ಶಿರಸಿ: ನಗರದ ಅಂಬೇಡ್ಕರ್ ಭವನದಲ್ಲಿ ಬುಧವಾರ ಆಯೋಜಿಸಿದ್ದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಉಪನ್ಯಾಸ ನೀಡಿದ ಓಣಿಕೇರಿ ನೆಹರು ಪ್ರೌಢಶಾಲೆ ಮುಖ್ಯಶಿಕ್ಷಕ ರಾಜಪ್ಪ ಎಚ್. ಮಹಾತ್ಮರಲ್ಲಿನ ಒಳ್ಳೆಯ ಗುಣಗಳ ಅಳವಡಿಕೆ ಇಂದಿನ ಸಮಾಜದಲ್ಲಿ ಆಗಬೇಕಿದೆ ಎಂದರು. ಮಹಾತ್ಮರ ಪೂರ್ವ ಇತಿಹಾಸವನ್ನು ಕೆದಕುವ ಬದಲು ಅವರಲ್ಲಿನ ಉದಾತ್ತ ಗುಣಗಳು, ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಕಾರ್ಯ ಆಗಬೇಕು,ವಾಲ್ಮೀಕಿ ಅವರು ಕೇವಲ ರಾಮಾಯಣ ಬರೆಯದೆ ಅದರ ಮೂಲಕ ಇಡೀ ಸಮಾಜವನ್ನು ತಿದ್ದುವ, ರೂಪುಸುವ ಕಾರ್ಯ ಮಾಡಿದ್ದರು. ರಾಮರಾಜ್ಯ ಕಟ್ಟುವ ಕಲ್ಪನೆಯನ್ನು ರಾಮಾಯಣದ ಮೂಲಕ ಸಾಕ್ಷಾತ್ಕರಿಸಿದ್ದರು ಎಂದರು. ಕಾರ್ಯಕ್ರಮ ಉದ್ಘಾಟಿಸಿದ ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಜೀವನ ಮೌಲ್ಯಗಳನ್ನು ಕಟ್ಟಿಕೊಡುವ ರಾಮಾಯಣ ಕಾವ್ಯ ಬರೆದ ಮಹರ್ಷಿ ವಾಲ್ಮೀಕಿ ನಿತ್ಯ ಪೂಜನೀಯ ಎಂದರು.
ಈ ಸಂದರ್ಭದಲ್ಲಿ 2020-21ನೇ ಸಾಲಿನಲ್ಲಿ ಎಸ್.ಎಸ್.ಎಲ್.ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ತಾಲೂಕಿನ ಪರಿಶಿಷ್ಟ ಪಂಗಡದ 6 ವಿದ್ಯಾರ್ಥಿಗಳು ಹಾಗೂ ತಾಲೂಕಾ ಶ್ರೀ ಮಹರ್ಷಿ ವಾಲ್ಮೀಕಿ ಸಾಧಕ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಲಾಯಿತು.
ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ, ಡಿಎಸ್ಪಿ ರವಿ ನಾಯ್ಕ, ಪೌರಾಯುಕ್ತ ಕೇಶವ ಚೌಗಲೆ, ನಗರಸಭೆ ಸದಸ್ಯ ಶ್ರೀಕಾಂತ ಬಳ್ಳಾರಿ, ಉಮೇಶ ಬಂಕಾಪುರ, ಪುಟ್ಟಸ್ವಾಮಿ ಇದ್ದರು. ತಹಸೀಲ್ದಾರ ಎಂ. ಆರ್. ಕುಲಕರ್ಣಿ ಸ್ವಾಗತಿಸಿದರು. ಕಂದಾಯ ಸಿಬ್ಬಂದಿ ರಾಜೇಶ್ವರಿ ನಿರೂಪಿಸಿದರು.