ಶಿರಸಿ: ಕ್ಯಾಸಿನೋ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿಗೆ ಪೂರಕವೆಂಬ ಜಿಲ್ಲಾ ಉಸ್ತುವಾರಿ ಸಚಿವರ ಹೇಳಿಕೆಗೆ ಪ್ರಬಲ ಖಂಡನೆ. ನೈಸರ್ಗಿಕ ಸೊಬಗು ಮತ್ತು ಸಂಪತ್ತಿನ ಆಧಾರದ ಮೇಲೆ ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಆಗಬೇಕು ವಿನಾಃ ಜಿಲ್ಲೆಯ ಕಲೆ, ಸಂಸ್ಕೃತಿ ಮತ್ತು ಜನ ಜೀವನ ಅಸ್ತವ್ಯಸ್ತವಾಗುವ ಪ್ರವಾಸೋದ್ಯಮ ಅವಶ್ಯಕವಿಲ್ಲ ಎಂದು ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ ಜಿಲ್ಲಾ ಉಸ್ತುವಾರಿ ಸಚಿವರ ಚಿಂತನೆ ಪ್ರಬಲವಾಗಿ ವಿರೋಧಿಸಿದ್ದಾರೆ.
ಕನ್ನಡ ರಾಜ್ಯೋತ್ಸವದ ಧ್ವಜಾರೋಹಣದ ನಂತರ ನಿನ್ನೆ ಕಾರವಾರದಲ್ಲಿ ಗೋವಾದ ಮಾದರಿಯಲ್ಲಿ ಕ್ಯಾಸಿನೋ ಅಭಿವೃದ್ಧಿಗೆ ಅವಕಾಶ ನೀಡುವುದರಿಂದ ಜಿಲ್ಲೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಸಾಧ್ಯವೆಂದು ನೀಡಿರುವ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏಷ್ಯಾ ಖಂಡದಲ್ಲಿಯೇ ಉತ್ಕ್ರಷ್ಟಮಟ್ಟದ ಜಲಪಾತ, ಕರಾವಳಿ, ಮಲೆನಾಡು, ಪುಣ್ಯ ಕ್ಷೇತ್ರ ಮುಂತಾದವನ್ನು ಪ್ರವಾಸೋದ್ಯಮಕ್ಕೆ ಬಳಕೆ ಮಾಡುವ ಚಿಂತನೆ ಹೊರತಾಗಿ, ಹೆಂಡತಿ ಮಕ್ಕಳು ಉಪವಾಸ ಕೆಡಗುವ, ಜಿಲ್ಲೆಯ ಪರಿಸರ ಸಂಸ್ಕೃತಿಗೆ ಮಾರಕವಾಗುವ ಕ್ಯಾಸಿನೋ ಸಂಸ್ಕೃತಿ ಜಿಲ್ಲೆಗೆ ಅವಶ್ಯಕತೆ ಇಲ್ಲವೆಂದು ಅವರು ಪ್ರತಿಪಾದಿಸಿದ್ದಾರೆ.
ಸಚಿವರಿಗೆ ಕೆಲಸ ಮಾಡುವದಾದರೆ ಜಿಲ್ಲೆಯ ಸಮಸ್ಯೆಗಳೇ ಸಾಕಷ್ಟುಗಳಿವೆ. ಸುಮಾರು 85,000 ಅರಣ್ಯವಾಸಿಗಳ ಭೂಮಿ ಹಕ್ಕಿನ ಸಮಸ್ಯೆ, ರಾಜ್ಯ ಮತ್ತು ರಾಷ್ಟ್ರಮಟ್ಟದ ಯೋಜನೆಯಿಂದ ಸುಮಾರು 20,000 ಕುಟುಂಬ ನಿರಾಶ್ರಿತರಾಗುವರಿಗೆ ಇನ್ನು ಸೂಕ್ತ ಪುನರ್ವಸತಿ, ಸೌಕರ್ಯ ಮತ್ತು ಸೌಲಭ್ಯ ಸಿಗದಿರುವದು, ಉದ್ಯೋಗಕ್ಕಾಗಿ ಜಿಲ್ಲೆಯ ನಿರುದ್ಯೋಗ ಸುಮಾರು 25,000 ಯುವ ಸಮುದಾಯ ಬೇರೆ ಬೇರೆ ಜಿಲ್ಲೆಗಳಿಗೆ ಗಾರ್ಮೆಂಟ್, ಮೀನುಗಾರಿಕೆ ಮತ್ತು ಮೀನಿನ ಫ್ಯಾಕ್ಟರಿಗೆ ವಲಸೆ ಹೋಗುವದು, ಮೀನುಗಾರಿಕೆ ಸಮಸ್ಯೆ, ಸತತ 3 ವರ್ಷದಿಂದ ಅತೀವೃಷ್ಟಿ ಸಂದರ್ಭದಲ್ಲಿ ಅನಾಹುತವಾಗಿರುವ ಮನೆಗಳಿಗೆ ಪರಿಹಾರ, ಬೆಳೆ ವಿಮೆ, ಆರ್ಥಿಕ ನೇರವು ಬರದಿರುವಂತ ಮುಂತಾದ ಸಮಸ್ಯೆಗಳನ್ನ ಸ್ಫಂದಿಸಲು ಕಾರ್ಯ ಪ್ರವೃತ್ತರಾಗುವಂತೆ ಅವರು ಸಚಿವರಿಗೆ ಸೂಚಿಸಿದ್ದಾರೆ ಅಲ್ಲದೇ ಜಿಲ್ಲೆಯ ಜನತೆಯ ಆರ್ಥಿಕ ಸ್ಥಿತಿ ಕ್ಯಾಸಿನೋದಲ್ಲಿನ ಶ್ರೀಮಂತಿಕೆಯ ಮೋಜು ಮಸ್ತಿ ಮಾಡುವ ಸ್ಥಿತಿ ಗತಿ ಇಲ್ಲದಿದ್ದಾಗಿಯೂ ಸಚಿವರ ಚಿಂತನೆ ಈ ದಿಶೆಯಲ್ಲಿರುವುದು ಖೇದಕರ ಎಂದು ಅವರು ಹೇಳಿದರು.
ಬಿಜೆಪಿಯವರೇ ಉತ್ತರಿಸಬೇಕು: ಜಿಲ್ಲೆಯಲ್ಲಿ ಕ್ಯಾಸಿನೋ ಸಂಸ್ಕೃತಿ ಬೆಳೆಯಿಸುವ ಉಸ್ತುವಾರಿ ಸಚಿವರ ಹೇಳಿಕೆ ಇದು ಅವರ ವಯಕ್ತಿಕ ಚಿಂತನೆಯೇ ಆಡಳಿತ ಪಕ್ಷವಾದ ಬಿಜೆಪಿಯ ಚಿಂತನೆಯೇ? ಎಂಬುದನ್ನು ಭಾರತೀಯ ಪಕ್ಷವೇ ಉತ್ತರಿಸಬೇಕು ಎಂದು ರವೀಂದ್ರ ನಾಯ್ಕ ಪ್ರಶ್ನಿಸಿದ್ದಾರೆ.