ಸಿದ್ದಾಪುರ: ಲಯನ್ಸ್ ಅಂತಾರಾಷ್ಟ್ರೀಯ ಸಂಸ್ಥೆ 317 ಜಿಲ್ಲೆಯ ಸಹಯೋಗದೊಂದಿಗೆ ಸ್ಥಳೀಯ ಬಾಲಭವನದಲ್ಲಿ ನೇತ್ರದಾನ ವಾಗ್ದಾನ ಅಭಿಯಾನ ನಡೆಯಿತು. ಸಿದ್ದಾಪುರ ಲಯನ್ಸ್ ಕ್ಲಬ್ ಅಧ್ಯಕ್ಷೆ ಶ್ಯಾಮಲಾ ರವಿ ಹೆಗಡೆ, ಹೂವಿನಮನೆ ಮಾತನಾಡಿ, ಸಿದ್ದಾಪುರ ಲಯನ್ಸ್ ಕ್ಲಬ್‌ನಿಂದ ಲಯನ್ಸ್ ಜಿಲ್ಲೆಯ ಸಹಯೋಗದೊಂದಿಗೆ ನಡೆಯುತ್ತಿರುವ ಅಭಿಯಾನ ಮಹತ್ವಪೂರ್ಣದ್ದು ಮತ್ತು ಸಮಾಜ ಉಪಯೋಗಿ ಕಾರ್ಯಕ್ರಮವಾಗಿದೆ. ಜನರು ಅಭಿಯಾನವನ್ನು ಅರ್ಥ ಮಾಡಿಕೊಂಡು ನೇತ್ರದಾನಕ್ಕೆ ಸಹಕರಿಸಬೇಕು ಎಂದರು.
2021-22 ರ ಜಿಲ್ಲಾ ಗವರ್ನರ್ ಶ್ರೀಕಾಂತ ಮೋರೆ ಅಭಿಯಾನ ಉದ್ಘಾಟಿಸಿ, ನೇತ್ರದಾನ ಅತ್ಯಂತ ಉಪಯುಕ್ತ ಕಾರ್ಯಕ್ರಮ, ಕಣ್ಣಿನ ರಕ್ಷಣೆಯ ಜೊತೆ ಮರಣಾನಂತರ ದಾನ ಮಾಡುವುದರಿಂದ ಸತ್ತ ಮೇಲೂ ಪರೋಪಕಾರಕ್ಕೆ ದೇಹ ಮೀಸಲಾಗುತ್ತದೆ ಎಂದರು. ಸ್ಥಳೀಯ ಜೆ. ಎಂ. ಎಫ್. ಸಿ. ಕೋರ್ಟ್ ನ್ಯಾಯಾಧೀಶ ಸಿದ್ಧರಾಮ ಎಸ್. ಮುಖ್ಯ ಅತಿಥಿ ಸ್ಥಾನದಿಂದ ಮಾತನಾಡಿ, ನೇತ್ರದಾನಕ್ಕಿಂತ ದೊಡ್ಡ ದಾನ ಬೇರಿಲ್ಲ. ಅಂಗಾAಗ ದಾನವನ್ನು ಮಾಡುವಾಗ ವೈದ್ಯರುಗಳ ಸಲಹೆ, ಮಾರ್ಗದರ್ಶನ ಅಗತ್ಯ ಎಂದರು.
ನೇತ್ರ ತಜ್ಞ, ಮಾಜಿ ಜಿಲ್ಲಾ ಗವರ್ನರ್ ರವಿ ನಾಡಗೇರ್ ನೇತ್ರದಾನದ ಮಹತ್ವ ವಿವರಿಸಿದರು. 2020-21 ನೇ ಸಾಲಿನ ಲಯನ್ಸ್ ಜಿಲ್ಲಾ ಗವರ್ನರ್ ಡಾ. ಗಿರೀಶ ಕುಚ್ಚಿನಾಡ, ಅವರು ನೇತ್ರದಾನ ವಾಗ್ದಾನ ಪ್ರಪತ್ರಗಳನ್ನು ಬಿಡುಗಡೆಗೊಳಿಸಿದರು. ಶಿರಸಿ ಲಯನ್ಸ್ ಕ್ಲಬ್ ಅಧ್ಯಕ್ಷ ಉದಯ ಸ್ವಾದಿ, ನಾಗರಾಜ ದೋಶೆಟ್ಟಿ ಧ್ವಜ ವಂದನೆ ಮಾಡಿದರು. ಸಿದ್ದಾಪುರ ಲಯನ್ಸ್ ಕಾರ್ಯದರ್ಶಿ ರಾಘವೇಂದ್ರ ಭಟ್ಟ, ಕಲ್ಲಾಳ ಸಹಕರಿಸಿದರು, ಅಭಿಯಾನ ಸಂಯೋಜಕ ಡಾ. ಸುರೇಶ ಪಂಡಿತ ಉಪಸ್ಥಿತರಿದ್ದರು. ವೀಣಾ ಆನಂದ ಶೇಟ ವಂದಿಸಿದರು.