ಶಿರಸಿ: ಸಹಕಾರಿ ಸಂಸ್ಥೆಗಳ ಮೂಲಕ ಕಟ್ಟಲಾದ ಅಡಿಕೆ, ಕಾಳು ಮೆಣಸು ಸೇರಿದಂತೆ ಇತರ ತೋಟಗಾರಿಕಾ ಬೆಳೆಗಳ ವಿಮಾ ಪರಿಹಾರ ಮೊತ್ತ ನಿಗದಿಯಾದ ದಿನ ಮುಗಿದರೂ ಬಂದಿಲ್ಲ ಎಂದು ಸಹಕಾರಿಗಳು, ರೈತರು ಅಸಮಾಧಾನ ವ್ಯಕ್ತ ಪಡಿಸಿದ ಘಟನೆ ಬುಧವಾರ ನಡೆದಿದೆ.
ತಾಲೂಕಿನ ವಿವಿಧಡೆಯ ರೈತರು ಜಿಲ್ಲಾ ತೋಟಗಾರಿಕಾ ಕಚೇರಿಗೆ ತೆರಳಿ ಮನವಿ ಸಲ್ಲಿಸಿ ತಕ್ಷಣ ಬೆಳೆ ಹಾನಿ ನೀಡಬೇಕು ಎಂದು ಜಿಲ್ಲಾ ಉಪ ನಿರ್ದೇಶಕ ಡಾ. ಪಿ.ಬಿ.ಸತೀಶ ಅವರಲ್ಲಿ ಒತ್ತಾಯಿಸಿದರು. ಕಳೆದ 2020ರ ಜೂನ್.30ಕ್ಕೆ ಸಹಕಾರಿ ಸಂಘಗಳ ಮೂಲಕ ರೈತರು ಸರಕಾರ ಸೂಚಿಸಿದ ವಿಮಾ ಕಂಪನಿಗೆ ವಿಮಾ ಹಣ ಭರಣ ಮಾಡಿದ್ದರು. ಸರಕಾರದ ನಿಬಂಧನೆಯ ಪ್ರಕಾರ ಅವಧಿ ಮುಗಿದ 45 ದಿನಗಳಲ್ಲಿ ಬಿದ್ದ ಮಳೆ ಹಾಗೂ ತೇವಾಂಶ ಆಧರಿಸಿ ಹಿಂಗಾರು, ಮುಂಗಾರು ಅವಧಿಯ ಪರಿಹಾರ ಹಣ ಕೊಡಬೇಕಿತ್ತು. ಈ ಅವಧಿ ಆಗಷ್ಟ 15 ಆಗಿತ್ತು ಎಂದು ರೈತರು ವಿವರಿಸಿದರು. ಆದರೆ, ಈಗಾಗಲೇ ವಿಮಾ ಹಣ ಮೊತ್ತಕ್ಕೆ ಒಂದುವರೆ ತಿಂಗಳು ವಿಳಂಬವಾಗಿದೆ. ಇದರಿಂದ ಬೆಳೆಗಾರರಿಗೆ ನಷ್ಟ, ಈ ಪರಿಹಾರ ಬಾರದು ಎಂಬ ಗುಮಾನಿ ಕೂಡ ವ್ಯಕ್ತವಾಗಿದೆ ಎಂದು ರೈತರು ಆತಂಕಿಸಿದರು.
ಜಿಲ್ಲೆಯಲ್ಲಿ 39,571 ರೈತರು ವಿಮಾ ಪಾವತಿಸಿದ್ದು, 10.86 ಕೋಟಿ ರೂ. ಮೊತ್ತವನ್ನು ಅಗ್ರಿಕಲ್ಚರ್ ಇನ್ಸುರೆನ್ಸ ಕಂಪನಿಗೆ 2020 ಜೂನ್ ಅಂತ್ಯಕ್ಕೆ ಪಾವತಿಸಲಾಗಿದೆ. ಆದರೆ, ಈವರೆಗೆ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಎಂದೂ ಇದೇ ವೇಳೆ ರೈತರು ಆಕ್ಷೇಪಿಸಿದರು.
ಮನವಿ ಸ್ವೀಕರಿಸಿದ ಜಿಲ್ಲಾ ತೋಟಗಾರಿಕಾ ಅಧಿಕಾರಿ ಡಾ. ಪಿ.ಬಿ. ಸತೀಶ, ಈ ಕುರಿತು ಮೇಲಧಿಕಾರಿಗಳ ಗಮನಕ್ಕೆ ತಂದು ವಿಮಾ ಮೊತ್ತ ಶೀಘ್ರ ಬಿಡುಗಡೆ ಗೊಳಿಸಲು ಪ್ರಯತ್ನ ಮಾಡುವದಾಗಿ ತಿಳಿಸಿದರು.
ಈ ವೇಳೆ ಕೃಷಿಕ ಸಮಾಜದ ರಾಜ್ಯದ ಪ್ರತಿನಿಧಿ ವಿನಾಯಕ ಹೆಗಡೆ ಶೀಗೆಹಳ್ಳಿ, ತಾಲೂಕು ಆತ್ಮ ಘಟಕದ ಅಧ್ಯಕ್ಷ ಜಿ.ಆರ್.ಹೆಗಡೆ ಬೆಳ್ಳೆಕೇರಿ, ಕಬ್ನಳ್ಳಿ ಎಂ.ಸಿ.ಹೆಗಡೆ, ನಾಗರಾಜ್ ಹೆಗಡೆ, ಅಶೋಕ ಹೆಗಡೆ, ಬೆಟ್ಟಕೊಪ್ಪದ ರಾಜಶೇಖರ ಹೆಗಡೆ, ಗಣೇಶ ನಾ ಹೆಗಡೆ, ನರಸಿಂಹ ಹೆಗಡೆ, ಎಸ್.ಜಿ.ಹೆಗಡೆ, ಗಣಪತಿ ಮಾ.ಭಟ್ಟ, ದತ್ತಾತ್ರಯ ರಾ . ಹೆಗಡೆ, ರವಿ ಹೆಗಡೆ, ಸಣ್ಣ ಕೇರಿಯ ಗಣೇಶ ಹೆಗಡೆ, ಶ್ರೀಧರ ಹೆಗಡೆ, ರಮೇಶ ಹೆಗಡೆ ಕಲ್ಲಕೈ ಇತರರು ಇದ್ದರು.
ವಾರ್ಷಿಕ ಅವಧಿ ಮುಗಿದ ಕೂಡಲೇ ಆಯಾ ಆಯಾ ಪಂಚಾಯತದ ಹಂತದಲ್ಲಾದರೂ ವಿಮಾ ಪರಿಹಾರದ ಮೊತ್ತ ಘೋಷಿಸಬೇಕು. ಕಂತು ತುಂಬಿಸಿಕೊಂಡ ವಿಮಾ ಕಂಪನಿಯ ಕಚೇರಿ ಆಗಬೇಕು. – ವಿನಾಯಕ ಹೆಗಡೆ ಶೀಗೇಹಳ್ಳಿ, ರಾಜ್ಯ ಪ್ರತಿನಿಧಿ, ಕೃಷಿಕ ಸಮಾಜ