ಶಿರಸಿ: ಅನ್ನಭಾಗ್ಯದ ಅಕ್ಕಿಯಿಂದಾಗಿ ಭತ್ತದ ಮಾರಾಟದ ಪ್ರಮಾಣ ಜೋರಾಗಿದ್ದು, ಅಕ್ಕಿ ಖರೀದಿಸುವವರಿಲ್ಲದೇ ನೂರಾರು ಕ್ವಿಂಟಲ್ ಭತ್ತ ಜಿಲ್ಲೆಯ ಗಿರಣಿಗಳಲ್ಲಿ ಧೂಳು ತಿನ್ನುತ್ತಿದೆ.
ನ್ಯಾಯಬೆಲೆ ಅಂಗಡಿ ಹಾಗೂ ಸೊಸೈಟಿಗಳಲ್ಲಿ ಸರ್ಕಾರದ ಅನ್ನಭಾಗ್ಯ ಯೋಜನೆಯಡಿಯಲ್ಲಿ ಉಚಿತವಾಗಿ ಅಕ್ಕಿ ನೀಡಲಾಗುತ್ತಿದೆ. ಇದರಿಂದಾಗಿ ಸಣ್ಣ ರೈತರು ತಾವು ಬೆಳೆದ ಭತ್ತವನ್ನು ಸಂಪೂರ್ಣ ಮಾರಾಟ ಮಾಡಿ ಸರ್ಕಾರದ ಉಚಿತ ಅಕ್ಕಿಯಲ್ಲೇ ಊಟ ಮಾಡುತ್ತಿದ್ದಾರೆ. ಕಳೆದ ಐದಾರು ವರ್ಷಗಳಿಂದ ಭತ್ತದ ಮಾರಾಟದ ಪ್ರಮಾಣ ಹೆಚ್ಚಾಗಿದೆ. ಗಿರಣಿಗಳಿಗೆ ನಿತ್ಯ ರೈತರು ಭತ್ತ ಮಾರಾಟ ಮಾಡಲು ಬರುತ್ತಿದ್ದಾರೆ.
‘ಅಕ್ಕಿ ಕೇಳುವವರಿಲ್ಲ’: ಜಿಲ್ಲೆಯ ಭತ್ತದ ವ್ಯಾಪಾರಿಗಳು ರೈತರಿಂದ ಭತ್ತ ಖರೀದಿಸಿ ಅದನ್ನು ಗಿರಣಿಯಲ್ಲಿ ಅಕ್ಕಿ ಮಾಡಿ ಸಂಗ್ರಹಿಸಿಡುತ್ತಿದ್ದಾರೆ. ಈ ಹಿಂದೆ ಅಕ್ಕಿಗೆ ತುಂಬಾ ಬೇಡಿಕೆಯಿತ್ತು. ಅನ್ನಭಾಗ್ಯದ ಅಕ್ಕಿಯನ್ನು ಉಚಿತವಾಗಿ ಕುಟುಂಬಕ್ಕೆ ಬೇಕಾಗುವಷ್ಟು ನೀಡುತ್ತಿರುವುದರಿಂದ ಇತ್ತೀಚೆಗೆ ಅಕ್ಕಿ ಖರೀದಿಸಲು ಯಾರು ಮುಂದೆ ಬರುತ್ತಿಲ್ಲ. ಕೃಷಿಕರಿಂದ ಖರೀದಿಸಿದ ಸಾವಿರಾರು ಕ್ವಿಂಟಲ್ ಭತ್ತ
ಜಿಲ್ಲೆಯ ಪ್ರತಿ ಗಿರಣಿಗಳಲ್ಲಿ ಸಂಗ್ರಹವಿದ್ದು, ಗ್ರಾಹಕರ ಬೇಡಿಕೆಯಿಲ್ಲದೇ ಭತ್ತದ ಚೀಲಗಳು ದೂಳು ಹಿಡಿಯುತ್ತಿವೆ. ರೈತರು ಮಾತ್ರ ಪ್ರತಿ ದಿನ ಭತ್ತವನ್ನು ಮಾರಾಟಕ್ಕೆ ತರುತ್ತಿದ್ದಾರೆ. ಖರೀದಿಸಿದರೆ ಅಕ್ಕಿ ಕೇಳುವವರಿಲ್ಲವಾಗಿದೆ. ಅನಿವಾರ್ಯವಾಗಿ ಕೆಲವೊಮ್ಮೆ ವಾಪಸ್ ಕಳುಹಿಸುವಂತಾಗಿದೆ ಎನ್ನುತ್ತಾರೆ ಭತ್ತದ ವ್ಯಾಪಾರಿ ಮಹೇಶ.
‘ದರವಿಲ್ಲದಿದ್ದರೂ ಮಾರುತ್ತಿರುವ ರೈತರು’: ಅಧಿಕ ನಿರ್ವಹಣಾ ವೆಚ್ಚದ ಜತೆ ವರ್ಷದ ಆರೇಳು ತಿಂಗಳು ಬೆವರು ಸುರಿಸಿ ದುಡಿಯುವ ಭತ್ತಕ್ಕೆ ತೀರಾ ಕನಿಷ್ಠ ದರವಿರುತ್ತದೆ. ಈರುಳ್ಳಿ, ಟೊಮೆಟೋಗೆ ಇರುವ ಬೆಲೆಯೂ ಸಹ ಭತ್ತಕ್ಕೆ ಸಿಗುತ್ತಿಲ್ಲ . ಸದ್ಯ ಮಾರುಕಟ್ಟೆಯಲ್ಲಿ ಭತ್ತಕ್ಕೆ 1200-1300 ರು ದರವಿದೆ. ರೈತರು ಬೆಲೆ ಏರಿಕೆಯಾಗಬಹುದೆಂದು ಕಾದು ಕಾದು ಸುಸ್ತಾಗಿ ವಿಧಿಯಿಲ್ಲದೇ ನಿಕೃಷ್ಟ ದರಕ್ಕೆ ಮಾರಾಟ ಮಾಡುತ್ತಿದ್ದಾರೆ. ಸರ್ಕಾರ ಭತ್ತಕ್ಕೆ ಕನಿಷ್ಟ ಬೆಂಬಲ ಬೆಲೆ 2500-3000 ರು ನಿಗದಿಪಡಿಸಬೇಕು ಎಂಬ ಆಗ್ರಹ ರೈತಾಪಿ ವಲಯದಿಂದ ಕೇಳಿ ಬರುತ್ತಿದೆ.
ಅನ್ನಭಾಗ್ಯ ಯೋಜನೆ ಭತ್ತದ ಕ್ಷೇತ್ರದ ಮೇಲೆ ತುಂಬಾ ಪರಿಣಾಮ ಬೀರಿದೆ. ಉಚಿತವಾಗಿ ಅಕ್ಕಿ ಸಿಗುತ್ತಿರುವುದರಿಂದ ರೈತರು ಬೆಳೆದ ಭತ್ತವನ್ನು ಬೇಕಾಬಿಟ್ಟಿ ದರಕ್ಕೆ ವ್ಯಾಪಾರಿಗಳು ಕೇಳುತ್ತಿದ್ದಾರೆ. ಜತೆಗೆ ವ್ಯಾಪಾರಸ್ಥರು ಖರೀದಿಸಿದ ಭತ್ತ ಐದಾರು ವರ್ಷಗಳಿಂದ ಇಟ್ಟಲೆ ದೂಳು ಹಿಡಿಯುತ್ತಿದೆ. ಅಕ್ಕಿಗೆ ಬೇಡಿಕೆ ಕಡಿಮೆಯಾಗಿದ್ದರಿಂದ ವ್ಯಾಪಾರಿಗಳು ಭತ್ತ ಖರೀದಿಸಲು ಸಹ ನಿರಾಸಕ್ತಿ ತೋರುತ್ತಿದ್ದಾರೆ. ಮೂರು ವರ್ಷದಿಂದ ಸಂಗ್ರಹವಿರುವ ಭತ್ತ ಮಾರಾಟ ಮಾಡೋಣವೆಂದರೆ 1000-1200 ರುಗೆ ಕೇಳುತ್ತಿದ್ದಾರೆ. ರೈತರ ಪಾಡು ಚಿಂತಾಜನಕವಾಗಿದೆ. – ಮಹಾಬಲ ನಾಯ್ಕ, ಭತ್ತದ ಬೆಳೆಗಾರ