• first
  second
  third
  previous arrow
  next arrow
 • ಜನರ ಪ್ರಾಣ ಹಿಂಡುತ್ತಿರುವ ಇ-ಖಾತಾ ಸಮಸ್ಯೆ ಪರಿಹಾರ ಮಾಡಿ; ಹೋರಾಟ ಸಮಿತಿಯಿಂದ ಸಚಿವ ಹೆಬ್ಬಾರರಿಗೆ ಮನವಿ

  300x250 AD

  ಶಿರಸಿ: ನಿರ್ಮಲ ನಗರ ಯೋಜನೆ, ಕರ್ನಾಟಕ ಪೌರಾಡಳಿತ ಸುಧಾರಣಾ ಯೋಜನೆ ರೀತ್ಯಾ ರಾಜ್ಯದ 213 ಯು.ಎಲ್ .ಬಿ. ಗಳ ಆಧುನೀಕರಣ ಹಾಗೂ ಇ- ಆಡಳಿತ ಡಿಜಿಟಲೀಕರಣದ ಉದ್ದೇಶದೊಂದಿಗೆ ಜಾರಿಗೆ ತಂದಿರುವ ನೂತನ ವ್ಯವಸ್ಥೆ ಜನರಿಗೆ ಅನುಕೂಲವಾಗುವ ಬದಲು ಜನರ ಪ್ರಾಣ ಹಿಂಡುತ್ತಿದೆ. ಗ್ರಾಮ ಪಂಚಾಯ್ತಿ ಆಡಳಿತ ಸುಧಾರಣಾ ಯೋಜನೆಯೂ ಸಹ ಗ್ರಾಮಂತರದ ಆಸ್ತಿ ಮಾಲೀಕರಿಗೆ ಕಂಟಕಪ್ರಾಯವಾಗಿದೆ. ಈ ಯೋಜನೆಯ ಜಾರಿಯಿಂದ ಉದ್ಭವಿಸಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರತಿ ಪೌರಾಡಳಿತ ಹಾಗೂ ಗ್ರಾಮಾಡಳಿತ ಸಂಸ್ಥೆಗಳ ವಿವರ ಸಮೀಕ್ಷೆ ನಡೆಸಬೇಕು ಹಾಗೂ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಇಲ್ಲಿನ ಇ-ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿಯು ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಇ-ಖಾತಾ, ಇ-ಸ್ವತ್ತು ಸಮಸ್ಯೆ ಪರಾಮರ್ಶೆಯ ಸಂಪುಟ ಉಪಸಮಿತಿ ಸದಸ್ಯ ಶಿವರಾಮ ಹೆಬ್ಬಾರರಲ್ಲಿ ಮನವಿ ಮಾಡಿದರು.

  ಕೇಂದ್ರ ಸರಕಾರದ ಎನ್.ಇ.ಜಿ.ಪಿ (ನ್ಯಾಷನಲ್ ಇ-ಗವರ್ನೆನ್ಸ್ ಯೋಜನೆ) ಯೋಜನೆಯನ್ವಯ ರೂಪಿತ `ಆಸ್ತಿ’ ಎಂದು ಕರೆಯಲಾಗುವ (ಪಿ.ಟಿ.ಪಿ.ಎಸ್ ) ಈ ಯೋಜನೆಗೆ ಎಂ.ಡಿ.ಬಿ. ಹಾಗೂ ವಿಶ್ವ ಬ್ಯಾಂಕ್ ನಿಂದ 97.03 ಮಿಲಿಯನ್ ಡಾಲರ್‍ಗಳ ನೆರವು ಪಡೆದು ಜಾರಿಗೊಳಿಸಿದ ಈ ಯೋಜನೆಯು ತನ್ನ ಉದ್ದೇಶಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ.

  ಜಿ.ಪಿ.ಎಸ್ ಮೂಲಕ ಸರ್ವೆ ನಡೆಸಿ ನಗರ ಹಾಗೂ ಗ್ರಾಮಂತರ ವ್ಯಾಪ್ತಿಯ ಎಲ್ಲಾ ಕೃಷಿಯೇತರ ಆಸ್ತಿಗಳಿಗೆ ಪಿ.ಐ.ಡಿ ನೀಡಿ ಫಾರ್ಮ್-3 ಹಾಗೂ ನಮೂನೆ 9 ಹಾಗೂ 11 ಎ ಸೃಜಿಸುವಲ್ಲಿ ವಿಫಲವಾಗಿದೆ. ನಮ್ಮ ಉತ್ತರ ಕನ್ನಡ ಜಿಲ್ಲೆಯ ಒಂದು ಲಕ್ಷದ ಎರಡು ಸಾವಿರದ ನಾಲ್ಕು ನೂರಾ ಎಪ್ಪತ್ಮೂರು ಆಸ್ತಿಗಳ ಪೈಕಿ ಕೇವಲ ಹತ್ತು ಸಾವಿರದ ಐದುನೂರಾ ಇಪ್ಪತ್ತೊಂಭತ್ತು ಆಸ್ತಿಗಳಿಗೆ ಫಾರ್ಮ್-3 ನೀಡಿರುವುದು ಇದಕ್ಕೊಂದು ನಿದರ್ಶವಾಗಿದೆ. ಇದೇ ಹಣೆಬರಹ ಗ್ರಾಮಾಂತರದ್ದೂ ಆಗಿದೆ. ಈ ಯೋಜನೆಯ ಜಾರಿಯಿಂದ ಉದ್ಭವಿಸಿರುವ ಸಮಸ್ಯೆಗಳನ್ನು ನಿವಾರಿಸಲು ಪ್ರತಿ ಪೌರಾಡಳಿತ ಹಾಗೂ ಗ್ರಾಮಾಡಳಿತ ಸಂಸ್ಥೆಗಳ ವಿವರ ಸಮೀಕ್ಷೆ ನಡೆಸಬೇಕು ಹಾಗೂ ಪರಿಹಾರ ಕ್ರಮ ಕೈಗೊಳ್ಳಬೇಕು.

  300x250 AD

  ಈ ನಿಟ್ಟಿನಲ್ಲಿ ಸಮಸ್ಯೆ ಪರಿಹಾರಕ್ಕಾಗಿ ರಚಿತವಾಗಿರುವ ಸಚಿವ ಸಂಪುಟ ಉಪ ಸಮಿತಿಯು ಸರಕಾರಕ್ಕೆ ನೀಡುವ ವರದಿಯ ಮೂಲಕ ನಮ್ಮ ಉತ್ತರ ಕನ್ನಡ ಜಿಲ್ಲೆಯ ಆಸ್ತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನ ಮಾರ್ಪಾಡುಗಳನ್ನು ಮಾಡಿ ಆದೇಶ ಜಾರಿಗೊಳಿಸುವಂತೆ ಆಗ್ರಹಿಸಬೇಕಾಗಿ ವಿನಂತಿಸುತ್ತೇವೆ.

  1. ಸನ್ 1976 ರ ಪೂರ್ವದಲ್ಲಿ ಭೂ ಪರಿವರ್ತನೆಯಾದ ಆಸ್ತಿಗಳಿಗೆ ಯಾವ ರೀತಿಯಲ್ಲಿ ನಗರ ಮತ್ತು ಗ್ರಾಮಂತರ ಯೋಜನಾ ಕಾಯ್ದೆಯ ಜಾರಿಯಿಂದ ವಿನಾಯತಿ ನೀಡಲಾಗಿದೆಯೋ ಆದೇ ರೀತಿ ಇಂದಿನ ದಿನಾಂಕದವರೆಗಿನ ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಆಸ್ತಿಗಳಿಗೆ ಲೇಜೌಟ್ ಅನುಮತಿ ಸಡಿಲಿಕೆ ಮಾಡಿ ಸದರಿ ಆಸ್ತಿಗಳು ಅಧಿಕೃತ/ಕ್ರಮಬದ್ಧವಾದ ಆಸ್ತಿಗಳು ಎಂದು ಪರಿಗಣಿಸಬೇಕು.
  2. ಯು ಪಿ ಓ ಆರ್ (ಅರ್ಬನ್ ಪ್ರಾಪರ್ಟಿ ಓನರ್‍ಶಿಪ್ ರೆಕಾರ್ಡ್) ನಂತಹ ಸಮರ್ಪಕವಾದ ದಾಖಲೆಗಳನ್ನು ನೀಡುವ ಪರ್ಯಾಯ ವ್ಯವಸ್ಥೆ ನಮ್ಮ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗುವವರೆಗೆ ಭೂ ಪರಿವರ್ತಿತ ಆಸ್ತಿಯ ದಾಖಲೆಗಳನ್ನು ಕರ್ನಾಟಕ ಭೂ ಕಂದಾಯ ಕಾಯ್ದೆ ವ್ಯಾಪ್ತಿಯಲ್ಲೇ ಅಂದರೆ ಪಹಣಿ ಪತ್ರಿಕೆಗಳಲ್ಲಿ ದಾಖಲಿಸುವಂತಾಗಬೇಕು.
  3. ಭೂ ಕಂದಾಯ ಕಾಯ್ದೆ ಕಲಂ 95 ರಡಿಯಲ್ಲಿ ಭೂ ಪರಿವರ್ತನೆ ವಿಷಯದಲ್ಲಿ ದಕ್ಷಿಣ ಕನ್ನಡ, ಕೊಡಗು, ಕೊಳ್ಳೇಗಾಲದಂತಹ ಪ್ರದೇಶಗಳಿಗೆ ವಿಶೇಷ ರಿಯಾಯತಿ ನೀಡಿದಂತೆ ಮತ್ತು ಕರ್ನಾಟಕ ತುಂಡು ಭೂಮಿ ನಿಷೇಧ ಮತ್ತು ಹಿಡುವಳಿ ಒಟ್ಟುಗೂಡಿಸುವ ಕಾಯ್ದೆಯಲ್ಲಿ ಮತ್ತು ನೀರಾವರಿ ಕಾಯ್ದೆ ಕುರಿತು ದಕ್ಷಿಣ ಕನ್ನಡಕ್ಕೆ ನೀಡಿರುವ ವಿನಾಯ್ತಿಯಂತೆ ಲೇಜೌಟ್ ನಿವೇಶನಗಳನ್ನು ರಚಿಸಲು ಅಗತ್ಯವಾದ ಬಯಲು ಪ್ರದೇಶಗಳ ಕೊರತೆ ಇರುವ ಹಾಗೂ ಅತೀ ಹೆಚ್ಚಿನ ಅರಣ್ಯ ಪ್ರದೇಶ, ಗುಡ್ಡಗಾಡು ಪ್ರದೇಶ ಹಾಗೂ ಕರಾವಳಿ ಪ್ರದೇಶವನ್ನು ಹೊಂದಿದೆ. ಎನ್ನುವ ಕಾರಣಕ್ಕೆ ನಗರ ಮತ್ತು ಗ್ರಾಮಂತರ ಯೋಜನಾ ಕಾಯ್ದೆಯ ವ್ಯಾಪ್ತಿಯಿಂದ ನಮ್ಮ ಉತ್ತರ ಕನ್ನಡ ಜಿಲ್ಲೆಗೆ ವಿನಾಯತಿ ನೀಡಬೇಕು.
  4. ಕರ್ನಾಟಕ ಅರಣ್ಯ ಕೈಪಿಡಿಯಲ್ಲಿಯ “ಬೆಟ್ಟ ಸವಲತ್ತಿನ ನಿಯಮ” ಅಡಿಯಲ್ಲಿ ಅವಕಾಶ ನೀಡಿದಂತೆ ಭಾಗಾಯತಕ್ಕೆ ಲಾಗೂ ಇರುವ ಬೆಟ್ಟ ಜಮೀನುಗಳಲ್ಲಿ ಫಾರ್ಮ್ ಹೌಸ್‍ಗಳನ್ನು ಕಟ್ಟಿಕೊಳ್ಳಲು ಅವಕಾಶ ನೀಡಿ ಅವುಗಳಿಗೆ ನಮೂನೆ 9 ಮತ್ತು 11 ಎ ನೀಡಬೇಕು. ಅವುಗಳ ಸ್ವತಂತ್ರ ಪರಭಾರೆಗೆ ನಿರ್ಬಂಧ ಹೇರಬಹುದಾಗಿದೆ. ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಗಾಂವಠಾಣಾ ಪ್ರದೇಶ ಮತ್ತು ಭೂ ಪರಿವರ್ತಿತ ಕ್ಷೇತ್ರಗಳಲ್ಲಿ ಕಟ್ಟಿಕೊಂಡ ಮನೆಗಳಿಗೆ ಹಾಗೂ ಸೃಜಿಸಿಕೊಂಡ ನಿವೇಶಗಳಿಗೆ ಮಾತ್ರ ನಮೂನೆ 9 ಮತ್ತು 11 ಎ ನೀಡಲಾಗುತ್ತಿದೆ ಹಾಗೂ ಕೃಷಿ ಕ್ಷೇತ್ರದಲ್ಲಿ ಕಟ್ಟಿಕೊಂಡ ಮನೆಗಳಿಗೆ ಈ ಹಿಂದೆ ನೀಡುತ್ತಿದ್ದ ನಮೂನೆ 11 ಬಿ ದ ಅವಕಾಶವನ್ನು ಮೊಟಕುಗೊಳಿಸಲಾಗಿದೆ. ಕರ್ನಾಟಕ ಭೂ ಕಂದಾಯ ಕಾಯ್ದೆ ಕಲಂ 95 ಉಪಕಲಂ-1 ರ ಪ್ರಕಾರ ಕೃಷಿಕರು ತಮ್ಮ ಜಮೀನನ್ನು ಉತ್ತಮವಾಗಿ ಸಾಗುವಳಿ ಮಾಡುವ ಉದ್ದೇಶಕ್ಕಾಗಿ ತಮ್ಮ ಕೃಷಿ ಜಮೀನಿನಲ್ಲಿ ವಾಸದ ಮನೆ, ಕೊಟ್ಟಿಗೆ, ಕೂಲಿಕಾರರ ವಾಸ್ತವ್ಯದ ಮನೆ ಕಟ್ಟಿಕೊಳ್ಳಲು ಭೂ ಪರಿವರ್ತನೆ ಮಾಡಿಕೊಳ್ಳ;ಲು ಅಗತ್ಯವಿರುವುದಿಲ್ಲ. ತಮ್ಮ ಕೃಷಿ ಕ್ಷೇತ್ರ ಶೇಕಡಾ 10 ಕ್ಕೆ ಮೀರದಂತೆ ಗರಿಷ್ಟಮಿತಿಯಲ್ಲಿ ಕಟ್ಟಿಕೊಂಡ ಮನೆಗಳಿಗೆ 9 ಮತ್ತು 11 ಎ ನೀಡುವಂತಾಗಬೇಕು ಇಂತಹ ಮನೆಗಳನ್ನು ಸಾಗುವಳಿ ಜಮೀನು ಹೊರತುಪಡಿಸಿ ಅವುಗಳ ಸ್ವತಂತ್ರ ಪರಭಾರೆಗೆ ನಿರ್ಬಂಧ ಹೇರಬಹುದಾಗಿದೆ’
  5. ಪೌರಾಡಳಿತ ನಿರ್ದೇಶನಾಲಯ ಪೌರ ಸುಧಾರಣಾ ಕೋಶದಿಂದ 20-4-2016 ರಂದು ಹೊರಡಿಸಲಾಗಿದ್ದ ಆದೇಶ ಜಾರಿಗೊಳಿಸುವ ಕ್ರಮ ಆಗಬೇಕು. ಈ ಆದೇಶದಲ್ಲಿ ಪೌರಾಡಳಿತ ಸಂಸ್ಥೆಗಳ ಆಸ್ತಿ ರೆಕಾರ್ಡ್ (ಎಮ್ ಎ ಆರ್ -19) ನಲ್ಲಿ ದಾಖಲಾಗಿರುವ ಎಲ್ಲಾ ಆಸ್ತಿಗಳನ್ನು ಅಧಿಕೃತ ಆಸ್ತಿ ಎಂದು ಪರಿಗಣಿಸುವಂತೆ ತಿಳಿಸಲಾಗಿದೆ. ಇ- ಆಸ್ತಿ ತಂತ್ರಾಂಶದಲ್ಲಿ ಯಾವುದೇ ದಾಖಲೆಗಳನ್ನು ಕೇಳದೆ ಎಮ್ ಎ ಆರ್ ಆಸ್ತಿಗಳನ್ನು ಅಪ್ ಲೋಡ್ ಮಾಡುವಂತೆ ಹೇಳಲಾಗಿದೆ. ಆಸ್ತಿ ಅಧಿಕೃತವಿರಲಿ, ಅನಧಿಕೃತವಿರಲಿ ತಂತ್ರಾಂಶಕ್ಕೆ ಸೇರಿಸಿ ಆಸ್ತಿ ತೆರಿಗೆ ವಹಿ (ಫಾರ್ಮ್-3)ನ್ನು ಪೌರಾಯುಕ್ತರು/ಮುಖ್ಯಾಧಿಕಾರಿಗಳು ಡಿಜಿಟಲ್ ಸಹಿಯೊಂದಿಗೆ ನೀಡಬೇಕೆಂದು ಸೂಚಿಸಲಾಗಿದೆ. ಇದೇ ರೀತಿಯ ಆದೇಶ ಗ್ರಾಮಾಂತರ ಭಾಗದ ನಮೂನೆ 9 ಹಾಗೂ 11 ಎ ಫಾರಂಗಳಿಗೂ ಅನ್ವಯವಾಗುತ್ತಿದೆಯಾದರೂ ಈ ಆದೇಶವನ್ನು ಪಾಲಿಸದೇ ಜನರಿಗೆ ತೊಂದರೆ ನೀಡಲಾಗುತ್ತಿದೆ. ಈ ಆದೇಶದ ಪಾಲನೆಯಾಗಬೇಕು.
  6. ಸನ್ 2015 ರಿಂದ 2021 ರ ಆರು ವರ್ಷಗಳ ಮಧ್ಯಂತರ ಅವಧಿಯಲ್ಲಿ ಬಹಳಷ್ಟು ಯು.ಎಲ್.ಬಿ. ಗಳಲ್ಲಿ ಫಾರ್ಮ್-3ನ್ನು ಕೊಡದೇ ಇರುವುದರಿಂದ ಆಸ್ತಿಯ ಮಾಲೀಕರಿಗೆ ಹಾನಿಯಾಗಿದೆ. ನಿವೇಶನಗಳಲ್ಲಿ ಕಟ್ಟಡ ನಿರ್ಮಾಣಕ್ಕೆ, ವಿಕೋಪದಿಂದ ಕುಸಿದುಬಿದ್ದ ಮನೆಗಳ ಪುರ್ ನಿರ್ಮಾಣಕ್ಕೆ, ವಿಸ್ತರಣೆ, ದುರಸ್ತಿಗೆ, ವಿಭಜನೆಗೆ, ವಾರಸಾಕ್ಕೆ ಅವಕಾಶವಿಲ್ಲದೇ, ಹೋಗಿ ನಾಗರೀಕರು ಅನಿವಾರ್ಯವಾಗಿ ಸ್ಥಳೀಯ ಆಡಳಿತ ಸಂಸ್ಥೆಗಳ ಪರವಾನಿಗೆ ಇಲ್ಲದೇ ಪುನರ್ ನಿರ್ಮಾಣಕ್ಕೆ, ವಿಸ್ತರಣೆ , ದುರಸ್ತಿಗೆ, ವಿಭಜನೆಗೆ ಬ್ಯಾಂಕ್ ಸಾಲ ಸಿಗದ ಕಾರಣಕ್ಕೆ ಕೈಗಡ ಸಾಲ ಪಡೆದು ಸೂರು ಮಾಡಿಕೊಂಡಿದ್ದಾರೆ. ಇಂತಹ ಎಲ್ಲಾ ಆಸ್ತಿಗಳನ್ನು ಅವುಗಳ ಹಳೆಯ ನಂಬರ್ ಆಧರಿಸಿ ಅಧಿಕೃತಪಡಿಸಿ ಅವರನ್ನು ಸಾಲದ ಶೂಲದಿಂದ ಪಾರು ಮಾಡಬೇಕು’
  7. ಕೃಷಿಯೇತರ ಭೂಮಿಯ ದಾಖಲೆಗಳನ್ನು ಆರ್.ಟಿ.ಸಿ.ಯಿಂದ ತೆಗೆದು ಸ್ಥಳೀಯ ಆಡಳಿತ ಸಂಸ್ಥೆಗಳ ಸುಪರ್ದಿಗೆ ವಹಿಸುವಂತೆ ಆದೇಶಿಸಲಾಗಿದೆ. ಆದರೆ ಕಂದಾಯ ಇಲಾಖೆಯಿಂದ ದಾಖಲೆಗಳನ್ನು ವರ್ಗಾಯಿಸುವ ಕಾರ್ಯ ಆಗಿಲ್ಲ. ಈ ಕಾರ್ಯ ಶೀಫ್ರವಾಗಿ ಆಗಬೇಕು ಹಾಗೂ ಸ್ಥಳೀಯ ಆಡಳಿತ ಸಂಸ್ಥೆಗಳು ನೀಡುವ ಆಸ್ತಿ ವಹಿ ಅಂದರೆ ಫಾರ್ಮ್-3 ಹಾಗೂ ನಮೂನೆ 9 ಮತ್ತು11 ಎ ಇವುಗಳನ್ನು ನೀಡುವಾಗ ಉಲ್ಲೇಖಿಸುವ ಈ ದಾಖಲೆ ಆಸ್ತಿಯ ಮಾಲೀಕತ್ವವನ್ನು ಸಾಧಿಸುವ ದಾಖಲೆಯಲ್ಲ ಎಂಬ ಟಿಪ್ಪಣಿಯನ್ನು ತೆಗೆದು ಹಾಕಬೇಕು.
  8. ಗ್ರಾಮಾಡಳಿತ ಹಾಗೂ ನಗರಾಡಳಿತ ಸಂಸ್ಥೆಗಳ ಬಹುತೇಕ ಕಡೆ ತಂತ್ರಜ್ಞ ಸಿಬ್ಬಂದಿಗಳ ಕೊರತೆ, ಪರಿಣಿತಿಯ ಅಭಾವವಿದೆ. ಆಸ್ತಿ ದಾಖಲೆಗಳ ನಿರ್ವಹಣೆಯ ಸರಿಯಾದ ವ್ಯವಸ್ಥೆ ಇಲ್ಲದಾಗಿದೆ. ಹೊಸ ಆಸ್ತಿಯ ಸೃಜನೆ, ಇರುವ ಆಸ್ತಿಗಳ ವಾರಸಾ, ವಾಂಟಣಿ. ಮಾರ್ಪಾಡುಗಳು ಆಗುತ್ತಲೇ ಇಲ್ಲವಾಗಿವೆ. ಈ ಸಮಸ್ಯೆ ನಿವಾರಣೆಗೆ ಶಿವಮೊಗ್ಗ ಸಹಿತ ಇತರೆ ಸ್ಥಳಗಳಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಂತಹ ಯು ಪಿ ಓ ಆರ್ (ಅರ್ಬನ್ ಪ್ರಾಪರ್ಟಿ ಓನರ್ ಶಿಪ್ ರೆಕಾರ್ಡ್) ನಂತಹ ಪ್ರತ್ಯೇಕ ಇಲಾಖೆ ಸ್ಥಾಪನೆಯಾಗಬೇಕು.
  9. ಪ್ರಸ್ತುತ ಕಂದಾಯ ಇಲಾಖೆಯಲ್ಲಿ (ಸರ್ವೆ ಇಲಾಖೆ ಸಹಿತ) ಮೂಲ ಮೋಜಣೆ ಹಾಗೂ ಹಕ್ಕಿನ ಕುರಿತ ಕೃಷಿಯೇತರ ಜಮೀನುಗಳ ಭೂ ದಾಖಲೆಗಳು ಸಹಿತ ಉತ್ತಮ ನಿರ್ವಹಣೆಯಲ್ಲಿದೆ ಅಲ್ಲದೇ ಇಲಾಖೆಯಲ್ಲಿ ತರಬೇತಿ ಹೊಂದಿದ ಸಕ್ಷಮ ಸಿಬ್ಬಂದಿವರ್ಗ ಇರುತ್ತದೆ. ದಾಖಲೆಗಳನ್ನು ಕಾನೂನುಬದ್ಧವಾಗಿ ಸೃಷ್ಟಿಸುವ ಹಾಗೂ ನಿರ್ವಹಿಸುವ ನಿಗದಿತ ಸಿಬ್ಬಂದಿಗಳಿಗೆ ಕರ್ತವ್ಯ ನಿರತರವಾದ ವೇಳೆ ಯಾವುದೇ ಕಾನೂನು ಬಾಹಿರವಾಗಿ ತಿದ್ದುಪಡಿ ಬದಲಾವಣೆ ಮತ್ತು ವ್ಯತ್ಯಾಸ ಹಾಗೂ ತಪ್ಪುಗಳನ್ನು ಮಾಡದಂತೆ ಉತ್ತರದಾಯಿತ್ವ ನೀಡಿ ಕರ್ತವ್ಯ ಹಂಚಿಕೆ ಮಾಡಲಾಗಿದೆ. ಸ್ವಾತಂತ್ರಪೂರ್ವದಿಂದಲೂ ಜಾರಿಯಲ್ಲಿರುವ ಈ ವ್ಯವಸ್ಥೆಯು ಒಂದು ಕಾಲ ಪರೀಕ್ಷಿತ ಅಭಿವೃದ್ಧಿ ಹೊಂದಿದ ನಂಬಲರ್ಹವಾದ ಕಾರ್ಯವಿಧಾನವಾಗಿರುತ್ತದೆ. ಆದರೆ ಇಂತಹ ವ್ಯವಸ್ಥೆ ಇಲ್ಲದ ಸ್ಥಳೀಯ ಸಂಸ್ಥೆಗಳಿಗೆ ಮೂಲ ದಾಖಲೆಗಳನ್ನು ಹಾಗೂ ದಾಖಲೆಗಳನ್ನು ಸೃಷ್ಟಿಸುವ ಕರ್ತವ್ಯವನ್ನು ಪರಭಾರೆ ಮಾಡಿದಲ್ಲಿ ಇಂತಹ ಅಮೂಲ್ಯ ದಾಖಲೆಗಳ ಸಿಂಧುತ್ವ ಕರಗಿಹೋಗುವ ಅಪಾಯ ಇರುತ್ತದೆ. ಕಾರಣ ಸ್ಥಳೀಯ ಸಂಸ್ಥೆಗಳ ಚುನಾಯಿತ ಸದಸ್ಯರಿಂದ ಪಕ್ಷಪಾತ. ಹಸ್ತಕ್ಷೇಪಗಳಿಗೆ ಅವಕಾಶವಿಲ್ಲದಂತೆ ದಾಖಲೆಗಳನ್ನು ಸ್ವತಂತ್ರವಾಗಿ ನಿರ್ವಹಿಸಲು ಉತ್ತರದಾಯಿತ್ವ ಹೊಂದಿದ ಮೋಜಣಿ ಸಿಬ್ಬಂದಿಗಳು ಹಾಗೂ ಖಾಯಂ ಉದ್ಯೋಗಿಗಳನ್ನು ಒದಗಿಸಿ ಕೃಷಿಯೇತರ ಭೂಮಿಕೋಶವನ್ನು ನಿರ್ಮಿಸಿ ಭೂ ದಾಖಲೆಗಳನ್ನು ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಬೇಕು ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 9 ಮತ್ತು 11 ಎ ಇವುಗಳಿಗೆ ಭೂ ಕಂದಾಯ ಕಾಯ್ದೆ ಕಲಂ 133 ರ ಅಡಿಯಲ್ಲಿ ಪ್ರಾವಧಾನಿಸಿದಂತೆ ` ಸಂಭಾವ್ಯ ಮೌಲ್ಯ’ ನೀಡಿ ಕಾನೂನು ತಿದ್ದುಪಡಿ ಮಾಡಿಸಬೇಕು.
  10. ಶುಲ್ಕ ಪಾವತಿಸಿದ ತಕ್ಷಣ ಪಹಣಿ ಪತ್ರಿಕೆಗಳು ದೊರೆಯುವ ರೀತಿಯಲ್ಲಿ ಆಸ್ತಿ ವಹಿ ಅಂದರೆ ಫಾರ್ಮ್ -3 ಹಾಗೂ ನಮೂನೆ 9,11 ಎಗಳು ದೊರೆಯುವಂತಾಗಬೇಕು.

  ಶಿರಸಿ ಏ.ಆ.ಅ.ಅ ಬ್ಯಾಕ್ ಪ್ರಧಾನ ಕಚೇರಿಯಲ್ಲಿ ಶಿವರಾಮ ಹೆಬ್ಬಾರ ಇವರಿಗೆ ಇ-ಖಾತಾ ಸಮಸ್ಯೆ ಪರಿಹಾರ ಹೋರಾಟ ಸಮಿತಿ ಅಧ್ಯಕ್ಷ ಗೋಪಾಲ ಕೃಷ್ಣ ಆನವಟ್ಟ, ಜಿ. ಎಸ್. ಹೆಗಡೆ, ರಾಜು ಪೈ, ನಾಗರಾಜ ಭಟ್ಟ ವಕೀಲರು, ಪ್ರಕಾಶ ಸಾಲೇರ, ದೇವರಾಜ, ಭಾಸ್ಕರ ಮಡಿವಾಳ, ರಾಜಾರಾಮ ಹೆಗಡೆ, ಅನಿಲ ನಾಯಕ, ಲಿಂಗರಾಜ ಉಪಸ್ಥಿತರಿದ್ದರು.

  Share This
  300x250 AD
  300x250 AD
  300x250 AD
  Back to top