ಶಿರಸಿ: ಕುಣಿದು ಕುಪ್ಪಳಿಸುತ್ತಿರೋ ಯುವಕ- ಯುವತಿಯರು, ಅವರೊಂದಿಗೆ ತಾವೇನು ಕಮ್ಮಿ ಎನ್ನುವಂತೆ ಹೆಜ್ಜೆ ಹಾಕುತ್ತಿರೋ ಶಿಕ್ಷಕರು- ನಾಗರಿಕರು. ಇದು ಯಾವೊದೋ ಗಣೇಶೋತ್ಸವ ಮೆರವಣಿಗೆ ಅಲ್ಲ. ಸಿನಿಮಾ ಹಾಡಿನ ಡಿಜೆ ಸದ್ದಿನ ಮೆರವಣಿಗೆಯೂ ಅಲ್ಲ. ಕನ್ನಡದ ಮೊದಲ ರಾಜಧಾನಿ ಬನವಾಸಿಯಲ್ಲಿ ಕಂಡುಬಂದ ಕನ್ನಡ ಗೀತಗಾಯನ ಕಾರ್ಯಕ್ರಮದ ದೃಶ್ಯ.
ಉತ್ತರ ಕನ್ನಡದ ಬನವಾಸಿಯಲ್ಲಿ ಜಿಲ್ಲಾಡಳಿತದ ವತಿಯಿಂದ ಕನ್ನಡ ಗೀತಗಾಯನ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಏಕಕಾಲಕ್ಕೆ 1600 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕನ್ನಡಾಭಿಮಾನ ಸಾರುವ ಹಾಡುಗಳನ್ನ ಹಾಡಿ ಗಮನ ಸೆಳೆದರು. ಹಾಡಿಗೆ ತಕ್ಕಂತೆ ಕಲಾವಿದ ಸತೀಶ ಯಲ್ಲಾಪುರ ಚಿತ್ರ ಬಿಡಿಸಿ ಗಮನ ಸೆಳೆದರು. ಇದೇ ವೇಳೆ ನಡೆದ ನೃತ್ಯ ಮನಸೂರೆಗೊಂಡಿತು. ವಿಶೇಷವಾಗಿ ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎನ್ನುವ ಹಾಡು ಕೇಳಿ ಬರುತ್ತಿದ್ದಂತೆ ಅವರಿವರೆನ್ನದೆ ಎಲ್ಲರೂ ಹೆಜ್ಜೆ ಹಾಕಿದ್ದು ಗಮನ ಸೆಳೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಮಾತನಾಡಿ, ಪಂಪನನ್ನೇ ಕಾಡಿದ ಬನವಾಸಿಯಲ್ಲಿ ನಡೆದ ಕಾರ್ಯಕ್ರಮಕ್ಕೆ ಹೆಚ್ಚಿನ ಮಹತ್ವ ಬಂದಿದೆ. ಭಾಷೆ ಕೇವಲ ಮಾಧ್ಯಮವಲ್ಲ. ಅದು ಜೀವನ ಕ್ರಮವಾಗಿದೆ. ತಲತಲಾಂತರದ ಪರಂಪರೆಗಳ ಪಾರಂಪರಿಕ ಜ್ಞಾನ ಕ್ರೋಢೀಕರಿಸಿಕೊಂಡಿರುವ ಗಣಿಯಾಗಿದೆ. ಜೀವನದ ಮಾನದಂಡ, ನಡವಳಿಕೆ, ಜೀವನ ತತ್ವಗಳನ್ನು ಕಲಿಸುವುದು ಮಾತೃ ಭಾಷೆಯಾಗಿದೆ. ಬದುಕನ್ನು ಯಾವ ರೀತಿ ಕಟ್ಟಿಕೊಳ್ಳಬೇಕು ಎಂಬುದನ್ನು ಮಾತೃಭಾಷೆ ಕಲಿಸುತ್ತದೆ. ಅದನ್ನು ಸದಾ ಗೌರವಿಸುವ ಕಾರ್ಯ ಆಗಬೇಕು ಎಂದರು.
ಕಾರ್ಯಕ್ರಮದಲ್ಲಿ ಪಂಪನ ರೂಪಕಗಳನ್ನು ಹಾಡಲಾಯಿತು. ಸರ್ಕಾರದ ಕರೆ ಮೇರೆಗೆ ಶಿರಸಿ, ಯಲ್ಲಾಪುರ, ಸಿದ್ದಾಪುರ, ದಾಂಡೇಲಿ ಸೇರಿದಂತೆ ಜಿಲ್ಲೆಯಾದ್ಯಂತ ಏಕಕಾಲಕ್ಕೆ 14000 ಕ್ಕೂ ಹೆಚ್ಚು ಕನ್ನಡಿಗರಿಂದ ಗೀತಗಾಯನ ನಡೆಯಿತು. ಶಿರಸಿ ಮಾರಿಕಾಂಬಾ ಪ್ರೌಢಶಾಲೆಯ 2000 ಕ್ಕು ಹೆಚ್ಚು ಮಕ್ಕಳು ಕನ್ನಡಾಂಬೆಯ ಮಹಿಮೆ ಬಣ್ಣಿಸಿದರು. – ಮುಲ್ಲೈ ಮುಗಿಲನ್ ಜಿಲ್ಲಾಧಿಕಾರಿ.
ಒಟ್ಟಿನಲ್ಲಿ ಸರ್ಕಾರ ಕರೆ ನೀಡಿದ ಗೀತಗಾಯನ ಕಾರ್ಯಕ್ರಮಕ್ಕೆ ಕನ್ನಡದ ಮೊದಲ ರಾಜಧಾನಿ ಹಾಗೂ ಪಂಪನ ಬೀಡಿನಲ್ಲಿ ಅಪಾರ ಸ್ಪಂದನೆ ಸಿಕ್ಕಿದ್ದು, ಜನ ಮೆಚ್ಚುಗೆಗೆ ಪಾತ್ರವಾಯಿತು. -ನಾಗರಾಜ್ ನಾಯ್ಕ್, ಮುಖ್ಯಶಿಕ್ಷಕ ಮಾರಿಕಾಂಬಾ ಶಾಲೆ ಶಿರಸಿ.