ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಆರ್ಭಟ ತಗ್ಗುತ್ತಿದ್ದು, ಈ ನಿಟ್ಟಿನಲ್ಲಿ ಆರ್ಥಿಕ ಸೇರಿದಂತೆ ಎಲ್ಲಾ ರೀತಿಯ ಚಟುವಟಿಕೆಗಳನ್ನು ಮತ್ತಷ್ಟು ಚುರುಕುಗೊಳಿಸಲು ಕೊರೋನಾ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದೆ.
ಈ ಹಿನ್ನೆಲೆಯಲ್ಲಿ ಪ್ರಸ್ತುತ ಇರುವ ನಿಬಂಧನೆಗಳನ್ನು ಮತ್ತಷ್ಟು ಸಡಿಲಿಸಲು ಸರ್ಕಾರ ನಿರ್ಧರಿಸಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಆಗಮನ ದ್ವಾರದಲ್ಲಿ ಕಫ, ಕೆಮ್ಮು, ನೆಗಡಿ, ಉಸಿರಾಟದ ತೊಂದರೆ ಇರುವ ವ್ಯಕ್ತಿಗಳ ಆರೋಗ್ಯ ತಪಾಸಣೆ ನಡೆಸುವುದನ್ನು ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ಗುರುತು ಮಾಡಿರುವ ಕೋವಿಡ್- 19 ಪಟ್ಟಿಯಲ್ಲಿರುವ ದೇಶಗಳನ್ನು ಹೊರತು ಪಡಿಸಿದಂತೆ, ಉಳಿದವರಿಗೆ ಆರ್ಟಿಪಿಸಿಆರ್ ವರದಿಯಿಂದ ವಿನಾಯಿತಿ ನೀಡಲಾಗಿದೆ.
ಈಜುಕೊಳಗಳ ಪುನರಾರಂಭಕ್ಕೆ ಸಹ ರಾಜ್ಯ ಸರ್ಕಾರ ಸಮ್ಮತಿ ವ್ಯಕ್ತಪಡಿಸಿದೆ. ಸ್ವಚ್ಛತೆ ಕಾಪಾಡಿಕೊಳ್ಳುವುದು, ಸೋಂಕು ನಿಯಂತ್ರಕಗಳ ಬಳಕೆ, ಈಜುಕೊಳಗಳ ಸಾಮಥ್ರ್ಯಕ್ಕಿಂತ 50% ಜನರಿಗೆ ಮಾತ್ರವೇ ಪ್ರವೇಶಾನುಮತಿ, ಕೊರೋನಾ ಸೋಂಕಿನ ಲಕ್ಷಣಗಳಿರದೇ ಇರುವುದನ್ನು ಖಾತ್ರಿ ಮಾಡಿಕೊಳ್ಳುವಂತೆಯೂ ಸರ್ಕಾರ ತಿಳಿಸಿದೆ.