ಬೆಂಗಳೂರು: ನ. 1 ರಿಂದ ತೊಡಗಿದಂತೆ ರಾಜ್ಯದಲ್ಲಿ 1- 5 ರ ವರೆಗಿನ ತರಗತಿಗಳನ್ನು ತೆರೆಯುವ ನಿಟ್ಟಿನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ರಾಜ್ಯ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಿದ್ದು, ಅ. 21 ರಿಂದಲೇ ಮಧ್ಯಾಹ್ನದ ಬಿಸಿಯೂಟ ವಿತರಣೆಗೂ ಮುಂದಾಗಿದೆ.
ಈ ಸಂಬಂಧ 2021 -22 ನೇ ಸಾಲಿನಲ್ಲಿ `ಪಿಎಂ- ಪೆÇೀಷಣ್ ಶಕ್ತಿ ನಿರ್ಮಾಣ’ ಮಧ್ಯಾಹ್ನದ ಉಪಹಾರ ಯೋಜನೆಯಡಿ, ಶಾಲೆಗಳ ಅಡುಗೆ ಕೇಂದ್ರಗಳಲ್ಲಿ ಬಿಸಿಯೂಟ ಸಿದ್ಧಪಡಿಸುವ ಹಾಗೂ ಅದನ್ನು ವಿದ್ಯಾರ್ಥಿಗಳಿಗೆ ವಿತರಣೆ ಮಾಡುವ ವೇಳೆ ಅನುಸರಿಸಬೇಕಾದ ಮಾರ್ಗಸೂಚಿಯನ್ನು ಇಲಾಖೆ ಹೊರಡಿಸಿದೆ.
ಈ ಮಾರ್ಗಸೂಚಿ ಆದೇಶವನ್ನು ಶಾಲಾ ಮುಖ್ಯಸ್ಥರು, ಅಡುಗೆ ಸಿಬ್ಬಂದಿ, ಎಸ್‍ಡಿಎಂಸಿ ಸದಸ್ಯರು, ತಾಯಂದಿರ ಸಮಿತಿ ಸೇರಿದಂತೆ ಬಿಸಿಯೂಟಕ್ಕೆ ಸಂಬಂಧಿಸಿದಂತೆ ಇರುವ ಎಲ್ಲರೂ ಕಡ್ಡಾಯವಾಗಿ ಅನುಸರಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಅಡುಗೆ ತಯಾರಿ ಸಂದರ್ಭದಲ್ಲಿ ಸ್ವಚ್ಛತೆ ಮತ್ತು ಕೊರೋನಾ ಸೋಂಕು ಹರಡದಂತೆ ವಹಿಸಬೇಕಾದ ಎಚ್ಚರಿಕೆಯ ಬಗೆಗೂ ಇಲಾಖೆ ಸ್ಪಷ್ಟವಾಗಿ ತಿಳಿಸಿದೆ.
ಇನ್ನು ಅಡುಗೆ ತಯಾರಿಸುವ ಸಿಬ್ಬಂದಿ ಕಡ್ಡಾಯವಾಗಿ ಎರಡು ಡೋಸ್ ಲಸಿಕೆ ಹಾಕಿಸಿಕೊಂಡಿರಬೇಕು. ಬಿಸಿಯೂಟದ ಆಹಾರ ಪದಾರ್ಥಗಳನ್ನು ಶಾಲೆಯಲ್ಲೇ ದಾಸ್ತಾನು ಮಾಡಬೇಕು. ಇಲಾಖೆ ಸೂಚಿಸಿದ ಆಹಾರ ಪಟ್ಟಿಯನ್ನು ಪಾಲಿಸಬೇಕು ಎಂಬುದಾಗಿಯೂ ಮಾರ್ಗಸೂಚಿ ಹೇಳಿದೆ. ಯಾವುದೇ ಮಕ್ಕಳಿಗೆ ಬಿಸಿಯೂಟ ಕೊರತೆಯಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಇಲಾಖೆ ತಿಳಿಸಿದೆ.