ಕಾರವಾರ: ಸರ್ಕಾರ ಸ್ವಚ್ಛ ಭಾರತದ ಕುರಿತಾಗಿ ಎಷ್ಟೇ ಜಾಗೃತಿ ಮಾಡಿದರೂ ಸಹ ಮೀನು ಸಾಗಾಟ ನಡೆಸುವ ವಾಹನಗಳ ಚಾಲಕ-ಮಾಲಕರ ಎದುರು ಇದು ಕೋಣನ ಮುಂದೆ ಕಿನ್ನರಿ ಬಾರಿಸಿದಂತಿದೆ.
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ರಸ್ತೆಯಾಗಿ ಬದಲಾಗುವ ಮೊದಲು ಗೋವಾದಿಂದ ಮೀನು ಸಾಗಾಟ ಮಾಡುವ ಹಾಗೂ ಗೋವಾಕ್ಕೆ ಮೀನು ಸಾಗಾಟ ನಡೆಸುವ ವಾಹನಗಳು ಕಾರವಾರ-ಅಂಕೋಲಾ ನಡುವೆ ಅದರಲ್ಲೂ ಹಾರವಾಡಾದ ಬಳಿ ತಮ್ಮ ಲಾರಿಯಲ್ಲಿ ಶೇಖರವಾಗುವ ಮೀನಿನ ನೀರನ್ನು ಖಾಲಿ ಮಾಡಿ ಹೋಗುತ್ತಿದ್ದವು. ಹೀಗಾಗಿ ಸ್ಥಳಗಳಲ್ಲಿ ಸದಾ ಗಬ್ಬು ವಾಸನೆ ಹರಡಿಯೇ ಇರುತ್ತಿತ್ತು. ಈಗ ಹೆದ್ದಾರಿ ಅಗಲಿಕರಣವಾಗಿದ್ದರೂ ಈ ಮೀನಿನ ನೀರನ್ನು ರಸ್ತೆಯ ಪಕ್ಕ ಖಾಲಿ ಮಾಡುವ ಖಾಯಿಲೆ ಈ ವಾಹನಗಳ ಚಾಲಕರಿಗೆ ಕಡಿಮೆಯಾದಂತಿಲ್ಲ!
ಈಗಲೂ ಹಲವು ಲಾರಿಗಳು, ಮೀನಿನ ವ್ಯಾನ್ಗಳು ಮೀನಿನ ನೀರನ್ನು ಕಾರವಾರ-ಅಂಕೋಲಾ ನಡುವೆ ಜನವಸತಿ ಇರುವ ಪ್ರದೇಶಗಳಲ್ಲಿನ ರಸ್ತೆಯ ಪಕ್ಕದಲ್ಲಿಯೇ ಖಾಲಿ ಮಾಡುತ್ತಿವೆ. ಆದ್ದರಿಂದ ಚತುಷ್ಪಥ ರಸ್ತೆಯಲ್ಲಿ ಸಂಚರಿಸುವ ಜನರಿಗೆ ಪ್ರಾಣಿ ಕೊಳೆತಂತಹ ವಾಸನೆಯ ಹಿಂಸೆ ತಪ್ಪುತ್ತಿಲ್ಲ. ಹೆದ್ದಾರಿ ಕಾವಲು ಪೊಲೀಸರಾಗಲಿ, ಮೀನುಗಾರಿಕಾ ಇಲಾಖೆಯವರಾಗಲೀ ಈ ವಾಹನಗಳನ್ನು ಹಿಡಿದು ದಂಡ ಹಾಕುತ್ತಿಲ್ಲ. ಎಲ್ಲವೂ ಒಳ ಒಪ್ಪಂದದ ಪ್ರಕಾರವೇ ನಡೆಸಲಾಗುತ್ತಿದೆ ಎಂಬ ಆರೋಪವಿದೆ.
ಕೆಲವು ಲಾರಿ ಚಾಲಕರಂತೂ ಗೋವಾದಿಂದ ಬರುವಾಗ ಮೀನಿನ ನೀರನ್ನೇ ಲಾರಿಗೆ ಅಳವಡಿಸಿದ ಡ್ರಮ್ಗಳಲ್ಲಿ ತುಂಬಿಕೊಂಡು ಬರುತ್ತಾರೆ. ಕರ್ನಾಟಕ ಪ್ರವೇಶಿಸುತ್ತಿದ್ದಂತೆ ಈ ನೀರನ್ನು ರಸ್ತೆಯಲ್ಲಿ ಚೆಲ್ಲಾಡುತ್ತಾ ಸಾಗುತ್ತಾರೆ. ಅವರಿಗೆ ಯಾವ ಭಯವೂ ಇಲ್ಲ. ಗೋವಾದಲ್ಲಿ ರಸ್ತೆಯಲ್ಲಿ ಒಂದು ಹನಿ ಮೀನಿನ ನೀರು ಬಿದ್ದರೂ ಅಂತಹ ವಾಹನಗಳನ್ನು ಸೀಜ್ ಮಾಡುತ್ತಾರೆ. ಉತ್ತರಕನ್ನಡದಲ್ಲಿ ಹಾಗಲ್ಲ. ಕೊಳೆತ ಪ್ರಾಣಿಯ ದೇಹದಿಂದ ಬರುವ ವಾಸನೆಗಿಂತ ಕೆಟ್ಟದಾದ ವಾಸನೆ ಇರುವ ನೀರನ್ನು ಜಿಲ್ಲಾ ಕೇಂದ್ರ ಕಾರವಾರದಿಂದಲೇ ಬೀದಿಯಲ್ಲಿ ಚೆಲ್ಲುತ್ತ ಸಾಗಿ ಹಾರವಾಡ ಬಳಿ ಖಾಲಿ ಮಾಡಿದರೂ ಯಾರೂ ತಲೆ ಕೆಡಿಸಿಕೊಂಡಿಲ್ಲ.