ಶಿರಸಿ: ಕರ್ನಾಟಕ ರಾಜ್ಯದ ಅತೀ ಪುರಾತನ ಸಹಕಾರಿ ಸಂಘಗಳಲ್ಲಿ ಒಂದಾಗಿರುವ ಇಲ್ಲಿನ ದಿ ತೋಟಗಾರ್ಸ್ ರೂರಲ್ ಕೋ-ಆಪರೇಟಿವ್ ಅಗ್ರಿಕಲ್ಚರಲ್ ಕ್ರೆಡಿಟ್ ಸೊಸೈಟಿ (ಟಿಆರ್ಸಿ) 2020-21 ನೇ ಸಾಲಿನಲ್ಲಿ ರೂ.61.64 ಲಕ್ಷ ಲಾಭ ಗಳಿಸುವುದರೊಂದಿಗೆ ಶೇರು ಸಂಗ್ರಹಣೆ, ನಿಧಿಗಳ ಶೇಖರಣೆ ಎಲ್ಲ ವಿಭಾಗಗಳಲ್ಲಿ ಪ್ರಗತಿ ಸಾಧಿಸಿದೆ.
ಟಿಆರ್ಸಿಯು ಸತತವಾಗಿ ’ಅ’ ವರ್ಗದ ಆಡಿಟ್ ವರ್ಗೀಕರಣದಲ್ಲಿ ಮುಂದುವರೆದಿರುವುದು ಮತ್ತು ಸಂಘದ ನಿಕ್ಕೀ ಅನುತ್ಪಾದಕ ಆಸ್ತಿಯ ಪ್ರಮಾಣವು ಶೇ.0.00 ಆಗಿರುವುದು ಸಂಘದ ಸಮರ್ಥ ಕಾರ್ಯವೈಖರಿಯನ್ನು ತೋರಿಸುತ್ತದೆ. ಕಳೆದ ನಾಲ್ಕು ವರ್ಷಗಳಿಂದ ಸಾಲ ವಸೂಲಾತಿಯಲ್ಲೂ ಶೇ.100 ಕ್ಕೆ ನೂರರಷ್ಟು ಪ್ರಗತಿ ಸಾಧಿಸಿದೆ. ಸಾಲ ವಸೂಲಿಗಾಗಿ ಸಂಸ್ಥೆಯ ಇತಿಹಾಸದಲ್ಲಿಯೇ ಕಠಿಣ ಕ್ರಮ ಕೈಗೊಂಡ ಉದಾಹರಣೆ ಇಲ್ಲದಿರುವುದು ವಿಶೇಷವಾಗಿದೆ. ಸಾಲಗಾರ ಸದಸ್ಯರಿಗೆ ಕೇವಲ ಪ್ರೀತಿ ವಿಶ್ವಾಸ ಮತ್ತು ವ್ಯಾವಹಾರಿಕ ತಿಳುವಳಿಕೆ ನೀಡುವುದರಿಂದಲೇ ವಸೂಲಾತಿ ಕ್ರಮ ಕೈಗೊಳ್ಳುವುದು ಟಿಆರ್ಸಿಯ ವೈಶಿಷ್ಟ್ಯವಾಗಿದೆ.
ಪ್ರಸಕ್ತ ವರ್ಷ 68.67 ಕೋಟಿ ರೂಪಾಯಿಗಳಿಗೂ ಮೀರಿ ವಿವಿಧ ರೀತಿಯ ಸಾಲಗಳನ್ನು ಸದಸ್ಯರಿಗೆ ನೀಡಿದೆ. ಈ ಪೈಕಿ 33.62 ಕೋಟಿ ರೂ. ಬೆಳೆಸಾಲ ನೀಡಿದ್ದು ರಾಜ್ಯದಲ್ಲಿಯೇ ಅತಿ ಹೆಚ್ಚು ಬೆಳೆಸಾಲ ನೀಡಿದ ಸಂಸ್ಥೆಗಳ ಸಾಲಿನಲ್ಲಿ ಟಿಆರ್ಸಿ ಮುಂಚೂಣಿಯಲ್ಲಿದೆ. ಹಾಗೂ ವರ್ಷಾಂತ್ಯಕ್ಕೆ 101.19 ಕೋಟಿ ದುಡಿಯುವ ಬಂಡವಾಳವನ್ನು ಹೊಂದಿದೆ.
ಇಂದಿಗೆ 108 ವರ್ಷಗಳ ಹಿಂದೆ ಕೇವಲ 16 ಸದಸ್ಯರ 80 ರೂ. ಶೇರು ಬಂಡವಾಳದಿಂದ ಪ್ರಾರಂಭಗೊಂಡ ಸಂಘವು ಇಂದು 3371 ಶೇರು ಸದಸ್ಯರು ಹಾಗೂ 1500 ಕ್ಕೂ ಹೆಚ್ಚು ನಾಮಮಾತ್ರ ಸದಸ್ಯರನ್ನು ಹೊಂದಿದ್ದು ರೂ. 7 ಕೋಟಿಗೂ ಮೀರಿ ಶೇರು ಸಂಗ್ರಹಣೆ ಹೊಂದಿರುತ್ತದೆ.
ಸದಸ್ಯರಿಗೆ ಕೃಷಿ ಪತ್ತನ್ನು ಒದಗಿಸುವುದರ ಜೊತೆಗೆ ಕೃಷಿಕ ಸದಸ್ಯರ ಆರ್ಥಿಕ ಪ್ರಗತಿಗೆ ಪೂರಕವಾದ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕೃಷಿ ಮಾಹಿತಿ ಕಾರ್ಯಾಗಾರಗಳು, ಕೃಷಿಕರಿಗೆ ವೈಜ್ಞಾನಿಕ ಮಾರ್ಗದರ್ಶನ, ಕೃಷಿಕೂಟಗಳ ರಚನೆಯಂತಹ ಕಾರ್ಯಕ್ರಮಗಳು ಇದಕ್ಕೆ ಸಾಕ್ಷಿಯಾಗಿದೆ. ಸದಸ್ಯರ ಅನುಕೂಲತೆಗಾಗಿ ಆರ್ಟಿಜಿಎಸ್/ನೆಫ್ಟ್ ನಂತಹ ಸೇವೆ, ಕಂದಾಯ ಸಲಹೆಸೂಚನೆ ವ್ಯವಸ್ಥೆ, ಭದ್ರತಾಕೋಶದ ವ್ಯವಸ್ಥೆ, ಸದಸ್ಯರ ಕೃಷಿಕ್ಷೇತ್ರಗಳಿಗೆ ವಿಮೆ, ಸಂಜೀವಿನಿ ನಿಧಿಯಂತಹ ವಿಶಿಷ್ಟ ಯೋಜನೆಗಳನ್ನು ಸಂಘವು ಜಾರಿಗೆ ತಂದಿದೆ.
ಟಿಆರ್ಸಿಯು ತನ್ನ ಬೆಳವಣಿಗೆಯೊಂದಿಗೆ ಸಾಮಾಜಿಕ ಕಳಕಳಿಯನ್ನೂ ಹೊಂದಿದ್ದು ಕಾಲಕಾಲಕ್ಕೆ ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಕ್ಷೇತ್ರಗಳಿಗೆ ಧನಸಹಾಯವನ್ನೂ ಮಾಡುತ್ತಲಿದೆ. ಕೊರೋನಾ ಸ್ವಯಂಸೇವಕರಿಗೆ ಸಕಷ್ಟು ಸಹಾಯ ಸಹಕಾರ ನೀಡಿದೆ. ಟಿಎಸ್ಎಸ್ ಆಸ್ಪತ್ರೆಗೆ 15.85 ಲಕ್ಷ ರೂಪಾಯಿ, ಮಾರ್ಕೆಟ್ ಯಾರ್ಡ ಹಿರಿಯನಾಗರಿಕರ ಜಿಮ್ಗಾಗಿ ರೂ 1.50 ಲಕ್ಷ ಸಹಾಯಧನ ನೀಡಿದೆ. ನೈಸರ್ಗಿಕ ವಿಪತ್ತು ಮತ್ತು ವಿಕೋಪದ ಸಂದರ್ಭದಲ್ಲೂ ಧನಸಹಾಯ ನೀಡಿದೆ. ಟಿಆರ್ಸಿ ನವೀಕ್ರೃತ ಕಟ್ಟಡದಲ್ಲಿ ಸುಸಜ್ಜಿತವಾದ ಸಭಾಭವನವನ್ನು ನಿರ್ಮಿಸಲಾಗಿದ್ದು ಸಾಮಾಜಿಕ ಮತ್ತು ಸಾಂಸ್ಕೃತಿಕ ಆಸಕ್ತರು ಇದರ ಸೌಲಭ್ಯವನ್ನು ಪಡೆಯಬಹುದಾಗಿದೆ.
ಅ.21ರಂದು ವಾರ್ಷಿಕ ಸಭೆ:
ಅಕ್ಟೋಬರ್ 21, 2021ರಂದು ಶಿರಸಿಯ ಟಿಎಸ್ಎಸ್ನ ಮಾರಾಟ ಅಂಗಳದಲ್ಲಿರುವ ದಿ. ಶ್ರೀಪಾದ ಹೆಗಡೆ, ಕಡವೆ ವೇದಿಕೆಯಲ್ಲಿ ಬೆಳಿಗ್ಗೆ 10 ಗಂಟೆಗೆ ಟಿಆರ್ಸಿಯ ವಾರ್ಷಿಕ ಸರ್ವ ಸಾಧಾರಣ ಸಭೆ ನಡೆಯಲಿದೆ.
ಕೋ-ವ್ಯಾಲೆಟ್ ತಂತ್ರಾಂಶ ಬಿಡುಗಡೆ:
ಸದಸ್ಯರ ಪಾರದರ್ಶಕ ವ್ಯವಹಾರಕ್ಕೆ ಅನುಕೂಲವಾಗುವಂತೆ ಸದಸ್ಯರ ಪಾಸ್ ಪುಸ್ತಕ ವೀಕ್ಷಣೆ, ವಿಕ್ರಿ ವಹಿವಾಟು ಮಾಹಿತಿ ಪಡೆಯುವಿಕೆ, ಉಳಿತಾಯ ಖಾತೆ ವಿವರ, ಸಾಲದ ವಾಯಿದೆ ದಿನಾಂಕ, ಠೇವಣಿ ವಾಯಿದೆ ದಿನಾಂಕ ಸದಸ್ಯರ ಖಾತೆಗೆ ಸಂಬಂಧಿಸಿದ ಇನ್ನಿತರ ಎಲ್ಲಾ ಮಾಹಿತಿಗಳನ್ನು ಸದಸ್ಯರಿರುವ ಸ್ಥಳದಿಂದಲೇ ಅವರ ಮೊಬೈಲ್ ಮೂಲಕ ಪಡೆಯುವಂತೆ ಕೋ-ವ್ಯಾಲೆಟ್ (ಕೋ-ಆಪರೇಟಿವ್ ವ್ಯಾಲೆಟ್) ತಂತ್ರಾಂಶ ಅಭಿವೃದ್ಧಿ ಪಡಿಸಲಾಗಿದ್ದು ಸಂಘದ ವಾರ್ಷಿಕ ಸಭೆಯ ಸಂದರ್ಭದಲ್ಲಿ ಇದನ್ನು ಅಧಿಕೃತವಾಗಿ ಬಿಡುಗಡೆಗೊಳಿಸಲಾಗುವುದು. ಇದು ರಾಜ್ಯದ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘಗಳಿಗೇ ಮಾದರಿ ವ್ಯವಸ್ಥೆಯಾಗಿದೆ.
ಸಹಕಾರ ಕ್ಷೇತ್ರ ಉತ್ತಮಗೊಳ್ಳಬೇಕಾದರೆ ಅಲ್ಲಿ ವ್ಯವಹರಿಸುವ ಸದಸ್ಯರು ಸಹಕಾರದಲ್ಲಿ ನಂಬಿಕೆ, ಪ್ರಾಮಾಣಿಕತೆ ಹಾಗೂ ಸೇವಾ ಮನೋಭಾವ ಹೊಂದಿರಬೇಕು. ನಮ್ಮ ಸಂಘದ ಸದಸ್ಯರಲ್ಲಿ ಈ ಗುಣಗಳು ರಕ್ತಗತವಾಗಿದೆ. ಆದ್ದರಿಂದಲೇ ಸಂಘವು ಈ ಮಟ್ಟಕ್ಕೆ ಅಭಿವೃದ್ಧಿ ಹೊಂದಿದೆ. – ರಾಮಕೃಷ್ಣ ಶ್ರೀಪಾದ ಹೆಗಡೆ, ಕಡವೆ, ಅಧ್ಯಕ್ಷರು, ಟಿಆರ್ಸಿ