ಹಳಿಯಾಳ: ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಮೇಲೆ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ್ ಅವರನ್ನು ಉಚ್ಚಾಟಿಸಲು ಮುಂದಾದ ಕಾಂಗ್ರೆಸ್ ನಡೆ ಹಳಿಯಾಳ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಘೊಟ್ನೇಕರ್ ಪಕ್ಷದಲ್ಲಿದ್ದುಕೊಂಡೇ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ಭಾಗವಹಿಸುತ್ತಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಅವರನ್ನು ಪಕ್ಷದಿಂದ ಉಚ್ಛಾಟಿಸುವಂತೆ ಕೆಪಿಸಿಸಿಗೆ ದೂರು ನೀಡುವುದಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಶ್ ಕೋರ್ವೆಕರ್ ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ. ಘಟನೆಯಿಂದ ಹಳಿಯಾಳ ಕಾಂಗ್ರೆಸ್ ಸಂಪೂರ್ಣ ಒಡೆದ ಮನೆಯಾಗಿ ಬೇರ್ಪಟ್ಟಿದೆ.
ಹೌದು, ವಿಧಾನ ಸಭಾ ಚುನಾವಣೆಗೆ ವರ್ಷ ಬಾಕಿ ಇರುವಾಗಲೇ ಹಳಿಯಾಳ ಕಾಂಗ್ರೆಸ್ ನಲ್ಲಿ ಟಿಕೇಟ್ ಗೆ ಸಂಘರ್ಷ ಆರಂಭವಾಗಿದೆ. ಪಕ್ಷದಲ್ಲಿ ಒಳಜಗಳ ತಾರಕಕ್ಕೆರಿದ್ದು, ಮಾಜಿ ಸಚಿವ ಹಾಗೂ ಹಾಲಿ ಶಾಸಕ ಆರ್. ವಿ ದೇಶಪಾಂಡೆ ಮತ್ತು ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಘೋಟ್ನೇಕರ್ ನಡುವೆ ನೇರಾ ನೇರ ಗುದ್ದಾಟ ಆರಂಭವಾಗಿದೆ. ಎರಡು ನಾಯಕರ ಬೆಂಬಲಿಗರ ಪ್ರತ್ಯೇಕ ಗುಂಪು ಸಿದ್ಧವಾಗಿದ್ದು, ಪಕ್ಷ ಇಬ್ಬಾಗವಾಗಿದೆ.
ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವಿನ ಪೈಪೋಟಿಗಿಂತ ಪಕ್ಷದ ಒಳಗಿನ ಗುದ್ದಾಟವೇ ಹೆಚ್ಚು ಗಮನ ಸೆಳೆದಿದೆ. ಇನ್ನು ಹಾಲಿ ಶಾಸಕ ಆರ್.ವಿ.ದೇಶಪಾಂಡೆ ವಿರುದ್ಧ ತಿರುಗಿ ಬಿದ್ದಿರುವ ಎಸ್.ಎಲ್. ಘೋಟ್ನೇಕರ್ ಬಹಿರಂಗವಾಗಿ ಈ ಬಾರಿ ಕ್ಷೇತ್ರದಿಂದ ತನಗೇ ಟಿಕೇಟ್ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ತನ್ನ ಬೆಂಬಲಿಗರ ಗುಂಪನ್ನ ಕಟ್ಟಿಕೊಂಡು ಚುನಾವಣೆಗೆ ಒಂದೆಡೆ ಸಿದ್ಧತೆಯನ್ನೂ ನಡೆಸಿದ್ದಾರೆ. ಘೋಟ್ನೇಕರ ಅಭಿಮನಿಗಳ ಬಳಗ ರಚನೆ ಮಾಡಿಕೊಂಡಿದ್ದು, ಇದೇ ಉದ್ದೇಶದಿಂದ ಹಲವು ಸಭೆಗಳನ್ನು ಏರ್ಪಡಿಸುತ್ತಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಸದಸ್ಯರನ್ನೇ ತಮ್ಮ ವೈಯಕ್ತಿಕ ಬಳಗಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತಿದ್ದಾರೆ.
ಇನ್ನೊಂದೆಡೆ ಆರ್ ವಿ ದೇಶಪಾಂಡೆ ಸಹ ತನ್ನ ಬೆಂಬಲಿಗರ ಜೊತೆ ಕ್ಷೇತ್ರದಲ್ಲಿ ಕೆಲಸ ಮಾಡುವ ಮೂಲಕ ಅಲ್ಲಲ್ಲಿ ಘೋಟ್ನೇಕರ್ ವಿರುದ್ಧ ಸಮರ ಸಾರುತ್ತಿದ್ದಾರೆ. ಇದೀಗ ದೇಶಪಾಂಡೆ ಆಪ್ತ ಹಳಿಯಾಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಭಾಶ್ ಬೆಂಬಲಿಗರೊಂದಿಗೆ ಸುದ್ದಿಗೋಷ್ಠಿ ನಡೆಸಿ ಘೋಟ್ನೇರ್ ಪಕ್ಷ ವಿರೋಧಿ ಚಟುವಟಿಕೆ ಮಾಡುತ್ತಿದ್ದು ಹೀಗಾಗಿ ಅವರನ್ನು ಪಕ್ಷದಿಂದ ಉಚ್ಚಾಟಿಸುವುದು ಅನಿವಾರ್ಯ. ಈ ಕುರಿತು ಪಕ್ಷದ ಜಿಲ್ಲಾ ಹಾಗು ರಾಜ್ಯ ಸಮಿತಿಗಳಿಗೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.
ಇದರಿಂದ ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಪರಿಣಾಮ ಪಕ್ಷದ ಮೇಲಾಗುತ್ತಿದೆ. ಇದನ್ನರಿತ ಕಾಂಗ್ರೆಸ್ ಪಕ್ಷಕ್ಕೆ ಆಗುತ್ತಿರುವ ಹಿನ್ನೆಡೆಯನ್ನು ಸರಿಪಡಿಸಲು ಘೊಟ್ನೆಕರ ರವರ ಮೇಲೆ ಉಚ್ಛಾಟನೆಯ ಶಿಸ್ತು ಕ್ರಮ ಕೈಗೊಳ್ಳುವಂತೆ ಹಳಿಯಾಳ ಬ್ಲಾಕ್ ವತಿಯಿಂದ ಠರಾವು ಮಾಡಿಸಿ, ಡಿಸಿಸಿ ಮತ್ತು ಕೆಪಿಸಿಸಿಗೆ ಪ್ರಸ್ತಾವನೆ ಕಳಿಸಲು ಸಿದ್ಧತೆ ನಡೆಸಿದೆ. ಇದಕ್ಕೆ ಘೊಟ್ನೇಕರ್ ಬೆಂಬಲಿಗರು ಸಹಾ ತಿರುಗೇಟು ನೀಡಲು ಸಿದ್ಧರಾಗಿದ್ದು, ಯಾವರೀತಿ ಉತ್ತರ ನೀಡಲಿದ್ದಾರೆ ಎನ್ನುವುದನ್ನ ಕಾದು ನೋಡಬೇಕು.
ಒಟ್ಟಿನಲ್ಲಿ ಇಬ್ಬರು ನಾಯಕರ ನಡುವಿನ ಒಳಜಗಳ ಹಾಗೂ ಒಣ ಪ್ರತಿಷ್ಠೆಗೆ ಕಾಂಗ್ರೆಸ್ ಪಕ್ಷ ಬಲಿಯಾಗುತ್ತಿದ್ದು, ಎತ್ತ ಹೋಗುವುದು ಎನ್ನುವ ಗೊಂದಲ ಕಾರ್ಯಕರ್ತರದ್ದಾಗಿದೆ.