ಶಿರಸಿ: ಅಜಿತಮನೋಚೇತನಾ ವಿಕಾಸ ಶಾಲೆ ಆವಾರಣದಲ್ಲಿ ಅ.2 ರಂದು ವಿಶೇಷ ಮಕ್ಕಳ ಪಾಲಕರು- ಶಿಕ್ಷಕರ ಜಿಲ್ಲಾ ಮಟ್ಟದ ತರಬೇತಿ ಕಾರ್ಯಾಗಾರ ನಡೆಯಿತು. ಕಾರ್ಯಾಗಾರ ಉದ್ಘಾಟನೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಅಸಿಸ್ಟಂಟ್ ಕಮೀಶನರ್ ಆಕೃತಿ ಬನ್ಸಾಲ್ ಸಮಾಜ ಸಂಸ್ಥೆ, ಸರ್ಕಾರ ಸೇರಿ ಅಂಗವಿಕಲರ ಸೇವೆ, ಶಿಕ್ಷಣ ಕಾರ್ಯ ಮಾಡಿದರೆ ಯಶಸ್ವಿ ಆಗುತ್ತದೆ. ಇದಕ್ಕೆ ಅಜಿತ ಮನೋಚೇತನಾ ಸಂಸ್ಥೆ ಉತ್ತಮ ಉದಾಹರಣೆ ಎಂದು ಅಭಿಪ್ರಾಯ ನೀಡಿದರು.
ಆರತಿ ಶೆಟ್ಟರ, ಅರ್ಬನ್ ಬ್ಯಾಂಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರು ಕಾರ್ಯಾಗಾರ ಉದ್ಘಾಟಿಸಿ ಬುದ್ಧಿ ಮಾಂದ್ಯತೆ, ಅಂಗವಿಕಲತೆ ಇರುವ ಮಕ್ಕಳಿಗೆ ಶಿಕ್ಷಣ ನೀಡುವ ಮಾನವೀಯ ಕಾರ್ಯ ನಡೆಸುವ ಶಿಕ್ಷಕರು, ಸಂಸ್ಥೆಗಳನ್ನು ಸಮಾಜ ಬೆಂಬಲಿಸಬೇಕು ಎಂದರು.
ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಮಾತನಾಡಿ, ಸರ್ಕಾರದ ಹಲವು ಸೌಲಭ್ಯಗಳಿವೆ. ಆದರೆ ಸಂಸ್ಥೆಗಳು, ಸಮಾಜಿಕ ಕಾರ್ಯಕರ್ತರು, ತಳಮಟ್ಟದ ಅಂಗವಿಕಲರ ಇಲಾಖಾ ಅಧಿಕಾರಿ ಸಿಬ್ಬಂದಿ ಈ ಸೌಲಭ್ಯಗಳು ಅಂಗವಿಕಲ ವ್ಯಕ್ತಿಗಳಿಗೆ ಸಿಗುವಂತೆ ವಿಶೇಷ ಪ್ರಯತ್ನ ನಡೆಸಬೇಕು ಎಂದು ಅಶೀಸರ ತಿಳಿಸಿದರು.
ಬುದ್ಧಿಮಾಂದ್ಯತೆ ಇರುವ ವ್ಯಕ್ತಿಗಳಿಗೆ ಮಾಸಾಶನ ನೀಡುವಾಗ ಪಾಲಕರ ಆದಾಯ ಮಿತಿ ಪರಿಗಣಿಸಬಾರದು. ಈ ಬಗ್ಗೆ ಸರ್ಕಾರದ ನೀತಿಯಲ್ಲಿ ಬದಲಾವಣೆ ತರಬೇಕು. ವಿಶೇಷ ಮಕ್ಕಳ ಶಾಲಾ ಶಿಕ್ಷಕರು ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ವಿಶೇಷ ಗಮನ ನೀಡಬೇಕು. ಪಾಲಕರ ಸಹಭಾಗಿತ್ವ ಹೆಚ್ಚಿಸಬೇಕು ಎಂದರು.
ಸಂಸ್ಥೆ ಅಧ್ಯಕ್ಷ ಸುಧೀರ ಭಟ್ ಸ್ವಾಗತ ಮಾಡಿದರು. ಟ್ರಸ್ಟಿಗಳಾದ ವಿ.ಆರ್. ಹೆಗಡೆ ಹೊನ್ನೆಗದ್ದೆ ಅವರು 25 ವರ್ಷಗಳ ನಿರಂತರ ಸೇವೆ ನೀಡುತ್ತಿರುವ ಅಜಿತ ಮನೋಚೇತನಾಕ್ಕೆ ಸಮಾಜದ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಶಿಕ್ಷಣ ತಜ್ಞ. ಡಾ|| ಕೇಶವ ಕೊರ್ಸೆ ಶಿಕ್ಷಕರಿಗೆ ಆಪ್ತ ಸಲಹೆ ನೀಡಿದರು. ತಾಲೂಕಾ ಮಹಿಳಾ ಮಕ್ಕಳ ಕಲ್ಯಾಣ ಅಧಿಕಾರಿ ದತ್ತಾತ್ರೇಯ ಭಟ್ ಅವರು ಮೊದಲ ಗೋಷ್ಠಿಯಲ್ಲಿ ಸರ್ಕಾರ ನೀಡುವ ಅಂಗವಿಕಲರ ಸೇವಾ ಸೌಲಭ್ಯದ ವಿವರ ನೀಡಿದರು.
2ನೇ ಅವಧಿಯಲ್ಲಿ ಫಿಜಿಯೋ ಥೆರಪಿ ತಜ್ಞ ಡಾ|| ಕಮಲ್ ಪಟೇಲ್ ಅವರು ಪಾಲಕರು, ಶಿಕ್ಷಕರ ಜೊತೆ ಸಂವಾದ ನಡೆಸಿದರು. ಸಾಗರದ ಚೈತನ್ಯ ವಿಶೇಷ ಮಕ್ಕಳ ಸಂಸ್ಥೆಯ ಮುಖ್ಯ ಶಿಕ್ಷಕಿ ಶಾಂತಲಾ ಸುರೇಶ ಕರೋನಾ ಸಂದರ್ಭದಲ್ಲಿ ಆನ್‍ಲೈನ್ ಪ್ರಯೋಗ ಕುರಿತು ಅನುಭವ ಹಂಚಿಕೊಂಡರು.
ಡಾ|| ದಿನೇಶ ಹೆಗಡೆ ಅವರು ವಿಶೇಷ ಮಕ್ಕಳ ಆರೋಗ್ಯ ಸಮಸ್ಯೆಗಳ ಬಗ್ಗೆ ಸಂವಾದ ನಡೆಸಿದರು. ಡಾ|| ಕೇಶವ ಕೊರ್ಸೆ ಅವರು ಪಾಲಕರ ಕರ್ತವ್ಯಗಳು, ಶಿಕ್ಷಕರು ಗಮನಿಸಬೇಕಾದ ಅಂಶಗಳ ಬಗ್ಗೆ ವಿವರ ಸಮಾಲೋಚನೆ ನಡೆಸಿದರು.
ಸಮಾರೋಪದಲ್ಲಿ ಆಯುಷ್ ಇಲಾಖೆ ವತಿಯಿಂದ ವಿಶೇಷ ಮಕ್ಕಳಿಗೆ ಟಾನಿಕ್ ಕಿಟ್ ನೀಡಲಾಯಿತು. ಮುಖ್ಯ ಶಿಕ್ಷಕಿ ನರ್ಮದಾ ವಂದಿಸಿದರು. ಸುಮಿತ್ರಾ ಪ್ರಾರ್ಥನೆ ಹಾಡಿದರು. ಪರಮಳ ಗೀತಾ ನಿರ್ವಹಣೆ ಮಾಡಿದರು. ಯೋಗ ಶಿಕ್ಷಕಿ ಶ್ಯಾಮಲಾ ಹಾಗೂ ಶಿಕ್ಷಕ ಗಣೇಶ ತಮ್ಮ ಅನುಭವ ತಿಳಿಸಿದರು.