ಶಿರಸಿ: ಅರಣ್ಯ ಹಕ್ಕು ಕಾಯಿದೆಗೆ ಸಂಬಂಧಿಸಿ ಸುಪ್ರೀಂ ಕೋರ್ಟಿನಲ್ಲಿ ಎ.2ರಂದು ನಿಗದಿಗೊಳಿಸಲಾದ ಅಂತಿಮ ವಿಚಾರಣೆಗೆ ಮುನ್ನ ದೇಶದ ಅರಣ್ಯವಾಸಿಗಳ ಪರ 144 ಸಂಘಟನೆಗಳು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು, ಅರಣ್ಯ ಹಕ್ಕುಗಳನ್ನು ಗುರುತಿಸಲು ಮತ್ತು ರಕ್ಷಿಸಲು ತರಲಾದ ಅರಣ್ಯ ಹಕ್ಕು ಕಾಯಿದೆಯನ್ನು ಸುಪ್ರೀಂ ಕೋರ್ಟಿನಲ್ಲಿ ಅರಣ್ಯವಾಸಿಗಳ ಪರ ಸಮರ್ಥಿಸಿಕೊಳ್ಳಬೇಕೆಂದು ಆಗ್ರಹಿಸಿದೆ ಎಂಬುದಾಗಿ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕೇಂದ್ರ ಸರ್ಕಾರದ ಬುಡಕಟ್ಟು ವ್ಯವಹಾರಗಳ ಸಚಿವ ಜೂವಾಲ್ ಓರಾಮ ಅವರಿಗೆ ಮಾರ್ಚ 31ರಂದು ಪತ್ರ ಬರೆದು ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿ ಕುಟುಂಬಗಳಿಗೆ ಅರಣ್ಯ ಭೂಮಿ ಹಕ್ಕಿಗೆ ಸಂಬಂಧಿಸಿ ಕೇಂದ್ರ ಸರ್ಕಾರ ಅರಣ್ಯವಾಸಿಗಳ ಪರ ನಿಲುವು ಬೆಂಬಲಿಸಬೇಕೇಂದು ಪತ್ರದಲ್ಲಿ ಕೋರಲಾಗಿದೆ ಎಂದು ಅವರು ಹೇಳಿದರು.
ಸುಪ್ರೀಂಕೋರ್ಟ್ ಹಿಂದಿನ ಆದೇಶದಲ್ಲಿ ನಿಗದಿಗೊಳಿಸಿದ ನಿಯಮಾವಳಿಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರ ಪಾಲನೆ ಮಾಡದೇ ತಮ್ಮದೇ ಕಾರ್ಯವಿಧಾನ ಮತ್ತು ಪ್ರಕ್ರಿಯೆ ಅನುಸರಿಸುತ್ತಿದೆ. ಅಲ್ಲದೇ, ಸುಪ್ರೀಂ ಕೋರ್ಟ್ ಅರಣ್ಯ ಭೂಮಿ ಮಂಜೂರಿಗೆ ನಿಗದಿಗೊಳಿಸಿದ ನಿಯಮಾವಳಿಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪತ್ರದಲ್ಲಿ ಆರೋಪಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ದೇಶದಲ್ಲಿ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಬಂದಿರುವ ಅರ್ಜಿಗಳಲ್ಲಿ 18.59 ಲಕ್ಷಕ್ಕೂ ಮಿಕ್ಕಿ, ಅಂದರೆ ಶೇ.36.5 ರಷ್ಟು ಅರ್ಜಿದಾರರ ಕ್ಲೇಮುಗಳನ್ನು ತಿರಸ್ಕರಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.
ಉಪ-ಜಿಲ್ಲಾಸಮಿತಿ ಹಸ್ತಕ್ಷೇಪ:
ಅರಣ್ಯ ಹಕ್ಕು ಮಂಜೂರಿ ಪ್ರಕ್ರಿಯೆಯಲ್ಲಿ ಗ್ರಾಮ ಸಭೆಯ ನಿರ್ಣಯಕ್ಕೆ ಹೆಚ್ಚಿನ ಆದ್ಯತೆ ನೀಡದೇ, ಉಪವಿಭಾಗ ಮತ್ತು ಜಿಲ್ಲಾಮಟ್ಟದ ಅರಣ್ಯ ಹಕ್ಕು ಸಮಿತಿಯಲ್ಲಿ ಅಧಿಕಾರದ ದುರುಪಯೋಗ ಮತ್ತು ಅನಿಯಂತ್ರಿತ ಹಸ್ತಕ್ಷೇಪ ಉಂಟುಮಾಡಿದೆ. ಇದರಿಂದ ಹೆಚ್ಚಿನ ಅರಣ್ಯವಾಸಿಗಳು ಭೂಮಿ ಹಕ್ಕಿನಿಂದ ವಂಚಿತರಾಗಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ ಎಂಬುದಾಗಿ ಅಧ್ಯಕ್ಷ ರವೀಂದ್ರ ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.