ಯಲ್ಲಾಪುರ: ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯ ಒದಗಿಸಿ, ಕೂಲಿಕಾರರಿಗೆ ಕೆಲಸಕೊಡಿ ಎನ್ನುವ ಬೇಡಿಕೆಗೆ ಆಗ್ರಹಿಸಿ, ಗುರುವಾರ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ ವತಿಯಿಂದ ಪಟ್ಟಣದ ಅಂಬೇಡ್ಕರ ಸರ್ಕಲ್ ಬಳಿ ಮಾನವ ಸರಪಳಿ ಮಾಡಿ ಗಮನ ಸೆಳೆದರು. ನಂತರ ಮೆರವಣಿಗೆ ಮೂಲಕ ಆಗಮಿಸಿ ತಹಶೀಲ್ದಾರ ಅವರಿಗೆ ಮನವಿ ಸಲ್ಲಿಸಿದರು.
ಸಲ್ಲಿಸಿದ ಮನವಿಯಲ್ಲಿ ಪ್ರತಿ ಹಳ್ಳಿಗಳಲ್ಲಿ ವಾರ್ಡಸಭೆ ನಡೆಸಬೇಕು. ಮನೆ ಕಟ್ಟಿಕೊಳ್ಳಲು ಜಾಗ ಇಲ್ಲದವರಿಗೆ ಜಾಗ ನೀಡಬೇಕು. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೆಲಸ ಕೊಡಬೇಕು. ಹಳ್ಳಿಗಳಲ್ಲಿ ವಿದ್ಯುತ್ ಸಮಸ್ಯೆ ಬಗೆ ಹರಿಸಬೇಕು. ಅಕ್ರಮ ಮದ್ಯ ಮಾರಾಟ ನಿಲ್ಲಿಸಬೇಕು. ಗ್ರಾಮೀಣ ಸಾರಿಗೆ ಸಂಪೂರ್ಣ ಹದಗೆಟ್ಟಿದ್ದು, ಕಳೆದ ಏಳು ತಿಂಗಳಿಂದ ಬಸ್ ಓಡಾಟ ಇಲ್ಲದಾಗಿದೆ. ಶಾಲೆಗಳಿಗೆ ಹೋಗಲು ಮಕ್ಕಳಿಗೆ ಸರಿಯಾದ ಬಸ್ ವ್ಯವಸ್ಥೆ ಮಾಡಿಕೊಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಸಂಗೀತಾ ಪವಾರ್, ಸುಧಾ, ಲಕ್ಷ್ಮೀ, ಗುಲಾಬಿ ಸೇರಿದಂತೆ ಕಿರವತ್ತಿ, ಮದನೂರು ವ್ಯಾಪ್ತಿಯ ಗ್ರಾಮೀಣ ಕೂಲಿ ಕಾರ್ಮಿಕ ಸಂಘದ ಮಹಿಳಾ ಸದಸ್ಯರು ಭಾಗವಹಿಸಿದ್ದರು.