ ಕಂಡುಬಂದಿದೆ