ಯಲ್ಲಾಪುರ: ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದಾಗಿ ತರಗತಿಗಳು ನಡೆಯದೇ ವಿದ್ಯಾರ್ಥಿಗಳು ಪರದಾಡುವಂತಾಗಿದೆ. ತರಗತಿಗಳು ಆರಂಭವಾಗಿ ತಿಂಗಳುಗಳೇ ಕಳೆದರೂ ಈವರೆಗೂ ಉಪನ್ಯಾಸಕರಿಲ್ಲದೇ ಇರುವ ಕಾರಣ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಹೋಗುವುದು ಬಿಟ್ಟರೆ ಬೇರಾವ ಪ್ರಯೋಜನವೂ ಇಲ್ಲದಂತಾಗಿದೆ.
ಕಾಲೇಜಿನಲ್ಲಿ ಬಿ.ಎ, ಬಿ.ಕಾಂ, ಬಿ.ಎಸ್.ಸಿ, ಬಿಬಿಎ, ಎಂ.ಕಾಂ ಮುಂತಾದ ವಿಭಾಗಗಳಿದ್ದು, ಒಟ್ಟು 735 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಅದರಲ್ಲಿ ಪ್ರಸಕ್ತ ಸಾಲಿನಲ್ಲಿ 290 ವಿದ್ಯಾರ್ಥಿಗಳು ದಾಖಲಾತಿ ಮಾಡಿದ್ದಾರೆ. ಕಾಲೇಜಿನಲ್ಲಿ ಕೊಠಡಿಗಳು, ಕಲಿಕೋಪಕರಣಗಳು, ಆಧುನಿಕ ವ್ಯವಸ್ಥೆ ಎಲ್ಲವೂ ಇವೆ. ಆದರೆ ಮುಖ್ಯವಾಗಿ ಇರಬೇಕಾದ ಉಪನ್ಯಾಸಕರೇ ಇಲ್ಲದಿರುವುದು ಸಮಸ್ಯೆಯಾಗಿದೆ.
ಕಳೆದ ವರ್ಷ ಕಾಯಂ ಹಾಗೂ ಅತಿಥಿ ಉಪನ್ಯಾಸಕರು ಸೇರಿ 20 ಉಪನ್ಯಾಸಕರಿದ್ದರು. ಸದ್ಯ ಇಷ್ಟು ವಿದ್ಯಾರ್ಥಿಗಳಿಗೆ 25-30 ಉಪನ್ಯಾಸಕರಾದರೂ ಇದ್ದರೆ ತಕ್ಕಮಟ್ಟಿಗೆ ತರಗತಿಗಳನ್ನು ನಡೆಸಲು ಸಾಧ್ಯವಾಗಬಹುದು. ಆದರೆ ಈ ಬಾರಿ ಅತಿಥಿ ಉಪನ್ಯಾಸಕರ ನೇಮಕಾತಿಗೆ ಸರ್ಕಾರ ಅನುಮತಿ ನೀಡಿಲ್ಲ. ಹಾಗಾಗಿ 7 ಜನ ಕಾಯಂ ಉಪನ್ಯಾಸಕರೇ ಎಲ್ಲ ತರಗತಿಗಳನ್ನು ನಿಭಾಯಿಸುವ ಹರಸಾಹಸ ಮಾಡುತ್ತಿದ್ದಾರೆ. ಇವರೇ ಎಲ್ಲಾ ತರಗತಿಗಳಿಗೂ ಪಾಠ ಮಾಡುವುದು ತೀರಾ ಕಷ್ಟವಾಗಿದ್ದು, ಉಪನ್ಯಾಸಕರಿಗೂ, ವಿದ್ಯಾರ್ಥಿಗಳಿಗೂ ಇದು ತೊಂದರೆಯಾಗಿ ಪರಿಣಮಿಸಿದೆ.
ನಿತ್ಯವೂ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದು, ಯಾವ ತರಗತಿಗಳೂ ಸರಿಯಾಗಿ ನಡೆಯದ ಕಾರಣ ಮನೆಗೆ ಮರಳುವುದು ರೂಢಿಯಾಗಿದೆ. ದೂರದ ಗ್ರಾಮೀಣ ಭಾಗದಿಂದ ಬಸ್ ನಲ್ಲಿ ಬರುವ ವಿದ್ಯಾರ್ಥಿಗಳು ತರಗತಿಗಳು ನಡೆಯದೇ ಇರುವುದರಿಂದ ವ್ಯರ್ಥ ಓಡಾಟ ನಡೆಸುವಂತಾಗಿದೆ. ಗ್ರಾಮೀಣ ಭಾಗಗಳಿಗೆ ಬಸ್ ಗಳ ಓಡಾಟವೂ ಸರಿಯಾಗಿ ಆರಂಭವಾಗಿಲ್ಲ. ಹಳ್ಳಿಗಳಿಗೆ ಹೋಗುವ ಒಂದೋ ಎರಡೋ ಬಸ್ ನ್ನೇ ನೆಚ್ಚಿಕೊಂಡು ಕಾಲೇಜಿಗೆ ವಿದ್ಯಾರ್ಥಿಗಳು ಬರುತ್ತಾರೆ. ಈವರೆಗೂ ಬಸ್ ಪಾಸ್ ಸಹ ವಿತರಣೆ ಆಗಿಲ್ಲ, ಬಸ್ ನಲ್ಲಿ ಟಿಕೆಟ್ ಪಡೆದೇ ಬರಬೇಕಾಗಿದೆ. ಇಷ್ಟೆಲ್ಲ ಸಮಸ್ಯೆಗಳ ನಡುವೆ ಕಾಲೇಜಿಗೆ ಬಂದರೆ ತರಗತಿಯೂ ಇಲ್ಲ ಎಂಬಂತಾಗಿದೆ.
ಕರೊನಾ ಬಂದ ನಂತರ ಲಾಕ್ ಡೌನ್, ಸರ್ಕಾರದ ನಿಯಮಗಳು ಎಂಬ ಕಾರಣಕ್ಕಾಗಿ ಕಾಲೇಜ್ ಗಳು ಬಂದ್ ಆದವು. ಎಲ್ಲವೂ ಮುಗಿದು ಕಾಲೇಜ್ ಆರಂಭವಾದರೂ ಉಪನ್ಯಾಸಕರ ಕೊರತೆ ವಿದ್ಯಾರ್ಥಿಗಳ ಅಡ್ಡಿಗೆ ಕಾರಣವಾಗಿದೆ. ಅತಿಥಿ ಉಪನ್ಯಾಸಕರು ಬಂದು ಪಾಠ ಮಾಡುವುದಕ್ಕೆ ಸಿದ್ಧರಾಗಿದ್ದರೂ ಸರ್ಕಾರದ ಅನುಮತಿಯ ಹೊರತಾಗಿ ನೇಮಕ ಮಾಡಿಕೊಳ್ಳಲಾಗದ ಸಂದಿಗ್ಧತೆ ಕಾಲೇಜಿನವರದಾಗಿದೆ.
ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಶೀಘ್ರ ಅನುಮತಿ ನೀಡಿದಲ್ಲಿ ನಮ್ಮ ಸಮಸ್ಯೆಗೆ ಪರಿಹಾರ ದೊರಕಬಹುದು. ತರಗತಿಗಳು ಸುಸೂತ್ರವಾಗಿ ನಡೆಯಲು ಸಹಕಾರಿಯಾಗಬಹುದೆಂಬುದು ವಿದ್ಯಾರ್ಥಿಗಳ ಆಶಯ.
ಉಪನ್ಯಾಸಕರಿಗೂ ಗೊಂದಲ:
ಒಂದು ವೇಳೆ ಸರ್ಕಾರ ಅತಿಥಿ ಉಪನ್ಯಾಸಕರ ನೇಮಕಕ್ಕೆ ಕ್ರಮ ಕೈಗೊಂಡು ಉಪನ್ಯಾಸಕರು ಬಂದರೂ ಗೊಂದಲಗಳಿಗೆ ತೆರೆ ಬೀಳುವುದು ಅನುಮಾನ. ನೂತನ ಶಿಕ್ಷಣ ನೀತಿಯ ಅನುಷ್ಠಾನಕ್ಕೆ ಸಂಬಂಧಪಟ್ಟಂತೆ ಪಠ್ಯದ ಕ್ರಮ, ವಿಷಯಗಳ ಕುರಿತಂತೆ ಸರ್ಕಾರದಿಂದ ವಿಶ್ವವಿದ್ಯಾಲಯಗಳಿಗೆ ಸ್ಪಷ್ಟವಾದ ನಿರ್ದೇಶನ ಇಲ್ಲದ ಕಾರಣ ಪಾಠ ಮಾಡಲು ಉಪನ್ಯಾಸಕರಿಗೆ ಗೊಂದಲ ಉಂಟಾಗುವ ಸಾಧ್ಯತೆಯೂ ಇದೆ.