ಶಿರಸಿ: ರಾಜ್ಯದ ಸಹಕಾರಿ ಸಂಘಗಳಿಗೆ ಮಾದರಿ ವ್ಯವಸ್ಥೆ ಎನ್ನುವಂತಾಗಿರುವ ಕೋ-ವ್ಯಾಲೆಟ್ ತಂತ್ರಾಶವನ್ನು ಟಿ.ಆರ್.ಸಿ ಸಹಕಾರಿ ಸಂಘದ 108 ನೇ ವಾರ್ಷಿಕ ಸರ್ವಸಾಧಾರಣ ಸಭೆಯಲ್ಲಿ ಸಂಘದ ಅಧ್ಯಕ್ಷ ರಾಮಕೃಷ್ಣ ಶ್ರೀಪಾದ ಹೆಗಡೆ ಕಡವೆ ಬಿಡುಗಡೆಗೊಳಿಸಿದರು.
ನಗರದ ಟಿಎಸ್ಎಸ್ ಹೊಸ ಮಾರುಕಟ್ಟೆ ಪ್ರಾಂಗಣದಲ್ಲಿ ಸಂಘದ ವಾರ್ಷಿಕ ಸರ್ವಸಾಧಾರಣ ಸಭೆ ನಡೆಯಿತು. ಪ್ರಸ್ತಾವಿಕ ಮಾತುಗಳನ್ನಾಡಿದ ಸಂಘದ ಅಧ್ಯಕ್ಷ ರಾಮಕೃಷ್ಣ ಹೆಗಡೆ ಕಡವೆ, ಕರ್ನಾಟಕ ರಾಜ್ಯದ ಅತೀ ಪುರಾತನ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಇಲ್ಲಿನ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (ಟಿಆರ್‌ಸಿ) 2020-21 ನೇ ಸಾಲಿನಲ್ಲಿ ರೂ.61.64 ಲಕ್ಷ ಲಾಭ ಗಳಿಸುವುದರೊಂದಿಗೆ ಶೇರು ಸಂಗ್ರಹಣೆ, ನಿಧಿಗಳ ಶೇಖರಣೆ ಎಲ್ಲ ವಿಭಾಗಗಳಲ್ಲಿ ಪ್ರಗತಿ ಸಾಧಿಸಿದೆ.
ಸಂಘದಿಂದ ಸದಸ್ಯರಿಗೆ ಅನುಕೂಲವಾಗುವಂತೆ ಹಲವು ರಿಯಾಯಿತಿಗೊಳಪಡುವ ಅಲ್ಪಾವಧಿ ಕೃಷಿಸಾಲ(ಬೆಳೆಸಾಲ) ಹಾಗೂ ವಿವಿಧ ಕೃಷಿ ಮಾಧ್ಯಮಿಕ ಸಾಲಗಳನ್ನು ಸಕಾಲಿಕವಾಗಿ ನೀಡಲಾಗುತ್ತಿದೆ. ಈ ಕೃಷಿ ಸಾಲಗಳಿಗೆ ರಾಜ್ಯ-ಕೇಂದ್ರ ಸರ್ಕಾರಗಳ ಬಡ್ಡಿ ರಿಯಾಯಿತಿ ಸೌಲಭ್ಯ ದೊರಕುತ್ತಿರುವುದರಿಂದ ಈ ಸಾಲಗಳನ್ನೇ ಸದಸ್ಯರಿಗೆ ಹೆಚ್ಚಾಗಿ ನೀಡಲು ವಿಶೇಷ ಆದ್ಯತೆ ನೀಡಲಾಗುತ್ತಿದೆ.
ಸಂಘದಿಂದ ಸದಸ್ಯರಿಗೆ ನೀಡಲ್ಪಟ್ಟ ಸಾಲಗಳ ಪೈಕಿ, ಕೃಷಿ ಸಾಲಗಳ ಪ್ರಮಾಣ ಶೇಕಡಾ 90ಕ್ಕಿಂತಲೂ ಹೆಚ್ಚಾಗಿರುವುದ್ದು, ತಮಗೆಲ್ಲರಿಗೂ ತಿಳಿದಿರುವಂತೆ ಕೃಷಿ ಸಾಲಗಳ ನೀಡಿಕೆ-ವಸೂಲಿ ವ್ಯವಹಾರವು ಸಂಘಕ್ಕೆ ಆರ್ಥಿಕವಾಗಿ ಅಷ್ಟೇನು ಲಾಭದಾಯಕವಾದ ವ್ಯವಹಾರವಾಗಿರುವುದಿಲ್ಲ.
ಕೆಲವೊಂದು ಅಂಶಗಳನ್ನು ಸಂದರ್ಭಗಳಲ್ಲಿ ಕನಿಷ್ಟ ಲಾಭಾಂಶದ ಪಾಲು(ಶೇ.2) ಸಹ ಸಕಾಲದಲ್ಲಿ ಸಂದರ್ಭದಲ್ಲಿ ಸಂಘಕ್ಕೆ ದೊರಕುವುದಿಲ್ಲ. ಇದರಿಂದಾಗಿ ಅಂದಾಜು ವಾರ್ಷಿಕವಾಗಿ ಕನಿಷ್ಟ ರೂ. 35.00 ಲಕ್ಷಕ್ಕೂ ಹೆಚ್ಚು ರಖಮು ಸಂಘಕ್ಕೆ ಬರುವ ಆದಾಯದಲ್ಲಿ ಕೊರತೆ ಉಂಟಾಗುತ್ತಿದೆ. ಆದಾಗಿಯೂ ಸಹ ಸಂಘವು – 10ರ ವರೆಗೆ ಸದಸ್ಯರಿಗೆ ಅನುಕೂಲ ಮಾಡಿಕೊಡುವ ಏಕಮೇವ ಉದ್ದೇಶದಿಂದ ವ್ಯವಹಾರದಿಂದಾಗುವ ಲಾಭ-ನಷ್ಟವನ್ನು ಪರಿಗಣಿಸದೇ ಕಾರ್ಯನಿರ್ವಹಿಸುತ್ತಿದ್ದು ಸದಸ್ಯರು ಇದರ ಗರಿಷ್ಠ ಪ್ರಯೋಜನ ಪಡೆದುಕೊಳ್ಳುವಂತೆ ಅವರು ವಿನಂತಿಸಿಕೊಂಡರು.
ಕಾರ್ಯಕ್ರಮದಲ್ಲಿ ದಶಕಕ್ಕೂ ಅಧಿಕ ಕಾಲದಿಂದ ಸಂಘದಲ್ಲಿ ವ್ಯವಹಾರ ನಡೆಸುತ್ತಿರುವ ಸದಸ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಟಿಆರ್‌ಸಿಯು ಸತತವಾಗಿ ’ಅ’ ವರ್ಗದ ಆಡಿಟ್ ವರ್ಗೀಕರಣದಲ್ಲಿ ಮುಂದುವರೆದಿದ್ದು, ಕಳೆದ ನಾಲ್ಕು ವರ್ಷಗಳಿಂದ ಸಾಲ ವಸೂಲಾತಿಯಲ್ಲೂ ಶೇ.100 ಕ್ಕೆ ನೂರರಷ್ಟು ಪ್ರಗತಿ ಸಾಧಿಸಿದೆ. ಸಾಲ ವಸೂಲಿಗಾಗಿ ಸಂಸ್ಥೆಯ ಇತಿಹಾಸದಲ್ಲಿಯೇ ಕಠಿಣ ಕ್ರಮ ಕೈಗೊಂಡ ಉದಾಹರಣೆ ಇಲ್ಲದಿರುವುದು ವಿಶೇಷವಾಗಿದೆ. ಸಾಲಗಾರ ಸದಸ್ಯರಿಗೆ ಕೇವಲ ಪ್ರೀತಿ ವಿಶ್ವಾಸ ಮತ್ತು ವ್ಯಾವಹಾರಿಕ ತಿಳುವಳಿಕೆ ನೀಡುವುದರಿಂದಲೇ ವಸೂಲಾತಿ ಕ್ರಮ ಕೈಗೊಳ್ಳುವುದು ಟಿಆರ್‌ಸಿಯ ವೈಶಿಷ್ಟ್ಯವಾಗಿದೆ.
ಪ್ರಸಕ್ತ ವರ್ಷ 68.67 ಕೋಟಿ ರೂಪಾಯಿಗಳಿಗೂ ಮೀರಿ ವಿವಿಧ ರೀತಿಯ ಸಾಲಗಳನ್ನು ಸದಸ್ಯರಿಗೆ ನೀಡಿದೆ. ಈ ಪೈಕಿ 33.62 ಕೋಟಿ ರೂ. ಬೆಳೆಸಾಲ ನೀಡಿದ್ದು ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಳೆಸಾಲ ನೀಡಿದ ಸಂಸ್ಥೆಗಳ ಸಾಲಿನಲ್ಲಿ ಟಿಆರ್‌ಸಿ ಮುಂಚೂಣಿಯಲ್ಲಿದೆ. ಹಾಗೂ ವರ್ಷಾಂತ್ಯಕ್ಕೆ 101.19 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ.
ಇಂದಿಗೆ 108 ವರ್ಷಗಳ ಹಿಂದೆ ಕೇವಲ 16 ಸದಸ್ಯರ 80 ರೂ. ಶೇರು ಬಂಡವಾಳದಿಂದ ಪ್ರಾರಂಭಗೊಂಡ ಸಂಘವು ಇಂದು 3371 ಶೇರು ಸದಸ್ಯರು ಹಾಗೂ 1500 ಕ್ಕೂ ಹೆಚ್ಚು ನಾಮಮಾತ್ರ ಸದಸ್ಯರನ್ನು ಹೊಂದಿದ್ದು ರೂ. 7 ಕೋಟಿಗೂ ಮೀರಿ ಶೇರು ಸಂಗ್ರಹಣೆ ಹೊಂದಿರುತ್ತದೆ.
ಸದಸ್ಯರಿಗೆ ಕೃಷಿ ಪತ್ತನ್ನು ಒದಗಿಸುವುದರ ಜೊತೆಗೆ ಕೃಷಿಕ ಸದಸ್ಯರ ಆರ್ಥಿಕ ಪ್ರಗತಿಗೆ ಪೂರಕವಾದ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೃಷಿ ಮಾಹಿತಿ ಕಾರ್ಯಾಗಾರಗಳು, ಕೃಷಿಕರಿಗೆ ವೈಜ್ಞಾನಿಕ ಮಾರ್ಗದರ್ಶನ, ಕೃಷಿಕೂಟಗಳ ರಚನೆಯಂತಹ ಕಾರ್ಯಕ್ರಮಗಳು ಇದಕ್ಕೆ ಸಾಕ್ಷಿಯಾಗಿದೆ. ಸದಸ್ಯರ ಅನುಕೂಲತೆಗಾಗಿ ಆರ್‌ಟಿಜಿಎಸ್/ನೆಫ್ಟ್ ನಂತಹ ಸೇವೆ, ಕಂದಾಯ ಸಲಹೆಸೂಚನೆ ವ್ಯವಸ್ಥೆ, ಭದ್ರತಾಕೋಶದ ವ್ಯವಸ್ಥೆ, ಸದಸ್ಯರ ಕೃಷಿಕ್ಷೇತ್ರಗಳಿಗೆ ವಿಮೆ, ಸಂಜೀವಿನಿ ನಿಧಿಯಂತಹ ವಿಶಿಷ್ಟ ಯೋಜನೆಗಳನ್ನು ಸಂಘವು ಜಾರಿಗೆ ತಂದಿದೆ.
ವೇದಿಕೆಯಲ್ಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ರಮೇಶ ಹೆಗಡೆ ಬಾಳೆಗದ್ದೆ, ನಿರ್ದೇಶಕರುಗಳಾದ ಗಣಪತಿ ರಾಯ್ಸದ್, ಶಿವಾನಂದ ಭಟ್ಟ ಸೇರಿದಂತೆ ಇನ್ನಿತರರು ಇದ್ದರು.