ಜೋಯಿಡಾ: ಜನರ ಸಮಸ್ಯೆಗೆ ಪರಿಹಾರ ನೀಡುವ ಸಲುವಾಗಿ ಕಂದಾಯ ಇಲಾಖೆಯಿಂದ ಕಂದಾಯ ಅದಾಲತ್ ನಡೆಸಲಾಗುತ್ತಿದ್ದು, ಅರ್ಹರಿಗೆ ಪಿಂಚಣಿ ಸೌಲಭ್ಯ ಕೂಡಾ ಮಾಡಿಕೊಡಲಾಗುತ್ತಿದೆ. ಪ್ರತಿಯೊಬ್ಬರೂ ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ಜೋಯಿಡಾ ತಹಸೀಲ್ದಾರ್ ಸಂಜಯ ಕಂಬಳೆ ಹೇಳಿದರು.
ಇಲ್ಲಿನ ಕುಣಬಿ ಸಮುದಾಯ ಭವನದಲ್ಲಿ ಹಮ್ಮಿಕೊಂಡಿದ್ದ ನ್ಯಾಯಾಲಯದ ನಡಿಗೆ ಹಳ್ಳಿ ಕಡೆಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಬ್ಬರೂ ಕಾನೂನಿನ ಅರಿವು ಪಡರದುಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ. ಜನರು ಈ ಕುರಿತು ಆಸಕ್ತಿ ತೋರಬೇಕು ಎಂದು ಹೇಳಿದರು.
ನ್ಯಾಯವಾದಿ ಎಸ್.ಜಿ. ದೇಸಾಯಿ ಮಾತನಾಡಿ, ಕೇಂದ್ರ ಸರ್ಕಾರ ಹಮ್ಮಿಕೊಂಡ ಕಾರ್ಯಕ್ರಮ ಇದಾಗಿದ್ದು, ಆರ್ಥಿಕವಾಗಿ ಹಿಂದುಳಿದವರಿಗೆ ಉಚಿತ ಕಾನೂನು ಸೇವೆ ಕೂಡಾ ಸಿಗುತ್ತಿದೆ ಎಂದು ತಿಳಿಸಿದರು.
ನ್ಯಾಯವಾದಿ ಸೋಮಕುಮಾರ ಎಸ್ ಮಾತನಾಡಿ, ಸ್ವಾತಂತ್ರ್ಯ ಸಿಕ್ಕು 70 ವರ್ಷ ಕಳೆದರೂ ನಮಗೆ ಕಾನೂನಿನ ಅರಿವು ಆಗಿಲ್ಲ. ಕಾನೂನಿನ ಅರಿವು ನಮಗಿದ್ದರೆ ಸಮಸ್ಯೆ ಎದುರಾದಾಗ ಅದರಿಂದ ಹೊರಬರಲು ಸಾಧ್ಯವಾಗುತ್ತದೆ ಎಂದರು. ಆರ್.ಜೆ. ಎಸ್ ಪ್ರವೀಣಕುಮಾರ ಕಾನೂನು ಅರಿವು-ನೆರವು ಅಭಿಯಾನದ ಜಾಥಾಕ್ಕೆ ಚಾಲನೆ ನೀಡಿದರು.
ನ್ಯಾಯವಾದಿ ಎಸ್. ಎಸ್ ಕುಲಕರ್ಣಿ, ಜೊಯಿಡಾ ಗ್ರಾ.ಪಂ ಅಧ್ಯಕ್ಷ ಅರುಣ ಕಾಮ್ರೇಕರ್ ಇತರರು ಇದ್ದರು.