ಶಿರಸಿ: ಕಾರವಾರ ಜಿಲ್ಲಾಧಿಕಾರಿ ಕಛೇರಿ ಸಂಭಾಂಗಣದಲ್ಲಿ ನಡೆದ ಕೃಷಿ ಮತ್ತು ತೋಟಗಾರಿಕಾ ಇಲಾಖೆಗಳ ವಿವಿಧ ಕಾರ್ಯಕ್ರಮದಲ್ಲಿ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಒತ್ತು ನೀಡುವ ಬಗ್ಗೆ ಜಿಲ್ಲಾಧಿಕಾರಿಗಳು ,ಕೃಷಿ ಹಾಗೂ ತೋಟಗಾರಿಕಾ ಇಲಾಖೆಗಳ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದ ಬೆನ್ನಲ್ಲೇ , ಶಿರಸಿಗೆ ಭೆಟ್ಟಿ ನೀಡಿದ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಹಾಗೂ ಸಹಾಯಕ ಆಯುಕ್ತೆ ಕಾವ್ಯಾರಾಣಿ ,ಶಿರಸಿಯ ಎ.ಪಿ.ಎಮ್.ಸಿ ಆವಾರದಲ್ಲಿರುವ ಉತ್ತರಕನ್ನಡ ಸಾವಯವ ಒಕ್ಕೂಟದ ನೆಲಸಿರಿ ಆರ್ಗ್ಯಾನಿಕ್ ಹಬ್ ಮಾರಾಟ ಮಳಿಗೆಗೆ ಭೆಟ್ಟಿ ನೀಡಿ ವಿವಿಧ ಸಾವಯವ ಹಾಗೂ ಮೌಲ್ಯವರ್ಧಿತ ಉತ್ಪನ್ನಗಳನ್ನು ವೀಕ್ಷಿಸಿ ಮಾಹಿತಿ ಪಡೆದರು.
ನಂತರದಲ್ಲಿ ಉತ್ತರಕನ್ನಡ ಸಾವಯವ ಒಕ್ಕೂಟದ ಅಧ್ಯಕ್ಷರಾದ ವಿಶ್ವೇಶ್ವರ ಭಟ್ ಕೋಟೆಮನೆ , ಒಕ್ಕೂಟದ ನಿರ್ದೇಶಕರು ಮತ್ತು ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಲ್ಲಿ ತೊಡಗಿರುವ ಉದ್ಯಮಿಗಳೊಂದಿಗೆ ಸಂವಾದ ನಡೆಸಿದರು. ಉತ್ತರಕನ್ನಡ ಜಿಲ್ಲೆಯಲ್ಲಿ ಯಾವ ಯಾವ ಕೃಷಿ ಉತ್ಪನ್ನಗಳ ಮೌಲ್ಯವರ್ಧನೆ ಮಾಡಬಹುದು ಮತ್ತು ಆನ್ ಲೈನ್ ಮಾರುಕಟ್ಟೆಯಲ್ಲಿ ನಮ್ಮ ಜಿಲ್ಲೆಯ ಉತ್ಪನ್ನಗಳನ್ನು ದೊಡ್ಡ ಪ್ರಮಾಣದಲ್ಲಿ ಯಾವ ರೀತಿ ಮಾರುಕಟ್ಟೆ ಮಾಡಬಹುದು ಎಂಬುದರ ಕುರಿತಾಗಿ ಚರ್ಚೆ ನಡೆಸಿದರು.
ಉತ್ತರ ಕನ್ನಡ ಸಾವಯವ ಒಕ್ಕೂಟದ ಮಾರಾಟ ಮಳಿಗೆಯಲ್ಲಿ ಲಭ್ಯವಿರುವಂತಹ ಕೋಣನಕಟ್ಟೆ ಬೆಲ್ಲ, ಜೀರಿಗೆ ಮಿಡಿ ಉಪ್ಪಿನಕಾಯಿ,ಹಲಸು ಮತ್ತು ಬಾಳೆಕಾಯಿ ಹಪ್ಪಳ, ಬಾಳೆ ಹಣ್ಣಿನ ಸುಕೇಳಿ,ಹಲಸಿನ ಬಾರ್, ವ್ಯಾಕ್ಯೂಮ್ ಫ್ರೈಡ್ ಚಿಪ್ಸ ,ವಿವಿಧ ತೊಕ್ಕು, ಹಾಗೂ ಇನ್ನಿತರ ಮೌಲ್ಯವರ್ಧಿತ ಉತ್ಪನ್ನಗಳ ಕುರಿತು ಮಾಹಿತಿ ಪಡೆದರು. ಈ ರೀತಿಯ ಮೌಲ್ಯವರ್ಧಿತ ಉತ್ಪನ್ನಗಳಿಗೆ ಪ್ರೋತ್ಸಾಹ ಕೊಟ್ಟು ಮಾರುಕಟ್ಟೆ ಮಾಡಲು ಶ್ರಮಿಸುತ್ತಿರುವ ಉತ್ತರಕನ್ನಡ ಸಾವಯವ ಒಕ್ಕೂಟದ ಪ್ರಯತ್ನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕರಾದ ಶಿವಪ್ರಸಾದ ಗಾಂವಕರ್, ತೋಟಗಾರಿಕಾ ಇಲಾಖೆಯ ಉಪನಿರ್ದೇಶಕರಾದ ಬಿ.ಪಿ. ಸತೀಶ, ಕೃಷಿ ಇಲಾಖೆಯ ಉಪಕೃಷಿ ನಿರ್ದೇಶಕರಾದ ನಟರಾಜ್,ಶಿರಸಿಯ ಸಹಾಯಕ ಕೃಷಿ ನಿರ್ದೇಶಕರಾದ ಮಧುಕರ ನಾಯ್ಕ ,ಉತ್ತರಕನ್ನಡ ಸಾವಯವ ಒಕ್ಕೂಟದ ನಿರ್ದೇಶಕರಾದ ರಾಘವ ಹೆಗಡೆ ಕೊರ್ಸೆ,ನಾರಾಯಣ ಹೆಗಡ ಗಡಿಕೈ,ಯುವ ಉದ್ಯಮಿ ಪ್ರಸಾದ ಶರ್ಮಾ ಸಾಲ್ಕಣಿ, ಮಮತಾ ಭಟ್ ಶಮೇಮನೆ ಉಪಸ್ಥಿತರಿದ್ದರು. ನಂತರದಲ್ಲಿ ಕದಂಬ ಮಾರ್ಕೆಟಿಂಗ್ ಸೌಹಾರ್ದ ಸಹಕಾರಿಗೆ ಭೆಟ್ಟಿ ನೀಡಿದರು.