• first
    second
    third
    previous arrow
    next arrow
  • ಯಶಸ್ವಿ ಪ್ರದರ್ಶನ ನೀಡಿ ಸೈ ಎನಿಸಿಕೊಂಡ ಯುವ ಕಲಾವಿದರ ಸಮ್ಮಿಲನ ‘ಯಕ್ಷಾಭಿವಂದನ’

    300x250 AD

    ಯಲ್ಲಾಪುರ: ಕೊರೊನಾ ಎಂಬ ಮಹಾಮಾರಿ ವ್ಯಾಪಿಸಿದ ನಂತರ ಬಹುತೇಕ ಪ್ರತಿ ಕ್ಷೇತ್ರಗಳಿಗೂ ಒಂದಲ್ಲ ಒಂದು ರೀತಿಯಲ್ಲಿ ನಷ್ಟವನ್ನು ಉಂಟು ಮಾಡಿದೆ. ಅದರಲ್ಲೂ ಕಲೆಯನ್ನೇ ನಂಬಿದ ಕಲಾವಿದರ ಪಾಲಿಗೆ ಇದು ಮತ್ತಷ್ಟು ಆಘಾತವನ್ನೇ ನೀಡಿದೆ. ಲಾಕ್ ಡೌನ್, ಸರ್ಕಾರದ ನಿಯಮಾವಳಿಗಳು ಹೀಗೆ ವಿವಿಧ ಕಾರಣಗಳಿಂದಾಗಿ ಕಳೆದ ವರ್ಷ 8-9 ತಿಂಗಳುಗಳು, ಈ ವರ್ಷ 5-6 ತಿಂಗಳುಗಳ ಕಾಲ ಯಕ್ಷಗಾನದಂತಹ ಕಲೆ ಸ್ಥಬ್ದವಾಗುವಂತಾಯಿತು. ಕಲಾ ಪ್ರದರ್ಶನಗಳಿಲ್ಲದೇ ಕಲಾವಿದರು, ಕಲಾಭಿಮಾನಿಗಳು ಬೇಸರದಲ್ಲಿದ್ದ ಸಂದರ್ಭದಲ್ಲಿ ಕಳೆದ ಒಂದು ತಿಂಗಳಿನಿಂದ ಒಂದಷ್ಟು ಯುವ ಕಲಾವಿದರು ಒಟ್ಟಾಗಿ ‘ಯಕ್ಷಾಭಿವಂದನ’ ಎಂಬ ತಂಡವೊಂದನ್ನು ಕಟ್ಟಿಕೊಂಡು ಯಶಸ್ವಿಯಾಗಿ ಯಕ್ಷಗಾನ ಪ್ರದರ್ಶನಗಳನ್ನು ನೀಡಿ ಸೈ ಎನಿಸಿಕೊಳ್ಳುತ್ತಿದೆ.


    ಈಗಾಗಲೇ ಕೆಲ ವರ್ಷಗಳಿಂದ ಯಕ್ಷಗಾನ ಕ್ಷೇತ್ರದಲ್ಲಿ ತೊಡಗಿಸಿಕೊಂಡು, ಭರವಸೆಯ ಕಲಾವಿದರೆನಿಸಿರುವ ಚಂದ್ರಹಾಸ ಗೌಡ ಹೊಸಪಟ್ಟಣ, ಕಾರ್ತಿಕ ಚಿಟ್ಟಾಣಿ ಹಾಗೂ ನಾಗರಾಜ ಭಟ್ಟ ಕುಂಕಿಪಾಲ ಯಕ್ಷಾಭಿವಂದನದ ನೇತಾರರು. ಹಿರಿಯ ಕಲಾವಿದರ ಮಾರ್ಗದರ್ಶನದಲ್ಲಿ, ಕಡಿಮೆ ವೀಳ್ಯದೊಂದಿಗೆ ಗುಣಮಟ್ಟದ ಕಲಾ ಪ್ರದರ್ಶನ ನೀಡುವ ಉದ್ದೇಶ ಈ ತಂಡದ್ದು.


    ಕಲೆಯನ್ನೇ ಜೀವಾಳವಾಗಿಸಿಕೊಂಡ ಕಲಾವಿದರಿಗೆ ಕಲಾ ಪ್ರದರ್ಶನಕ್ಕೆ ಯಾವ ಅವಕಾಶವಿಲ್ಲದೇ ಬೇಸರಪಡುವಂತಾಗಿತ್ತು. ಇಂತಹ ಸಂಕೀರ್ಣ ಸಂದರ್ಭದಲ್ಲಿ ಯಕ್ಷಗಾನ ಪ್ರದರ್ಶನಗಳನ್ನು ಆರಂಭಿಸುವುದೇ ಸವಾಲಿನ ಕೆಲಸ. ಒಮ್ಮೆ ಆರಂಭವಾದರೆ ಮತ್ತೆ ಕಲಾ ಪ್ರದರ್ಶನಗಳು, ಕಾರ್ಯಕ್ರಮಗಳು ಮೊದಲಿನಂತೆ ನಡೆಯಲಾರಂಭಿಸುತ್ತವೆ. ಆ ನಿಟ್ಟಿನಲ್ಲಿ ಸಮಾನ ಮನಸ್ಕ ಯುವ ಕಲಾವಿದರು ಸೇರಿ ಇಂಥದ್ದೊಂದು ಹೊಸ ಪರಿಕಲ್ಪನೆಯೊಂದಿಗೆ ಯಕ್ಷಗಾನ ಪ್ರದರ್ಶನ ಆರಂಭಿಸಿದ್ದಾರೆ.

    300x250 AD


    ಭಾಗವತರಾಗಿ ಗಣೇಶ ಆಚಾರಿ ಬಿಲ್ಲಾಡಿ, ದರ್ಶನ ಗೌಡ ಗೋಳಿಕೆರೆ, ಮದ್ದಲೆವಾದಕರಾಗಿ ಅನಿರುದ್ಧ ಹೆಗಡೆ ವರ್ಗಾಸರ, ಚಂಡೆವಾದಕರಾಗಿ ಸುಬ್ರಹ್ಮಣ್ಯ ಭಂಡಾರಿ ಗುಣವಂತೆ ಹಿಮ್ಮೇಳದಲ್ಲಿದ್ದಾರೆ. ಚಂದ್ರಹಾಸ ಗೌಡ ಹೊಸಪಟ್ಟಣ, ಕಾರ್ತಿಕ ಚಿಟ್ಟಾಣಿ, ರಾಜೇಶ ಭಂಡಾರಿ ಗುಣವಂತೆ, ಸನ್ಮಯ ಭಟ್ಟ ಮಲವಳ್ಳಿ, ಗೌರೀಶ ಗುಣವಂತೆ, ಸ್ತ್ರೀ ಪಾತ್ರದಲ್ಲಿ ನಾಗರಾಜ ಭಟ್ಟ ಕುಂಕಿಪಾಲ, ಮಂಜು ಗೌಡ ಕೆರವಳ್ಳಿ, ಹಾಸ್ಯಗಾರರಾಗಿ ನಾಗೇಂದ್ರ ಮೂರೂರು ಮುಮ್ಮೇಳದಲ್ಲಿರುವ ಕಲಾವಿದರು.


    ಕಲಾವಿದರು, ವೇಷಭೂಷಣವನ್ನು ತಂಡದವರೇ ಒದಗಿಸುತ್ತಾರೆ. ಸಂಘಟಕರು ಬಯಸಿದಲ್ಲಿ ಅತಿಥಿ ಕಲಾವಿದರನ್ನೂ ಕರೆಸುತ್ತಾರೆ. ಅಲ್ಲದೇ ಪ್ರದರ್ಶನ ನಡೆಯುವ ಊರಿನ ಸ್ಥಳೀಯ ಕಲಾವಿದರಿಗೂ ವೇದಿಕೆ ಒದಗಿಸಿತ್ತ ಬಂದಿರುವುದು ಯಕ್ಷಾಭಿವಂದನದ ವಿಶೇಷ. ಕೊಳಗದ್ದೆ, ಬಕ್ಕಳ, ಹೇರೂರು, ನೀಲ್ಗೋಡು, ತುಂಬೊಳ್ಳಿ, ಶಿರಾಲಿ, ಜಿನ್ನೋಡ, ಅರಳಿಮಕ್ಕಿ, ಸಾಗತ ಸೇರಿದಂತೆ ವಿವಿಧೆಡೆ 10 ಕ್ಕೂ ಹೆಚ್ಚು ಯಶಸ್ವಿ ಪ್ರದರ್ಶನಗಳನ್ನು ಈಗಾಗಲೇ ನೀಡಿ, ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.


    ಯುವ ಕಲಾವಿದರ ಹೊಸ ಪ್ರಯತ್ನವನ್ನು ಯಕ್ಷಾಭಿಮನಿಗಳು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಯಕ್ಷಾಭಿವಂದನ ತಂಡ ಇನ್ನಷ್ಟು ಯಶಸ್ಸು ಗಳಿಸಲಿ ಎಂಬುದು ಕಲಾಭಿಮಾನಿಗಳ ಹಾರೈಕೆ. ಯಕ್ಷಾಭಿವಂದನ ತಂಡದ ಯಕ್ಷಗಾನ ಪ್ರದರ್ಶನ ಆಯೋಜಿಸುವವರಿದ್ದಲ್ಲಿ ಚಂದ್ರಹಾಸ ಗೌಡ-6364615491, ಕಾರ್ತಿಕ ಚಿಟ್ಟಾಣಿ-9480398754, ನಾಗರಾಜ ಕುಂಕಿಪಾಲ-9483803727 ಅವರನ್ನು ಸಂಪರ್ಕಿಸಬಹುದಾಗಿದೆ.

    Share This
    300x250 AD
    300x250 AD
    300x250 AD
    Back to top