ಹೊನ್ನಾವರ: ಭಾರತದ ಪ್ರಥಮ ಪ್ರಧಾನಮಂತ್ರಿ ಪಂಡಿತ ಜವಾಹರಲಾಲ್ ನೇಹರುರವರು ಹಸಿರು ಕ್ರಾಂತಿಯ ಮೂಲಕ ದೇಶದ ಬಡ ರೈತರನ್ನು ಸ್ವಾವಲಂಭಿಗಳಾಗುವಂತೆ ಮಾಡಿದರು. ಮಾಜಿ ಪ್ರಧಾನಿ ಇಂದಿರಾಗಾಂಧಿ ಗರೀಬಿ ಹಠಾವ್ ಮತ್ತು ಉಳುವವನೇ ಒಡೆಯ ಎಂಬ ಮಹತ್ವದ ಕ್ರಾಂತಿಕಾರಿ ನಿರ್ಣಯದ ಮೂಲಕ ಬಡವರಿಗೆ ಆಸರೆಯಾದರು. ಆದರೆ ಇಂದಿನ ಕೇಂದ್ರದ ಮೋದಿ ನೇತ್ರತ್ವದ ಬಿಜೆಪಿ ಸರಕಾರ ಸುಳ್ಳು ಭರವಸೆಗಳೊಂದಿಗೆ ದೇಶವನ್ನು ಆಳುತ್ತಿದೆ ಎಂದು ಮಾಜಿ ಶಾಸಕಿ ಶಾರದಾ ಶೆಟ್ಟಿ ವಿಷಾದ ವ್ಯಕ್ತಪಡಿಸಿದರು.
ಅವರು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಸಮಿತಿ ಮಾಡಗೇರಿಯ ಶ್ರೀ ರಾಮನಾಥ ದೇವಸ್ಥಾನದ ಸಭಾಭವನದಲ್ಲಿ ಏರ್ಪಡಿಸಿದ ಕಡತೋಕಾ ಮತ್ತು ನವಿಲಗೋಣ ಗ್ರಾಮ ಪಂಚಾಯತ ವ್ಯಾಪ್ತಿಯ ಮಹತ್ಮಾಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡುತ್ತಿದ್ದರು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿ ಸುಮಾರು 75 ವರ್ಷಗಳು ಕಳೆದಿದ್ದು, ಭಾರತದ ಸ್ವಾತಂತ್ರ ಹೋರಾಟದಲ್ಲಿ ಕಾಂಗ್ರೆಸ್ ಪ್ರಮುಖ ಪಾತ್ರವಹಿಸಿತ್ತು ಎಂದು ಹೇಳಲು ತುಂಬಾ ಹೆಮ್ಮೆಯಾಗುತ್ತಿದೆ ಎಂದರು.
ಉತ್ತರಕನ್ನಡ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಶಿವಾನಂದ ಹೆಗಡೆ ಕಡತೋಕಾ ಮಾತನಾಡಿ, ದೇಶದಲ್ಲಿ ಬೆಲೆ ಏರಿಕೆಯಿಂದ ಜನರ ಬಾಳು ಕಷ್ಟಕರವಾಗಿದೆ. ಕರೋನಾದಿಂದ ದೇಶದ ಬಡ ಮಧ್ಯಮ ವರ್ಗದ ಗತಿ ಗಂಭೀರವಾಗಿದ್ದು, ಜೀವನ ನಿರ್ವಹಣೆ ತೀರಾ ದುಸ್ತರವಾಗಿದೆ. ಕೇಂದ್ರದ ಮೋದಿ ಸರ್ಕಾರ ಕಳೆದ ಏಳು ವರ್ಷಗಳಿಂದ ಸುಳ್ಳುಗಳಿಂದಲೇ ದೇಶವನ್ನಾಳುತ್ತಿದ್ದು, ಗಂಭೀರ ಪರಿಸ್ಥಿತಿ ದೇಶದಲ್ಲಿ ನಿರ್ಮಾಣವಾಗಿದೆ ಎಂದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಪ್ ಎನ್. ತೆಂಗೇರಿ ಪ್ರಾಸ್ತವಿಕವಾಗಿ ಮಾತನಾಡಿ ಎ.ಐ.ಸಿ.ಸಿ. ಅಧ್ಯಕ್ಷೆ ಸೋನಿಯಾ ಗಾಂಧಿಯವರ ನಿರ್ದೇಶನದಂತೆ ದೇಶಾದ್ಯಂತ ಪ್ರತಿ ಗ್ರಾಮ ಪಂಚಾಯತ ಮಟ್ಟದಲ್ಲಿ ದೇಶದ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಮಹಾತ್ಮಾಗಾಂಧಿ ಗ್ರಾಮ ಸ್ವರಾಜ್ ಕಾರ್ಯಕ್ರಮ ನಡೆಸಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯದ ಬಿ.ಜೆ.ಪಿ. ಸರಕಾರಗಳು ಜನರಿಗೆ ಉತ್ತಮ ಆಡಳಿತ ನೀಡಲು ವಿಫಲವಾಗಿದ್ದು, ದೇಶದಲ್ಲಿ ಅಗತ್ಯ ವಸ್ತುಗಳ ಬೆಲೆ ತಾರಕಕ್ಕೇರಿದೆ. ದೇಶದ ಇತಿಹಾಸವನ್ನು ಬಿ.ಜೆ.ಪಿ ಸರಕಾರ ತಿರುಚಲು ಮುಂದಾಗಿದೆ ಎಂದು ಆರೋಪಿಸಿದರು.
ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಹಿಂದೂಳಿದ ವರ್ಗ ವಿಭಾಗದ ಅಧ್ಯಕ್ಷ ಕೆ.ಎಚ್.ಗೌಡ, ತಾ.ಪಂ ಮಾಜಿ ಸದಸ್ಯ ರೂಪಾ ಗೌಡ, ನವಿಲಗೋಣ ಘಟಕ ಅಧ್ಯಕ್ಷ ರವಿ ಪಟಗಾರ, ಮರ್ತಪ್ಪ ನಾಯ್ಕ ಮಾತನಾಡಿದರು. ವೇದಿಕೆಯಲ್ಲಿ ನವೀಲಗೋಣ ಗ್ರಾಪಂ ಉಪಾಧ್ಯಕ್ಷ ಎಮ್.ಡಿ.ನಾಯ್ಕ, ಬಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ದಾಮೋದರ ನಾಯ್ಕ, ಕಡತೋಕಾ ಕಾಂಗ್ರೆಸ್ ಘಟಕದ ಅಧ್ಯಕ್ಷ ಸದಾನಂದ ನಾಯ್ಕ, ಹೇಮಾ ಗೌಡ, ಪಂಚಾಯತ ಸದಸ್ಯರಾದ ಮಾದೇವಿ ನಾಯ್ಕ, ಬೇಬಿ ಮುಕ್ರಿ, ಎಲ್. ಎಮ್. ಭಟ್, ನವೀನ್ ನಾಯ್ಕ, ಕೃಷ್ಣ ಮಾರಿಮನೆ ಉಪಸ್ಥಿತರಿದ್ದರು.