ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕನ್ನು ಸಂಪೂರ್ಣ ಸಾವಯವ ತಾಲೂಕನ್ನಾಗಿ ಘೋಷಿಸುವ ಕುರಿತು ಮಹತ್ವದ ಬೆಳವಣಿಗೆಯಾಗಿದ್ದು, ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಅಭಿಪ್ರಾಯ ಸಂಗ್ರಹಣೆ ಹಾಗೂ ಸಾಧಕ ಬಾಧಕಗಳ ಬಗ್ಗೆ ಚರ್ಚಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆಯನ್ನು ಆಯೋಜಿಸಲು ದಿನಾಂಕ ನಿಗದಿಪಡಿಸುವಂತೆ ಕರ್ನಾಟಕ ಸರ್ಕಾರದ ಕೃಷಿ ಆಯುಕ್ತಾಲಯದಿಂದ ನಿರ್ದೇಶನ ಬಂದಿರುವುದು ಸಂತಸ ತಂದಿದೆ ಎಂದು ಶಾಸಕ ಆರ್.ವಿ ದೇಶಪಾಂಡೆ ತಿಳಿಸಿದ್ದಾರೆ.
ದೈವೀದತ್ತ ಪರಿಸರ ಹೊಂದಿದ ಜೋಯಿಡಾ ತಾಲೂಕು ಆಧುನಿಕ ಕೃಷಿ ಪದ್ಧತಿಯಿಂದ ದೂರ ಉಳಿದಿದ್ದು ಸಾಂಪ್ರದಾಯಿಕ ಸಾವಯವ ಪದ್ಧತಿಯನ್ನು ಈಗಲೂ ಮುಂದುವರಿಸಿಕೊಂಡು ಹೋಗಿ ಕೃಷಿಯನ್ನು ಲಾಭದಾಯಕ ಉತ್ಪನ್ನವಾಗಿ ತರುವಲ್ಲಿ ಇಲ್ಲಿಯ ರೈತರ ಶ್ರಮ ಮೆಚ್ಚುವಂಥದ್ದು. ಯಥೇಚ್ಛವಾಗಿ ಸಿಗುವ ನೈಸರ್ಗಿಕ ಉತ್ಪನ್ನಗಳು, ಗೆಡ್ಡೆಗೆಣಸುಗಳು, ಜೇನುಕೃಷಿ, ಹೈನುಗಾರಿಕೆ, ತೋಟಗಾರಿಕೆ ಬೆಳೆಗಳು ಇಲ್ಲಿಯ ಜನರ ಮೂಲ ಕಸುಬಾಗಿರುವುದು ಇಲ್ಲಿಯ ವಿಶೇಷತೆ. ಈ ಹಿಂದೆ ಆರ್ವಿಡಿ ಅವರು ಕೃಷಿ ಸಚಿವ ಬಿ.ಸಿ ಪಾಟೀಲ್ ಅವರಿಗೆ ಜೋಯಿಡಾ ತಾಲೂಕನ್ನು ಸಂಪೂರ್ಣ ಸಾವಯವ ತಾಲೂಕನ್ನಾಗಿ ಘೋಷಿಸುವಂತೆ ಪತ್ರದ ಮೂಲಕ ವಿನಂತಿಸಿಕೊಂಡಿದ್ದಾಗಿ ತಿಳಿಸಿದ್ದರು. ಆದಷ್ಟು ಶೀಘ್ರವಾಗಿ ಜೋಯಿಡಾ ತಾಲೂಕನ್ನು ಸಂಪೂರ್ಣ ಸಾವಯವ ತಾಲೂಕನ್ನಾಗಿ ಘೋಷಿಸುವಂತೆ ಆರ್ವಿಡಿ ವಿನಂತಿಸಿದ್ದಾರೆ.