ಶಿರಸಿ: ವೃತ್ತಿಯಲ್ಲಿ ಶಿಕ್ಷಕ ವೃತ್ತಿ ಅತೀ ಶ್ರೇಷ್ಠವಾಗಿದ್ದು, ಎಷ್ಟು ವರ್ಷ ಸೇವೆ ಸಲ್ಲಿಸಿದ್ದೇನೆ ಎಂಬುದಕ್ಕಿಂತ ತಮ್ಮಿಂದ ಎಷ್ಟು ವಿದ್ಯಾರ್ಥಿಗಳಿಗೆ ಬದುಕು ರೂಪಿಸಿಕೊಳ್ಳಲು ಸಹಾಯಕಾರಿಯಾಗಿದೆ ಎಂಬುದು ಅತೀ ಮುಖ್ಯ ಎಂದು ಹುಬ್ಬಳ್ಳಿಯ ಪ್ರತಿಷ್ಟಿತ ಚೇತನಾ ಬ್ಯುಸಿನೆಸ್ ಕಾಲೇಜಿನ ಪ್ರಾಧ್ಯಾಪಕರೂ ಆದ ನಿರ್ದೇಶಕ ಡಾ.ವಿಶ್ವನಾಥ ಎಂ.ಕೊರವಿ ಅಭಿಪ್ರಾಯ ಪಟ್ಟರು.
ಅವರು ಚಿಪಗಿಯ ಪ್ರೊ.ಎಸ್.ಎಂ.ಕಮನಳ್ಳಿ ಅವರ ನಿವಾಸದಲ್ಲಿ ಇತ್ತೀಚೆಗೆ ಎಂ.ಎಂ.ಕಲಾ ಮತ್ತು ವಿಜ್ಞಾನ ಕಾಲೇಜಿನಲ್ಲಿ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಬಿ.ಕೆ.ಕೆಂಪರಾಜು ಅವರಿಗೆ ಅವರ ಸ್ನೇಹಿತರ ಬಳಗ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಪ್ರೊ.ಕೆಂಪರಾಜು ಅವರು ಈ ಹಿಂದೆ ಹುಬ್ಬಳ್ಳಿಯ ಮೂರು ಸಾವಿರ ಮಠದ ಮಹಿಳಾ ಕಾಲೇಜಿನಲ್ಲಿದ್ದಾಗಲೂ ಅಲ್ಲಿಯ ವಿದ್ಯಾರ್ಥಿನಿಯರ ಅಚ್ಚು ಮೆಚ್ಚಿನ ಪ್ರಾಧ್ಯಾಪಕರಾಗಿದ್ದರು. ಬಳಿಕ ಶಿರಸಿ ಕಾಲೇಜಿಗೆ ನಿಯುಕ್ತಿಯಾಗಿ ಇಲ್ಲಿಯೂ ವಿದ್ಯಾರ್ಥಿ ಸಮೂಹದಲ್ಲಿ ಒಳ್ಳೆಯ ಹೆಸರು ಮಾಡಿದರು. ಅವರ ವಿಷಯ ಪಾಂಡಿತ್ಯಕ್ಕೆ ಸಾಕ್ಷಿಯಾಗಿದೆ. ಅಲ್ಲದೆ ತಮ್ಮ ಸಹಪಾಠಿ, ಆಡಳಿತ ಮಂಡಳಿಯ ಜತೆಯೂ ಉತ್ತಮ ಬಾಂಧವ್ಯ ಹೊಂದಿದ್ದು ಅವರ ವಿಶಾಲ ಹೃದಯ, ಮನಸ್ಸಿಗೆ ಹಿಡಿದ ಕೈ ಗನ್ನಡಿಯಾಗಿದೆ ಎಂದು ಬಣ್ಣಿಸಿದರು. ಪ್ರೊ.ಕೆಂಪರಾಜು ಅವರ ನಿವೃತ್ತಿ ನಂತರದ ಸೇವೆ ಸಮಾಜಕ್ಕೆ ಇನ್ನೂ ಅವಶ್ಯವಿದೆ. ಸಮಾಜ ಅವರ ಸೇವೆಯ ಉಪಯೋಗ ತೆಗೆದುಕೊಳ್ಳಬೇಕು ಎಂದು ಆಶಿಸಿದರು.
ಅವರ ಒಡನಾಡಿಗಳಾದ ಶಿವಮೊಗ್ಗದ ಡಾ.ಬಾಲಕೃಷ್ಣ ಹೆಗಡೆ, ಹಾವೇರಿಯ ಡಾ.ಕೆಂಚವೀರಪ್ಪ, ಪ್ರೊ.ಕೊಲ್ಲಾಪುರೆ, ಮೈಸೂರಿನ ರಂಗಸ್ವಾಮಿ, ಪ್ರೊ.ಭುವನೇಶ್ವರ್ ಮೊದಲಾದವರು ಮಾತನಾಡಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರೊ.ಕೆಂಪರಾಜು, ಮುಯಸೂರೊನ ಬಡ ಕುಟುಂಬದಿಂದ ಬಂದ ತಮಗೆ ಎಂ.ಇ.ಎಸ್. ಅನ್ನ ನೀಡಿದ ಸಂಸ್ಥೆಯಾಗಿದೆ. ಅದರ ಋಣ ತೀರಿಸಲು ಅಸಾಧ್ಯ. ಇಡೀ ಶಿರಸಿ ಜನತೆ ತಮ್ಮ ಸೇವಾವಧಿಯಲ್ಲಿ ತೋರಿದ ಪ್ರೀತಿ, ವಿಶ್ವಾಸ, ಗೌರವವನ್ನು ಎಂದಿಗೂ ಮರೆಯಲಾಗದು ಎಂದು ಗದ್ಗದಿತವಾಗಿ ನುಡಿದರು.
ಪ್ರೊ.ಎಸ್.ಎಂ.ಕಮನಳ್ಳಿ ಕಾರ್ಯಕ್ರಮ ನಿರ್ವಹಿಸಿದರು. ಸಹಾಯಕ ಗ್ರಂಥಪಾಲಕ ನಾಗರಾಜ ಜೋಗಳೇಕರ್ ವಂದಿಸಿದರು. ಕೆಂಪರಾಜು ಅವರ ಧರ್ಮ ಪತ್ನಿ ಲೀಲಾವತಿ, ದಾವಣಗೆರೆ ವಿವಿಯ ಪ್ರೊ.ಸೆಲ್ವಿ, ಪ್ರೊ.ಜಿ.ಟಿ.ಭಟ್, ಪ್ರೊ.ಕೆ.ಎಸ್.ಗೌಡರ, ಡಾ.ಪಿ.ಟಿ.ಕದಂ, ಬೆಳಗಾವಿಯ ಡಾ.ಅರ್ಜುನ ಮತ್ತಿತರರು ಉಪಸ್ಥಿತರಿದ್ದರು.