ಶಿರಸಿ: ಫೇಸ್‌ಬುಕ್‌ನಲ್ಲಿ ಡುಪ್ಲಿಕೇಟ್ ಏಕೌಂಟ್ ಮಾಡಿ ದುಡ್ಡು ಕೇಳುತ್ತಾರೆ. ಅಂತವರ ವಿರುದ್ಧ ಕಾನೂನು ಏನೂ ಹೇಳುತ್ತೇ? ಪೋಲಿಸರು ಖಾಸಗಿ ವ್ಯಕ್ತಿ ಮನೆ ಒಳಗೆ ಏಕಾ ಏಕಿಯಾಗಿ ಪ್ರವೇಶ ಮಾಡಬಹುದೋ? ಸಂಶಯದ ಆಧಾರದ ಮೇಲೆ ಯಾವುದೋ ವ್ಯಕ್ತಿಗೆ ಪೋಲಿಸರು ಹೊಡೆಯಬಹುದೋ? ಹೆಲ್ಮೇಟ್ ಧರಿಸಿ, ದಾಖಲೆ ಇಲ್ಲದಿದ್ದರೇ ಯಾವ ಅಧಿಕಾರಿ ದಂಡ ಹಾಕಬಹುದೋ? ಪೋಲಿಸರು ತನಿಖೆಯ ನೆಪದಲ್ಲಿ ಬೂಟ್ ಹಾಕಿ ಮನೆ ಒಳಗೆ ಬರಬಹುದೊ? ಗಂಡ ಹೆಂಡತಿ ಜಗಳ ಆಗುತ್ತದೆ. ಮನೆಯಲ್ಲಿ ಇಬ್ಬರೆ ಇರುತ್ತಾರೆ. ಜಗಳ ಆದಕ್ಕೆ ಸಾಕ್ಷಿ ಕೊಡಿ ಅಂತ ಪೋಲಿಸರು ಹೇಳುತ್ತಾರೆ. ಯಾವ ಸಾಕ್ಷಿ ಕೊಡಬೇಕು.? ಅಪಘಾತ ಸಂರ್ಭದಲ್ಲಿ ಅಪಘಾತ ವ್ಯಕ್ತಿಗೆ ಆಸ್ಪತ್ರೆಗೆ ಖಾಸಗಿ ವ್ಯಕ್ತಿ ಸೇರಿಸಿದಲ್ಲಿ ತಪ್ಪಾಗುತ್ತದೆಯೋ? ಮುಂತಾದ ಪ್ರಶ್ನೆಗಳು ಗ್ರಾಮಸ್ಥರಿಂದ ಪೋಲಿಸ್ ಅಧಿಕಾರಿಗಳಿಗೆ ನೇರ ನೇರ ಕೇಳಿಬಂದಿರುವ ವಿಶೇಷ ಪ್ರಸಂಗ ಇಂದು ಜರುಗಿದವು.
ಶಿರಸಿ ತಾಲೂಕಿನ ಬಂಡಲ ಗ್ರಾಮ ಪಂಚಾಯತ ಸಭಾ ಭವನದಲ್ಲಿ ಭಾರತ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಪಾನ್‌ಇಂಡಿಯಾ ಅವೇರನೇಸ್ ಹಾಗೂ ಔಟ ರೀಚ್ ಕಾರ್ಯಕ್ರಮ ಅಂಗವಾಗಿ ಏರ್ಪಡಿಸಿದ ‘ಪೋಲಿಸ್ ಮತ್ತು ಜನಸಾಮಾನ್ಯರು’ ಎಂಬ ವಿಷಯದ ಗೋಷ್ಟಿಯಲ್ಲಿ ಗ್ರಾಮೀಣ ಠಾಣೆ ಪೋಲೀಸ್ ಅಧಿಕಾರಿ ಈರಯ್ಯ ಡಿ ಎಸ್ ಅವರಿಗೆ ಗ್ರಾಮಸ್ಥರಿಂದ ಮೇಲಿನಂತೆ ಪ್ರಶ್ನೆ ಕೇಳಿಬಂದವು.
ಗ್ರಾಮಸ್ಥರ ಪ್ರಶ್ನೆಗಳಿಗೆ ಉತ್ತರಿಸುತ್ತ ಸುಳ್ಳು ಪೇಸ್‌ಬುಕ್ ಖಾತೆ ಮತ್ತು ಬ್ಯಾಂಕ್ ಖಾತೆಗೆ ಸಂಬಂಧಿಸಿ ಬರುವ ಸಂದೇಶಕ್ಕೆ ನಂಬಿ ಮೋಸಕ್ಕೆ ಒಳಗಾಗದಿರಿ. ಇಂತಹ ಸಂದರ್ಭದಲ್ಲಿ 112 ನಂಬರಿಗೆ ಪೋನ್ ಮಾಡಿ ಪೋಲೀಸ್ ಇಲಾಖೆಯ ಸಹಕಾರ ಪಡೆದುಕೊಳ್ಳಿ. ಇತ್ತೀಚಿಗೆ ಸೈಬರ್ ಕ್ರೈಮ್ ಪ್ರಕರಣ ಹೆಚ್ಚುತ್ತಿರುವುದು ಆಘಾತಕರ. ಅನ್ಯಾಯಕ್ಕೆ ಒಳಗಾದಾಗ ನೇರವಾಗಿ ಪೋಲೀಸ್ ಠಾಣೆಗೆ ಸಂಪರ್ಕ ಬೆಳೆಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕೆಂದು ಠಾಣಾಧಿಕಾರಿ ಈರಿಯ್ಯ ಡಿ.ಎಸ್ ಅವರು ಈ ಸಂದರ್ಭದಲ್ಲಿ ಹೇಳಿದರು.
ದೇಶದ ಸಂವಿಧಾನದಲ್ಲಿ ನ್ಯಾಯಾಲಯ ಶಿಕ್ಷೆ ವಿಧಿಸುವವರೆಗೂ ಅಪರಾಧಿಯ ಸ್ವತಂತ್ರತೆ ಮತ್ತು ಮೂಲಭೂತ ಹಕ್ಕಿನಿಂದ ವಂಚಿಸಲು ಸಾಧ್ಯವಿಲ್ಲ. ಮಾನವ ಹಕ್ಕು ಉಲ್ಲಂಘನೆಗೆ ಅವಕಾಶವಿಲ್ಲ. ಪೋಲೀಸ್ ಇಲಾಖೆಯ ಕರ್ತವ್ಯ ಜನಪರ ವಾಗಿರಬೇಕು ಎಂದು ಹಿರಿಯ ವಕೀಲ ರವೀಂದ್ರ ನಾಯ್ಕ ಹೇಳಿದರು.
ಕಾರ್ಯಕ್ರಮದ ಉದ್ಘಾಟನೆಯೊಂದಿಗೆ, ಅಧ್ಯಕ್ಷತೆವಹಿಸಿದ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಮಂಗಲ ನಾಯ್ಕ ಮಾತನಾಡುತ್ತ ಮಹಿಳೆಯರ ಮೇಲೆ ದೌರ್ಜನ್ಯ ನಿಯಂತ್ರಿಸಲು ಪ್ರಬಲವಾದ ಕಾನೂನು ಇದ್ದಾಗಲೂ ಪೂರ್ಣ ಪ್ರಮಾಣದ ನ್ಯಾಯ ಒದಗಿಸಲು ಪೋಲೀಸ್ ಇಲಾಖೆ ಸಹಕರಿಸಬೇಕು ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಪಿಡಿಓ ಪವಿತ್ರ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಗ್ರಾಮ ಪಂಚಾಯತ ಮಾಜಿ ಅಧ್ಯಕ್ಷ ದೇವರಾಜ ಮರಾಠೆ ಪ್ರಾಸ್ತವಿಕ ಮಾತನಾಡಿದರು. ವೇದಿಕೆಯ ಮೇಲೆ ಉಪಾಧ್ಯಕ್ಷ ತಿಮ್ಮ ಮರಾಠಿ, ಮಂಜುನಾಥ ಗೌಡ, ಸುಮನಾ ಚೆನ್ನಯ್ಯ ಉಪಸ್ಥಿತರಿದ್ದರು. ಗ್ರಾಮಸ್ಥರ ಪರವಾಗಿ ಕೃಷ್ಣ ಮರಾಠಿ, ಗಜಾನನ ಹೆಗಡೆ, ಸುಮನಾ ಚೆನ್ನಯ್ಯ, ರಘುಪತಿ ಮರಾಠಿ, ಸುನಂಧ ಡಿ ಮರಾಠಿ ಮುಂತಾದವರು ಪ್ರಶ್ನಾವಳಿಯಲ್ಲಿ ಭಾಗವಹಿಸಿದ್ದರು.