ಶಿರಸಿ: ರಾಷ್ಟ್ರೀಯ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಕೌಶಲ್ಯಯುತವಾದ ಶಿಕ್ಷಣ ನೀಡುವುದರ ಜೊತೆಗೆ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಮೂಲಕ ದೇಶದ ಅಭಿವೃದ್ಧಿಗೆ ಕಾರಣವಾಗುತ್ತದೆ ಎಂದು ಕರ್ನಾಟಕ ವಿಜ್ಞಾನ ಕಾಲೇಜಿನ ಉಪನ್ಯಾಸಕರು, ‘ರಾಷ್ಟ್ರೀಯ ಶಿಕ್ಷಣ ನೀತಿ’ ರಾಜ್ಯ ಕಮಿಟಿ ಸದಸ್ಯರೂ ಆದ ಡಾ. ಸುರೇಶ್ ಎಮ್. ತುವರ್ ಹೇಳಿದರು.
ಎಮ್.ಎಮ್ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ, ಆಯ್ ಕ್ಯೂ ಎ ಸಿ, ಎಮ್.ಇ.ಎಸ್ ವಾಣಿಜ್ಯ ಮಹಾವಿದ್ಯಾಲಯ, ಜೆ.ಎಮ್.ಜೆ ಕಾಲೇಜುಗಳ ಸಹಯೋಗದಲ್ಲಿ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ- ಕಾರ್ಯಾಗಾರ’ ದಲ್ಲಿ ಮಾತನಾಡಿದರು. ಮೊದಲಿನಿಂದಲೂ ಭಾರತದಲ್ಲಿ ಒಂದು ಹಂತದ ಶಿಕ್ಷಣ ಪದ್ದತಿ ಜಾರಿಯಲ್ಲಿದ್ದರೂ ಅದರಿಂದ ಬೆರಳೆಣಿಕೆಯ ಜನರು ಮಾತ್ರ ಅಕ್ಷರಸ್ಥರಾಗಿದ್ದಾರೆ. ಹೊಸ ಶಿಕ್ಷಣ ನೀತಿಯ ಮೂಲಕ ದೇಶದ ಪ್ರತಿಯೊಬ್ಬರನ್ನೂ ಸಾಕ್ಷರರನ್ನಾಗಿಸುವ ಪ್ರಯತ್ನ ನಡೆಯುತ್ತಿದೆ. ‘ರಾಷ್ಟ್ರೀಯ ಶಿಕ್ಷಣ ನೀತಿ’ಯನ್ನು ಜಾರಿಗೊಳಿಸುವುದರ ಮೂಲಕ ರಾಷ್ಟ್ರವು ಅಭಿವೃದ್ಧಿಯ ಭದ್ರ ಬುನಾದಿಯನ್ನು ಪಡೆದುಕೊಳ್ಳಲಿದೆ. ಇಂದಿನ ವಿದ್ಯಾರ್ಥಿಗಳಲ್ಲಿ ಪದವಿಯ ಹೊರತಾಗಿಯೂ ಕೌಶಲ್ಯದ ಕೊರತೆ ಎದ್ದು ಕಾಣುತ್ತಿದೆ. ಹೊಸ ಶಿಕ್ಷಣ ನೀತಿಯು ವಿದ್ಯಾರ್ಥಿಗಳಿಗೆ ಕೌಶಲ್ಯಯುತ ಸಮಗ್ರ ಶಿಕ್ಷಣವನ್ನು ಒದಗಿಸುತ್ತದೆ ಎಂದರು.
ಶಿರಸಿಯ ಹಲವು ಕಾಲೇಜಿನ ಉಪನ್ಯಾಸಕರೊಂದಿಗೆ ಹೊಸ ಶಿಕ್ಷಣ ನೀತಿಯ ಆಗುಹೋಗುಗಳ ಬಗ್ಗೆ ಚರ್ಚಿಸುವ ಮೂಲಕ ಯಶಸ್ವೀ ಕಾರ್ಯಾಗಾರಕ್ಕೆ ಸಾಕ್ಷಿಯಾದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಮ್.ಇ.ಎಸ್ ಸಂಸ್ಥೆಯ ಉಪಾಧ್ಯಕ್ಷ ಹಾಲಪ್ಪ ಜಲಕಣ್ಣನವರ್ ರವರು ವಹಿಸಿದ್ದರೆ ಕಾಲೇಜು ಉಪ ಸಮಿತಿ ಸದಸ್ಯ ಲೋಕೇಶ್ ಹೆಗಡೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಎಮ್.ಎಮ್ ಕಾಲೇಜಿನ ಪ್ರಾಚಾರ್ಯ ಡಾ.ಕೋಮಲಾ ಭಟ್ ರವರು ಸ್ವಾಗತಿಸಿದರು. ಡಾ.ದಿವ್ಯಾ ಹೆಗಡೆ ನಿರ್ವಹಿಸಿದರೆ, ಡಾ.ಎಮ್ ಪಿ ಭಟ್ ವಂದಿಸಿದರು.