ಯಲ್ಲಾಪುರ: ಸಂಕಲ್ಪ ಸಂಸ್ಥೆಯ 35 ನೇ ಸಂಕಲ್ಪ ಉತ್ಸವ ನ.6 ರಿಂದ 12 ರವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೇಳಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ನ.6 ರಿಂದ 12 ರವರೆಗೆ ಹಾಗೂ ನ.21 ಸೇರಿ ಒಟ್ಟು 8 ದಿನಗಳ ಕಾಲ ಉತ್ಸವ ನಡೆಯಲಿದೆ. ಗಾಂಧಿ ಕುಟೀರದಲ್ಲಿ ನ.6, 7, 8 ರಂದು ಕವಿಗೋಷ್ಠಿ, ಚಿಂತನ ಗೋಷ್ಠಿ, ಭರತನಾಟ್ಯ, ಕೀರ್ತನೆ, ಯಕ್ಷಗಾನ, ಸಂಗೀತ ಇತರ ಕಾರ್ಯಕ್ರಮಗಳು ನಡೆಯಲಿವೆ. ನ.9 ರಂದು ವಜ್ರಳ್ಳಿ, 10 ರಂದು ಆನಗೋಡ ಹಾಗೂ 11 ರಂದು ನಂದೊಳ್ಳಿಯಲ್ಲಿ ಉತ್ಸವದ ಅಂಗವಾಗಿ ತಾಳಮದ್ದಲೆ, 12 ರಂದು ನಂದೊಳ್ಳಿಯಲ್ಲಿ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ನ.21 ರಂದು ಗಾಂಧಿ ಕುಟೀರದಲ್ಲಿ ಪ್ರಸಿದ್ಧ ಕಲಾವಿದರಿಂದ ಗಾನ ವೈಭವ ನಡೆಯಲಿದೆ ಎಂದರು.
ಉತ್ಸವದಲ್ಲಿ ಹೆಸರಾಂತ ಕಲಾವಿದರು, ಸಾಧಕರು, ಗಣ್ಯರು ಭಾಗವಹಿಸಲಿದ್ದಾರೆ ಎಂದು ವಿವರಿಸಿದರು. ಸಂಸ್ಥೆಯ ಪ್ರಮುಖರಾದ ಪ್ರಸಾದ ಹೆಗಡೆ, ಗೋಪಣ್ಣ ತಾರೀಮಕ್ಕಿ, ಪ್ರದೀಪ ಯಲ್ಲಾಪುರಕರ್, ಬಾಬು ಬಾಂದೇಕರ್, ಎನ್.ಎಸ್.ಭಟ್ಟ ಇತರರಿದ್ದರು.