ಶಿರಸಿ: ಉತ್ತರ ಕನ್ನಡ ಜಿಲ್ಲಾ ಆರ್ಯ ಈಡಿಗ ನಾಮಧಾರಿ ಬಿಲ್ಲವ ನೌಕರರ ಕ್ಷೇಮಾಭಿವೃದ್ಧಿ ಶಿರಸಿ ಇದರ 22ನೇಯ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಅ.31 ರಂದು ತಾಲೂಕಿನ ಅಂಡಗಿಯ ಗುರುಮಠದಲ್ಲಿ ನಡೆಯಲಿದೆ.
ಸೋಲೂರು ನಾರಾಯಣಗುರು ಮಠದ ನೂತನ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಹಾಗೂ ಅಂಡಗಿ ಗುರುಮಠದ ಶ್ರೀ ಕಲ್ಯಾಣ ಸ್ವಾಮೀಜಿ ಇವರ ದಿವ್ಯ ಸಾನಿಧ್ಯದಲ್ಲಿ ನಡೆಯಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಜಿಲ್ಲಾಧ್ಯಕ್ಷ ಡಾ.ನಾಗೇಶ ನಾಯ್ಕ ವಹಿಸಲಿದ್ದಾರೆ. ಕೆ.ಪಿ.ಎಸ್.ಸಿ ಸದಸ್ಯ ಲಕ್ಷ್ಮೀನರಸಯ್ಯ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಮಂಗಳೂರಿನ ಸಹಾಯಕ ಪೆÇಲೀಸ್ ಕಮಿಷನರ್ ಎಸ್.ಮಹೇಶಕುಮಾರ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ನಡೆಸಿಕೊಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಗುರುಮಠದ ಅಧ್ಯಕ್ಷ ಭೀಮಣ್ಣ ನಾಯ್ಕ, ಉಪಾಧ್ಯಕ್ಷ ಸಿ.ಎಫ್.ನಾಯ್ಕ, ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಮೋಹನ್ ಚಂದ್ರಗುತ್ತಿ, ಶಿರಸಿ ಡಿ.ಎಸ್.ಪಿ ರವಿ ನಾಯ್ಕ, ಕುಮಟಾ ನೆಲ್ಲಿಕೇರಿ ಹನುಂಮತ ಬೆಣ್ಣೆ ಸರ್ಕಾರಿ ಪಿಯು ಕಾಲೇಜಿನ ಪ್ರಾಚಾರ್ಯ ಸತೀಶ ನಾಯ್ಕ ಹಾಗೂ ವಿಶೇಷ ಆಹ್ವಾನಿತರಾಗಿ ಅಂತರಾಷ್ಟ್ರೀಯ ಕ್ರೀಡಾಪಟು ಹಾಗೂ ತರಬೇತುದಾರ ಕಾಶಿನಾಥ ನಾಯ್ಕ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಗರಿಷ್ಠ ಅಂಕ ಗಳಿಸಿದ ಸಮಾಜದ ಮೂರು ವಿದ್ಯಾರ್ಥಿಗಳು, ಪಿಯುಸಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗದಲ್ಲಿ ಅತಿ ಹೆಚ್ಚು ಅಂಕ ಪಡೆದ ತಲಾ ಮೂವರು ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಗುವುದು. ಜತೆಗೆ ವಿಶೇಷ ಸಾಧನೆ ಮಾಡಿದ ಸಾಧಕರು ಹಾಗೂ ಸಂಘದ ನಿವೃತ್ತ ಸದಸ್ಯರನ್ನು ಸನ್ಮಾನಿಸಲಾಗುವುದು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಸಂಘದ ಪ್ರಕಟಣೆ ಕೋರಿದೆ.