• first
    second
    third
    previous arrow
    next arrow
  • ಹೈನುಗಾರಿಕೆ ಉದ್ಯಮ ಲಾಭದಾಯಕ ಕ್ಷೇತ್ರ; ಡಾ.ರಂಗನಾಥ

    300x250 AD

    ಶಿರಸಿ: ಮನುವಿಕಾಸ ಸಂಸ್ಥೆ ಮತ್ತು ಈಡೆಲ್‍ಗೀವ್ ಫೌಂಡೇಶನ್ ಹಾಗೂ ದಲ್ಯಾನ್ ಫೌಂಡೇಶನ್ ಸಹಯೋಗದೊಂದಿಗೆ ಅ.28 ರಂದು ಬಿಕ್ನಳ್ಳಿ ಸಭಾಭವನದಲ್ಲಿ ಹೈನುಗಾರಿಕಾ ತರಬೇತಿ ಕಾರ್ಯಕ್ರಮ ನಡೆಯಿತು.


    ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶಿರಸಿಯ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಡಾ.ರಂಗನಾಥ ಇತ್ತೀಚಿನ ದಿನಗಳಲ್ಲಿ ಹೈನುಗಾರಿಕೆ ಉದ್ಯಮವು ಕೂಡ ಅತ್ಯಂತ ಲಾಭದಾಯಕ ಕ್ಷೇತ್ರವಾಗಿದ್ದು, ಸಮಗ್ರ ಜಾನುವಾರು ನಿರ್ವಹಣೆಯಿಂದ ಮಾತ್ರ ತ್ವರಿತಗತಿಯಲ್ಲಿ ಲಾಭಗಳಿಸಲು ಸಾಧ್ಯ. ಜಾನುವಾರುಗಳ ಪಾಲನೆ ಮತ್ತು ಪೋಷಣೆಯನ್ನು ಸಹ ಅತ್ಯಂತ ಮುತುವರ್ಜಿಯಿಂದ ಮಾಡಿದಾಗ ಮಾತ್ರ ಪರಿಣಾಮಕಾರಿ ಹೈನುಗಾರಿಕೆ ಸಾಧ್ಯ. ಸೂಕ್ತ ಸಮಯದಲ್ಲಿ ಜಾನುವಾರುಗಳಿಗೆ ರೋಗ ಲಕ್ಷಣ ಪತ್ತೆ ಹಚ್ಚಿ ಔಷಧೋಪಚಾರ ಮಾಡಿ ಜಾನುವಾರುಗಳನ್ನು ನಿರ್ವಹಣೆ ಮಾಡಬೇಕು ಮತ್ತು ಸೂಕ್ತ ಸಮಯಕ್ಕೆ ಸೂಕ್ತ ಲಸಿಕೆ ಹಾಕಿಸುವುದು ಕೂಡ ಮುಖ್ಯವಾಗುತ್ತದೆ ಎಂದರು.


    ಮತ್ತೋರ್ವ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಪಶು ವೈದ್ಯ ರಾಘವೇಂದ್ರ ಸ್ವಾದಿ ಮಾತನಾಡಿ ಹೈನುಗಾರಿಕೆಯಲ್ಲಿ ಪ್ರಮುಖವಾಗಿ ಹಾಲಿನ ಇಳುವರಿಯನ್ನು ಹೆಚ್ಚಿಸಲು ಯಾವ ತರಹದ ಮಿಶ್ರ ತಳಿಯ ಜಾನುವಾರುಗಳಿಂದ ಹಾಲಿನ ಉತ್ಪಾದನೆ ಜಾಸ್ತಿ ಬರುವುದಾಗಿ ತಿಳಿಸಿದರು ಮತ್ತು ಒಣ ಮೇವು ಸಂತುಲಿತ ಪ್ರಮಾಣದಲ್ಲಿಕೊಟ್ಟಾಗ ಹಾಲಿನ ಉತ್ಪಾದನೆ ಜಾಸ್ತಿಯಾಗಿ ಸಂಘದ ಮಹಿಳೆಯರು ಆರ್ಥಿಕವಾಗಿ ಸಬಲರಾಗಲು ಸಹಕಾರಿಯಾಗುತ್ತದೆ ಮತ್ತು ಜಾನುವಾರುಗಳ ಗರ್ಭಧಾರಣೆಯ ಸಮಯದಲ್ಲಿ ಮತ್ತು ನಂತರ ನಿರ್ವಹಿಸಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ವಿವರಿಸಿದರು.

    300x250 AD


    ಸಂಪನ್ಮೂಲ ವ್ಯಕ್ತಿಗಳಾದ ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಅಧಿಕಾರಿ ಎಸ್‍ಎಸ್ ಬಿಜ್ಜೂರ ಮಾತನಾಡಿ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಮಹಿಳೆಯರು ಕೂಡ ಸ್ವಾವಲಂಬಿ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ. ಡೈರಿ ಉದ್ಯಮ ಮಾಡಲು ಆಸಕ್ತಿ ಉಳ್ಳ ಮಹಿಳೆಯರಿಗೆ ಸರ್ಕಾರದಿಂದ ಹಲವಾರು ಪ್ರೋತ್ಸಾಹಕರ ಯೋಜನೆಗಳು ಲಭ್ಯವಿದ್ದು ಇದನ್ನು ಇಂದಿನ ಮಹೊಳೆಯರು ಸದುಪಯೋಗ ಪಡಿಸಿಕೊಳ್ಳಬೇಕು ಎಂದರು.


    ಮನುವಿಕಾಸ ಸಂಸ್ಥೆಯ ಯೋಜನಾ ಉಪನಿರ್ದೇಶಕ ಮಂಜುನಾಥ ಹೆಗಡೆ ಮಾತನಾಡಿ ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಸವಿವರವಾಗಿ ತಿಳಿಸಿದರು.


    ಕಾರ್ಯಕ್ರಮದಲ್ಲಿ 45ಕ್ಕೂ ಹೆಚ್ಚು ಮಹಿಳೆಯರು ಹೈನುಗಾರಿಕೆಯ ಬಗೆಗಿನ ತಮ್ಮ ಗೊಂದಲಗಳನ್ನು ಕೇಳಿ ಬಗೆ ಹರಿಸಿಕೊಂಡರು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯ ಜಯರಾಮ ನಾಯ್ಕ, ಸಂಸ್ಥೆಯ ಸಿಬ್ಬಂದಿಗಳಾದ ಮಣಿಕಂಠ ಚಲುವಾದಿ, ರಾಘವೇಂದ್ರ ಭಟ್ಟ, ಶಿಲ್ಪಾ ಶಾಸ್ತ್ರಿ ಉಪಸ್ಥಿತರಿದ್ದರು.

    Share This
    300x250 AD
    300x250 AD
    300x250 AD
    Back to top