ಶಿರಸಿ: ನಗರದ ಅರುಣೋದಯ ತರಬೇತಿ ಕೇಂದ್ರದಲ್ಲಿ, ಪ್ರಧಾನ ಮಂತ್ರಿ ಕೃಷಿ ಸಂಚಾಯಿ ಯೋಜನೆ 2.0ಯ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ಹುಲೇಕಲ್ ಜಿಲ್ಲಾ ಪಂಚಾಯತ ವ್ಯಾಪ್ತಿಯ ಮಹಿಳೆಯರಿಗೆ ಹೊಲಿಗೆ ತರಬೇತಿ ಕಾರ್ಯಕ್ರಮವನ್ನು ಕೃಷಿ ಇಲಾಖೆ, ಕುಟುಂಬ ಶಿಕ್ಷಣ ಸಂಸ್ಥೆ, ಶಿವಮೊಗ್ಗ ಹಾಗೂ ಅರುಣೋದಯ ಟ್ರಸ್ಟ, ಶಿರಸಿ ಇವರ ಸಹಯೋಗದಲ್ಲಿ ಜಂಟಿಯಾಗಿ ಆಯೋಜಿಸಿದ್ದರು.
ಜ್ಯೋತಿ ಬೆಳಗುವ ಕಾರ್ಯಕ್ರಮ ಉದ್ಘಾಟಿಸಿದ ಹುಲೇಕಲ್ ಗ್ರಾಮ ಪಂಚಾಯತ ಅಧ್ಯಕ್ಷರಾದ ಖಾಸಿಂ ಸಾಬ್ ಮಾತನಾಡುತ್ತಾ ಮಹಿಳೆಯರು ತಮ್ಮ ಬಿಡುವಿನ ವೇಳೆಯಲ್ಲಿ ಹೊಲಿಗೆ, ಕಸೂತಿ ಮುಂತಾದ ಕೌಶಲ್ಯಗಳನ್ನು ಕಲಿತು, ಸ್ವ-ಉದ್ಯೋಗ ಮಾಡುತ್ತಾ ತಮ್ಮ ಆರ್ಥಿಕ ಮಟ್ಟವನ್ನು ಸುಧಾರಿಸಬೇಕಿದೆ ಹಾಗೂ ಸರಕಾರದ ಸವಲತ್ತುಗಳನ್ನು ಸಮರ್ಥವಾಗಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ನುಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅರುಣೋದಯ ಟ್ರಸ್ಟನ ಅಧ್ಯಕ್ಷರಾದ ವಿನಾಯಕ ಶೇಟ್ ವಹಿಸಿದ್ದರು. ಮುಖ್ಯ ಅಥಿತಿಗಳಾಗಿ ಹುಲೇಕಲ್ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ಶ್ರೀಮತಿ ಬಿಬಿ ಫೌಜಿಯ, ಇಟಗುಳಿ ಗ್ರಾಮ ಪಂಚಾಯತ ಸದಸ್ಯರಾದ ಶ್ರೀಮತಿ ಗೀತಾ ಭೋವಿ, ಹಾಗೂ ಕೃಷಿ ಇಲಾಖೆಯ ಸಹಾಯಕರಾದ ಸುಧಾಕರ ನಾಯ್ಕ, ಕುಟುಂಬ ಸಂಸ್ಥೆ, ಶಿವಮೊಗ್ಗ, ಸಂಯೋಜಕರಾದ ಬಾಬು ಜಿ, ಕಿರಣಕುಮಾರ ಮತ್ತು ಸಂಪನ್ಮೂಲ ವ್ಯಕ್ತಿಗಳಾದ ಶ್ರೀಮತಿ ಸವಿತಾ ಸುಭಾಷ ಮುಂಡೂರ ಹಾಗೂ ಜಯಲಕ್ಷ್ಮಿ ಎಸ್. ತಿಪಟೂರು ಉಪಸ್ಥಿತರಿದ್ದರು. ಸುಭಾಷ ಮುಂಡೂರ ಕಾರ್ಯಕ್ರಮವನ್ನು ನಿರ್ವಹಿಸಿದರು.
21 ದಿನಗಳ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 50 ಜನ ಮಹಿಳೆಯರು ಪಾಲ್ಗೊಂಡಿದ್ದರು.