ಯಲ್ಲಾಪುರ: ತಾಲೂಕಿನ ವಜ್ರಳ್ಳಿಯ ಸರ್ವೋದಯ ಪ್ರೌಢಶಾಲೆಯಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಮಂಡಳಿಯ ಆಯ್ಕೆಗಾಗಿ ಚುನಾವಣಾ ಸಾಕ್ಷರತಾ ಸಂಘವು ಚುನಾವಣೆಯ ಪ್ರಕ್ರಿಯೆಯನ್ನು ನಡೆಸಿಕೊಟ್ಟಿತು.
ವಿದ್ಯಾರ್ಥಿಗಳು ತಮ್ಮ ತಮ್ಮ ಪ್ರತಿನಿಧಿಗಳ ಪರವಾಗಿ ಪ್ರಚಾರ, ನಾಮಪತ್ರ ಸಲ್ಲಿಕೆ, ಮತದಾನ, ಫಲಿತಾಂಶ ಪ್ರಕಟಣೆ ಸೇರಿದಂತೆ ವಿವಿಧ ಪ್ರಕ್ರಿಯೆ ನಡೆಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಮಾರ್ಗದರ್ಶಕ ಶಿಕ್ಷಕ ಚಿದಾನಂದ ಹಳ್ಳಿ ಸಾಂದರ್ಭಿಕ ಮಾತನಾಡಿ ಕಲಿಕೆಯ ಹಂತದಲ್ಲಿ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳೂ ಅಷ್ಟೇ ಮುಖ್ಯವಾದದ್ದು. ಪಾಠದಲ್ಲಿನ ವಿಷಯಕ್ಕೆ ಅನುಗುಣವಾಗಿ ಚುನಾವಣೆಯ ಕಲ್ಪನೆಯನ್ನು ವಿದ್ಯಾರ್ಥಿಗಳಿಗೆ ನೀಡುವ ಮೂಲಕ ಉತ್ತಮ ನಾಯಕನಾಗುವುದು ಮತ್ತು ಆ ಬಗೆಗೆ ತಿಳುವಳಿಕೆ ಕೊಡುವುದು ಪರಿಣಾಮಕಾರಿ ಅಧ್ಯಯನದ ಭಾಗವಾಗಿದೆ. ನಮ್ಮ ಅರಿವಿನ ವಿಸ್ತಾರವನ್ನು ಇಂತಹ ಚಟುವಟಿಕೆಗಳಿಂದ ಪ್ರಾಯೋಗಿಕವಾಗಿ ಹೆಚ್ಚಿಸಿಕೊಳ್ಳುವ ಸಂಶೋಧನಾತ್ಮಕವಾಗಿ ತೊಡಗಿಕೊಳ್ಳುವ ಮನೋಭಾವನೆ ಬೆಳಸಿಕೊಳ್ಳಬೇಕು ಎಂದರು.
ಮುಖ್ಯಾಧ್ಯಾಪಕ ಎಮ್ ಕೆ ಭಟ್ಟ, ಶಿಕ್ಷಕರಾದ ಎಸ್ ಟಿ ಬೇವಿನಕಟ್ಟಿ, ಸರೋಜಾ ಭಟ್ಟ, ರವೀಂದ್ರ ಗಾಂವ್ಕಾರ, ಸೂರ್ಯನಾರಾಯಣ ಹೆಗಡೆ ಕಣ್ಣಿಪಾಲ ಉಪಸ್ಥಿತರಿದ್ದರು. ವಿದ್ಯಾರ್ಥಿ ಸಂಸತ್ತಿನ ಚುನಾವಣೆಯ ಪ್ರಕ್ರಿಯೆಯನ್ನು ಸ್ವತ: ಸರ್ವೋದಯ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಶ್ರೀಗೌರಿ, ಶೃದ್ಧಾ, ರಕ್ಷಿತಾ, ಮಂಜುನಾಥ, ವಸಂತ ಸಹಕರಿಸಿದರು.