ಶಿರಸಿ: ಒಂದೆಡೆ ಮನೆಯಲ್ಲಿ ಸಂತಸ-ಸಡಗರದಿಂದ ದೀಪಾವಳಿ ಹಬ್ಬವನ್ನು ಆಚರಿಸುತ್ತಿದ್ದರೆ, ಶಿರಸಿಯ ಹುಬ್ಬಳ್ಳಿ ರಸ್ತೆಯಲ್ಲಿರುವ ಡಾನ್ ಬಾಸ್ಕೋ ಶಾಲೆಯಲ್ಲಿ ಗುರುವಾರ, ದೀಪಾವಳಿ ಹಬ್ಬದ ಸಂದರ್ಭದಲ್ಲಿಯೂ ಸಹ ವಿದ್ಯಾರ್ಥಿಗಳನ್ನು ಶಾಲೆಗೆ ಕರೆಯಿಸಿ ತರಗತಿಯನ್ನು ನಡೆಸಿದ್ದು ಪಾಲಕರ ಆಕ್ಷೇಪಕ್ಕೆ ಕಾರಣವಾಯಿತು.
ಗುರುವಾರ ದೀಪಾವಳಿ ಹಬ್ಬದ ಲಕ್ಷ್ಮೀ ಪೂಜೆ ಇದ್ದರೂ ಸಹ, ಶಾಲೆಯ ಆಡಳಿತ ಮಂಡಳಿ ಶಾಲೆಗೆ ಆಗಮಿಸುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿತ್ತು ಎನ್ನಲಾಗಿದೆ. ಹಿಂದುಗಳ ಹಬ್ಬವಾದ ದೀಪಾವಳಿಯ ದಿನ ಶಾಲೆಗೆ ರಜೆ ನೀಡದೇ ತರಗತಿ ನಡೆಸುತ್ತಿರುವುದು ಕೆಲ ಪಾಲಕರ ಆಕ್ಷೇಪಕ್ಕೆ ಕಾರಣವಾಗಿದೆ. ಈ ವೇಳೆ ಸ್ಥಳಕ್ಕಾಗಮಿಸಿದ ಹಿಂದೂ ಸಂಘಟನೆಗಳ ಪ್ರಮುಖರು ಹಾಗು ಪಾಲಕರು, ಶಾಲಾ ಮುಖ್ಯಸ್ಥರೊಡನೆ ಮಾತನಾಡಿದ್ದಾರೆ.
ಪಾಲಕರ ಆಕ್ಷೇಪಕ್ಕೆ ಮಣಿದ ಶಾಲಾ ಆಡಳಿತ ಮಂಡಳಿ ಅಂತಿಮವಾಗಿ ತರಗತಿಯನ್ನು ಮೊಟಕುಗೊಳಿಸಿ, ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆ.