ಕಾರವಾರ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾದ ಕನ್ನಡಕ್ಕಾಗಿ ನಾವು ಅಭಿಯಾನದಡಿ ಸಾಮೂಹಿಕ ಕನ್ನಡ ಗೀತಗಾಯನ ಕಾರ್ಯಕ್ರಮವನ್ನು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಾರ್ವಜಿನಿಕ ಶಿಕ್ಷಣ ಇಲಾಖೆ ಹಾಗೂ ಬಾಲ ಮಂದಿರ ಪ್ರೌಢ ಶಾಲೆಯ ಸಂಯುಕ್ತ ಆಶ್ರಯದಲ್ಲಿ ಹಿಂದೂ ಸ್ಕೂಲ್ ಆವರಣದಲ್ಲಿ ಆಚರಿಸಲಾಯಿತು.
ಕನ್ನಡದ ಶ್ರೇಷ್ಠತೆ ಸಾರುವ ಡಾ. ಕುವೆಂಪುರವರ “ಬಾರಿಸು ಕನ್ನಡ ಡಿಂಡಿಮವ”, ಡಾ. ಕೆ. ಎಸ್. ನಿಸಾರ್ ಅಹಮದ್ ರವರ “ಜೋಗದ ಸಿರಿ ಬೆಳಕಿನಲ್ಲಿ” ಹಾಗೂ ಹಂಸಲೇಖರವರ “ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು” ಎಂಬ ಹಾಡುಗಳನ್ನು ಬಾಲಮಂದಿರ ಪ್ರೌಢಶಾಲೆಯ 1200, ಹಿಂದೂ ಹೈಸ್ಕೂಲ್ 240, ಸುಮತಿ ದಾಮ್ಲೇ ಬಾಲಕಿಯರ ಪ್ರೌಢ ಶಾಲೆಯ 75 ವಿದ್ಯಾರ್ಥಿಗಳು ಸಾಮೂಹಿಕ ಗೀತಗಾಯನ ಮಾಡಿದರು.
ನಂತರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಸೇರಿದಂತೆ ಗಣ್ಯರಿಂದ, ಕನ್ನಡ ನಾಡಿನ ಜವಾಬ್ದಾರಿಯುತ ಪ್ರಜೆಯಾಗಿ ನಾನು ಕನ್ನಡದಲ್ಲೇ ಮಾತನಾಡುತ್ತೇನೆ. ಕನ್ನಡದಲ್ಲೇ ಬರೆಯುತ್ತೇನೆ. ನಿತ್ಯ ವ್ಯವಹಾರದಲ್ಲಿ ಕನ್ನಡವನೇ ಬಳಸುತ್ತೇನೆ ಎಂಬ ಪಣ ತೊಡೋಣ, ಕನ್ನಡ ನಾಡಿನಲ್ಲಿ ವಾಸವಾಗಿರುವ ಕನ್ನಡೇತರ ಬಂಧುಗಳಿಗೆ ಪ್ರೀತಿಯಿಂದ ಕನ್ನಡ ಕಲಿಸುತ್ತೇನೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ಉಳಿಸಲು ಕಟಿಬದ್ದನಾಗಿರುತ್ತೇನೆ ಎಂದು ಸಂಕಲ್ಪ ಮಾಡಲಾಯಿತು.
ಕಾರ್ಯಕ್ರದಲ್ಲಿ ಸಾರ್ವಜನಿಕ ಜಿಲ್ಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಹರೀಶ್ ಗಾಂವಕರ್, ಜಿಲ್ಲಾ ಉಪ ಸಮನ್ವಯ ಯೋಜನಾ ಅಧಿಕಾರಿ ಲತಾ ನಾಯ್ಕ್, ಬಿಇಒ ಶ್ರೀಕಾಂತ್ ಹೆಗಡೆ ಹಾಗೂ ಬಾಲ ಮಂದಿರ ಶಾಲೆಯ ಪ್ರಾಂಶುಪಾಲೆ ಅಂಜಲಿ ಮಾನೆ, ಹಿಂದೂ ಹೈಸ್ಕೂ???ನ ಅರುಣ ಪಿ. ರಾಣೆ ಹಾಗೂ ಸುಮತಿ ದಾಮ್ಲೆ ಬಾಲಕಿಯರ ಪ್ರೌಢ ಶಾಲೆಯ ಗಿರಿಜಾ ಎನ್ ಬಂಟ್ ಉಪಸ್ಥಿತರಿದ್ದರು.